ವೀರಾಜಪೇಟೆ: ವೀರಾಜಪೇಟೆಯ ತೆಲುಗರ ಬೀದಿಯಲ್ಲಿರುವ ದಕ್ಷಿಣ ಮಾರಿಯಮ್ಮ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿಯನ್ನು ಸಂಭ್ರಮದಿAದ ಆಚರಿಸಲಾಯಿತು. ತಳಿರು ತೋರಣಗಳಿಂದ ಸಿಂಗರಿಸಿದ ದೇಗುಲದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ, ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪೂಜಾ ವಿಧಿ ವಿಧಾನದಲ್ಲಿ ಪಾಲ್ಗೊಂಡಿದ್ದರು. ದೇಗುಲದ ಆವರಣದ ಸುತ್ತಲೂ ತಳಿರು, ತೋರಣ, ಹೂವಿನಿಂದ ಸಿಂಗರಿಸಲಾಗಿತ್ತು. ಸಾಲಿನಲ್ಲಿ ನಿಂತ ಭಕ್ತರು ನಾನಾ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಪುನೀತರಾದರು. ಶ್ರೀ ದೇವರಿಗೆ ವಿಶೇಷ ಪೂಜೆ, ಪುನಸ್ಕಾರ, ಅಭಿಷೇಕಗಳು, ಮಹಾ ಮಂಗಳಾರತಿ ನಡೆದ ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.
ನಗರದ ಗಡಿಯಾರ ಕಂಬದ ಬಳಿಯಿರುವ ಶ್ರೀ ಮುನೇಶ್ವರ ದೇವಸ್ಥಾನ, ಮಹಾಗಣಪತಿ ದೇವಸ್ಥಾನ, ಛತ್ರಕರೆ ಬಳಿಯಿರುವ ಶ್ರೀ ವಿರಾಂಜನೇಯ ದೇವಸ್ಥಾನ, ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಬಾಲಾಂಜನೇಯ ದೇವಸ್ಥಾನ, ಅಂಗಾಳ ಪರಮೇಶ್ವರಿ ದೇವಾಲಯ ಸೇರಿದಂತೆ ನಗರ ಮತ್ತು ಗ್ರಾಮೀಣ ಭಾಗದ ಇತರೆಡೆ ದೇವಾಲಯಗಳಲ್ಲಿ ಸುಬ್ರಹ್ಮಣ್ಯ ಷಷ್ಠಿಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ದೇವಾಲಯದ ಆಡಳಿತ ಮಂಡಳಿ ವತಿಯಿಂದ ನೆರೆದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಪಿ. ಕೃಷ್ಣ ಹಾಗೂ ಆಡಳಿತ ಮಂಡಳಿಯ ಎಲ್ಲ ಪದಾಧಿಕಾರಿಗಳು ತೆಲುಗು ಶೆಟ್ಟರ ಬೀದಿಯ ಕುಲಸ್ಥರು ಹಾಜರಿದ್ದು, ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಸಕಲ ವ್ಯವಸ್ಥೆಗಳನ್ನು ಕಲ್ಪಿಸಿದ್ದರು.ನಾಪೋಕ್ಲು: ಸಮೀಪದ ಪಾಲೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಷಷ್ಠಿ ಉತ್ಸವವನ್ನು ಆಚರಿಸಲಾಯಿತು.
ದೇವಾಲಯದಲ್ಲಿ ನಾಗನ ಪೂಜೆ, ರುದ್ರಾಭಿಷೇಕ, ಹಾಲು ಎಳನೀರು ಸೇರಿದಂತೆ ವಿವಿಧ ಅಭಿಷೇಕಗಳು ನಡೆದವು.
