ಮಡಿಕೇರಿ, ನ. ೨೫: ಶಿಲಾ ಶಾಸನ ಶಾಖೆ ಹಾಗೂ ಉತ್ಖನನ ಶಾಖೆ ಮೈಸೂರು ಭಾರತ ಸರಕಾರದ ಸಹಯೋಗದಲ್ಲಿ ಮಡಿಕೇರಿಯ ಕೋಟೆಯಲ್ಲಿ ತಾ. ೧೯ರಿಂದ ಆರಂಭಗೊAಡಿದ್ದ ವಿಶ್ವ ಪರಂಪರಾ ಸಪ್ತಾಹದ ಸಮಾರೋಪ ಸಮಾರಂಭ ನಡೆಯಿತು.

ತಾ.೧೯ ರಂದು ಪುರಾತತ್ವ ಇಲಾಖೆಯ ಶಿಲ್ಪಕಲೆಗಳ ಛಾಯಚಿತ್ರ, ಕೊಡಗಿನ ಪರಂಪರೆಯ ಛಾಯಾಚಿತ್ರ, ಪುರಾತನ ವಸ್ತುಗಳ ಪ್ರದರ್ಶನ ನಡೆದವು. ತಾ.೨೦ ರಂದು ವಂದೇ ಮಾತರಂ ಮತ್ತು ಭಾರತದ ಸ್ವಾತಂತ್ರ‍್ಯ ಚಳವಳಿಯ ಕುರಿತು ರಸಪ್ರಶ್ನೆ ಸ್ಪರ್ಧೆ, ತಾ ೨೧ರಂದು ಶಾಲಾಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಕೊಡಗಿನ ಪ್ರಾದೇಶಿಕ ಇತಿಹಾಸ ಕುರಿತು ವಿಶೇಷ ಉಪನ್ಯಾಸ, ತಾ ೨೨ರಂದು ಕೊಡಗಿನ ಜಾನಪದ ಗೀತೆಯ ಕುರಿತು ವಿಶೇಷ ಕಾರ್ಯಕ್ರಮ, ವಂದೇ ಮಾತರಂ ಸಾಮೂಹಿಕ ಗಾಯನ, ಪಾರಂಪರಿಕ ನಡಿಗೆ. ತಾ. ೨೩ರಂದು ಪರಂಪರೆ ಜಾಗೃತಿ ಕುರಿತು ಸಂದರ್ಶಕರು ಮತ್ತು ಪ್ರವಾಸಿಗರೊಂದಿಗೆ ಸಂವಾದ, ತಾ. ೨೪ ರಂದು ಕೋಟೆ ಅವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಹಾಗೂ ಮಕ್ಕಳಿಗಾಗಿ ಕ್ಲೇ ಮಾಡೆಲಿಂಗ್ ಸ್ಪರ್ಧೆಗಳು ನಡೆದವು.

ತಾ. ೨೫ರಂದು ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪುರಾತತ್ವ ಇಲಾಖೆಯ ನಿವೃತ್ತ ಉಪ ಮುಖ್ಯ ಪುರಾತತ್ವ ತಜ್ಞರಾದ ಡಾ.ನಾಯಕಂಡ ಸಿ ಪ್ರಕಾಶ್ ಮಾತನಾಡಿ ಪುರಾತನ ವಸ್ತುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಬ್ದಾರಿಯಾಗಬೇಕು ಎಂದರು. ಪುರಾತತ್ವ ಇಲಾಖೆಯ ಉಪ ಮುಖ್ಯ ಪುರಾತತ್ವ ಅಭಿಯಂತರರಾದ ಗಡಮ್ ಶ್ರೀನಿವಾಸ್, ಸುನಿಲ್ ಕುಮಾರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಚೊಟ್ಟೆಯಂಡ ಸಂಜುಕಾವೇರಪ್ಪ, ಪುರಾತನ ನಾಣ್ಯ ಸಂಗ್ರಹಕ ಕೇಶವ ಮೂರ್ತಿ ಅತಿಥಿಗಳಾಗಿ ಭಾಗವಹಿಸಿದ್ದರು. ಅತಿಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ನಮೂನೆಯ ಪುರಾತನ ಕೋವಿಯನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಟ್ಟಿದ್ದ ಪುತ್ತರಿರ ಪಪ್ಪು ತಿಮ್ಮಯ್ಯ, ಪಾಸುರ ಪಪ್ಪು ಅಯ್ಯಪ್ಪ, ನೆಲ್ಲಮಕ್ಕಡ ಸೋಮಣ್ಣ, ಬೊಳ್ಳೆರ ದೀಪಕ್, ಪುರಾತನ ವಸ್ತುಗಳ ಪ್ರದರ್ಶನಕ್ಕೆ ಇಟ್ಟಿದ್ದ ಪುತ್ತರಿರ ಕರುಣ್ ಕಾಳಯ್ಯ, ಪೊನ್ನಚನ ಮಧು, ಕೊಡವ ಸಾಂಪ್ರದಾಯಿಕ ನೃತ್ಯದ ವಿಶೇಷ ಕಾರ್ಯಕ್ರಮ ನೀಡಿದ ಸಂಜು ಅವರ ಕಚ್ಚಿದುಡಿ ಕೂಟ ಮಡಿಕೇರಿ, ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟಕ್ಕೆ, ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕೇಂದ್ರೀಯ ವಿದ್ಯಾಲಯ ಹಾಗೂ ಸೆಂಟ್ ಜೋಸೆಫ್ ಮಡಿಕೇರಿಯ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

-ಕರುಣ್ ಕಾಳಯ್ಯ