ಮಧ್ಯಾಹ್ನ ಮಹಾಪೂಜೆ, ತೀರ್ಥ ಪ್ರಸಾದ ವಿತರಣೆಯ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ದೇವಾಲಯದ ಪಾರುಪತ್ಯೆಗಾರ ಮನು ಟಿ.ಕೆ., ತಕ್ಕಮುಖ್ಯಸ್ಥರು, ಭಕ್ತಾದಿಗಳು ಪಾಲ್ಗೊಂಡಿದ್ದರು. - ದುಗ್ಗಳಸೋಮವಾರಪೇಟೆ: ಸಮೀಪದ ಸಿದ್ಧಲಿಂಗಪುರದ ಅರಿಶಿನಗುಪ್ಪೆ ಗ್ರಾಮದಲ್ಲಿರುವ ಶ್ರೀ ಮಂಜುನಾಥಸ್ವಾಮಿ ಹಾಗೂ ನವನಾಗನಾಥಸ್ವಾಮಿ ದೇವಾಲಯದಲ್ಲಿ ಚಂಪಾ ಷಷ್ಠಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಬೆಳಿಗ್ಗೆ ಗಣಪತಿ ಹೋಮದೊಂದಿಗೆ ಪೂಜೆಗಳು ನಡೆದವು. ನಂತರ ಶ್ರೀ ಮಂಜುನಾಥಸ್ವಾಮಿ ದೇವಾಲಯದಲ್ಲಿ ರುದ್ರಾಭಿಷೇಕ, ಪುಷ್ಪಾಲಂಕಾರ ನಂತರ ಮಹಾಮಂಗಳಾರತಿ ನೆರವೇರಿಸಲಾಯಿತು. ಕ್ಷೇತ್ರದಲ್ಲಿರುವ ನವನಾಗನಾಥ ದೇವಾಲಯದಲ್ಲಿ ನಾಗದೇವರಿಗೆ ಜಲಾಭಿಷೇಕ, ಎಳನೀರು ಅಭಿಷೇಕ, ಹಾಲಿನ ಅಭಿಷೇಕ, ಅರಿಶಿಣ ಅಭಿಷೇಕ, ತಂಬಿಲ ಸೇವೆಗಳನ್ನು ಕ್ಷೇತ್ರದ ಪ್ರಧಾನ ಅರ್ಚಕ ಜಗದೀಶ ಉಡುಪ ನೆರವೇರಿಸಿದರು. ನಂತರ ನಾಗದೇವರಿಗೆ ಬೆಳ್ಳಿಯ ಬಿಂಬವನ್ನು ಭಕ್ತಾದಿಗಳು ಸಮರ್ಪಿಸಿದರು. ಮಹಾಮಂಗಳಾರತಿಯ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಅರ್ಚಕರಾದ ವಾದಿರಾಜ್ ಭಟ್, ದೇವಾಲಯ ಸಮಿತಿ ಅಧ್ಯಕ್ಷ ಮೋಹನ್, ಮಣಿಸ್ವಾಮಿ ಸಹಕರಿಸಿದರು.ಶನಿವಾರಸಂತೆ: ಪಟ್ಟಣದ ಜನತೆ ಸುಬ್ರಹ್ಮಣ್ಯ ಷಷ್ಠಿ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಂಭ್ರಮದಿAದ ಆಚರಿಸಿದರು. ಈ ಹಬ್ಬದಲ್ಲಿ ವಿವಿಧ ಬಗೆಯ ತರಕಾರಿಗಳಿಗೆ ಪ್ರಾಮುಖ್ಯತೆ ಇದ್ದು, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಆರಾಧನೆಯೊಂದಿಗೆ ತರಕಾರಿ ಹಂಚುವ ಸಂಪ್ರದಾಯವಿದೆ. ಈ ಭಾಗದಲ್ಲಿ ಷಷ್ಠಿ ಹಬ್ಬವನ್ನು ತರಕಾರಿ ಹಬ್ಬವೆಂದೇ ಕರೆಯಲಾಗುತ್ತದೆ.
ಶನಿವಾರಸಂತೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮುಂಜಾನೆಯೇ ಮಹಿಳೆಯರು, ಮಕ್ಕಳು ವಿವಿಧ ಬಗೆಯ ತರಕಾರಿಗಳನ್ನು ಕತ್ತರಿಸಿ ತುಂಡುಗಳನ್ನಾಗಿ ಮಾಡಿ ಬಂಧು ಬಳಗದವರಿಗೆ, ಸ್ನೇಹಿತ ಮನೆಗಳಿಗೆ ತೆರಳಿ ಹಂಚಿ, ಪ್ರತಿಯಾಗಿ ಅವರು ನೀಡಿದ ತರಕಾರಿಗಳನ್ನು ತಂದು ಎಲ್ಲಾ ತರಕಾರಿಗಳನ್ನು ಹಾಕಿ ಪಲಾವ್ ಹಾಗೂ ಸಾಂಬಾರ್ ಮಾಡಿ, ಪಾಯಸದ ಜತೆ ಸಹಭೋಜನ ಸವಿದರು. ಪಟ್ಟಣದ ಪತಂಜಲಿ ಯೋಗಬಂಧು ಸಂಸ್ಥೆಯಲ್ಲಿ ಯೋಗ ಶಿಬಿರಾರ್ಥಿಗಳು ಷಷ್ಠಿ ಹಬ್ಬವನ್ನು ನೂತನವಾಗಿ ಆಚರಿಸಿದರು. ಯೋಗ ಗುರು ಎ.ಡಿ. ಮೋಹನ್ ಕುಮಾರ್ ಹಾಗೂ ಶಿಬಿರಾರ್ಥಿಗಳು ವಿವಿಧ ಬಗೆಯ ತರಕಾರಿಗಳನ್ನು ತಂದಿದ್ದು ಎಲ್ಲವನ್ನು ಕತ್ತರಿಸಿ ತುಂಡುಗಳನ್ನಾಗಿಸಿ ವಿನಿಮಯ ಮಾಡಿಕೊಂಡು ಪರಸ್ಪರ ಶುಭಾಶಯಗಳನ್ನು ಕೋರಿದರು. ಶ್ರೀರಾಮ ಭಜನಾ ಮಂಡಳಿಯ ಬಾಲಕೃಷ್ಣ ಆಚಾರ್ಯ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಪಟ್ಟಣದ ಶ್ರೀ ಬೀರಲಿಂಗೇಶ್ವರ, ಶ್ರೀ ಚಂದ್ರಮೌಳೇಶ್ವರ-ಪಾರ್ವತಿ-ಗಣಪತಿ ದೇವಸ್ಥಾನ, ಶ್ರೀ ವಿಜಯ ವಿನಾಯಕ ದೇವಸ್ಥಾನ, ಶ್ರೀರಾಮ ಮಂದಿರದಲ್ಲೂ ಷಷ್ಠಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ನಡೆಯಿತು. - ನಯನತಾರಾವೀರಾಜಪೇಟೆ: ನಗರದ ಶಿವಕೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣು ಮೂರ್ತಿ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಶ್ರೀ ನಾಗದೇವರ ಷಷ್ಠಿ ಪೂಜೆ ಶ್ರದ್ಧಾಭಕ್ತಿಯಿಂದ ನಡೆದವು.
ಪೂಜೆಯ ಅಂಗವಾಗಿ ನಾಗನಿಗೆ ಹಾಲಿನ ಅಭಿಷೇಕ ಬಳಿಕ ವಿಶೇಷ ಪೂಜೆಗಳು ನಡೆಯಿತು. ನಾಗತಂಬಿಲ ಸೇವೆ, ಕ್ಷೀರಾಭಿಷೇಕ, ಸೀಯಾಳ ಅಭಿಷೇಕ, ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆಯೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಬಳಿಕ ಅನ್ನದಾನ ಏರ್ಪಡಿಸಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು ಇದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯ ವಿವಿಧ ದೇವಾಲಯಗಳಲ್ಲಿ ಶ್ರದ್ಧಾಭಕ್ತಿಯಿಂದ ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ವಿವಿಧ ಪೂಜೆ, ಆರಾಧನೆ ನಡೆಯಿತು.
* ಪನ್ಯದ ಮಳ್ಳೂರು ಬೆಳ್ಳಾರಿಕಮ್ಮ ದೇವಾಲಯದಲ್ಲಿ ವಿಶೇಷ ಪೂಜೆಗಳು, ನಾಗ ಪೂಜೆ ಅಭಿಷೇಕ ಪೂಜೆ, ಅರಶಿಣ, ಕುಂಕುಮಾರ್ಚನೆ ಪೂಜೆಯನ್ನು ಪ್ರಧಾನ ಅರ್ಚಕ ಮಂಜುನಾಥ್ ಉಡುಪ ನೆರವೇರಿಸಿದರು.
ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ನಂತರ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ದೇವಾಲಯ ಸಮಿತಿಯ ಪಟ್ಟೆಮನೆ ಉದಯಕುಮಾರ್, ಮಾಗಲು ವಸಂತ, ಪಟ್ಟೆಮನೆ ಅನಿಲ್ ಕುಮಾರ್ ಸೇರಿದಂತೆ ಇತರರು ಇದ್ದರು.
* ಕೆದಕಲ್ ಭದ್ರಕಾಳಿ ದೇವಾಲಯದಲ್ಲಿ ಬೆಳಗಿನಿಂದಲೇ ಭಕ್ತಾದಿಗಳು, ಅಭಿಷೇಕ, ಹರಕೆ ಒಪ್ಪಿಸುವುದು, ವಿಶೇಷ ಪೂಜೆ ಮಾಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಮಧ್ಯಾಹ್ನ ದೀಪಾರಾಧನೆ, ಮಹಾಪೂಜೆ ನೆರವೇರಿತು. ಸುಂಟಿಕೊಪ್ಪ, ಬೋಯಿಕೇರಿ, ಕೆದಕಲ್, ಮಡಿಕೇರಿ, ಹಾಲೇರಿ ಸೇರಿದಂತೆ ಇತರೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದರು. ನೆರೆದವರಿಗೆ ಅನ್ನದಾನ ಏರ್ಪಡಿಸಲಾಗಿತ್ತು.
* ಸುಂಟಿಕೊಪ್ಪ ಮಧುರಮ್ಮ ಬಡಾವಣೆಯಲ್ಲಿ ನಾಗದೇವರ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ನಾಗದೇವರ ೩೨ನೇ ವರ್ಷದ ಪೂಜಾ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನಡೆಯಿತು.
ಬೆಳಿಗ್ಗೆ ನಾಗ ದೇವರಿಗೆ ಕ್ಷೀರಾಭಿಷೇಕ, ಮಧ್ಯಾಹ್ನ ವಿವಿಧ ಬಗೆಯ ಹೂವಿನ ಅಲಂಕಾರ ಪೂಜೆ ನಡೆದವು. ಮಧ್ಯಾಹ್ನದ ನಂತರ ಮಹಾಪೂಜೆ, ಆರಾಧನಾ ಪೂಜೆ ಹಾಗೂ ಮಹಾಮಂಗಳಾರತಿ ನಡೆಯಿತು. ನಂತರ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ದೇವಾಲಯದ ಎ.ಎಂ. ರಘು, ರಾಣಿ, ಧನು ಕಾವೇರಪ್ಪ ಮತ್ತಿತರರು ಇದ್ದರು.
* ಇಲ್ಲಿನ ಚಾಮುಂಡೇಶ್ವರಿ ಮತ್ತು ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ನಾಗ ದೇವರಿಗೆ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ, ಅಲಂಕಾರ ಮತ್ತು ದೀಪರಾಧನೆ ನಡೆಯಿತು.
* ಇಲ್ಲಿನ ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಭವ ಶಕ್ತಿ ಗಣಪತಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ ನಾಗದೇವರಿಗೆ ಷಷ್ಠಿ ಅಂಗವಾಗಿ ವಿಶೇಷ ಅಭಿಷೇಕ ಪೂಜೆ ನೆರವೇರಿಸಲಾಯಿತು.
ಟ್ರಸ್ಟಿ ಎ. ಲೋಕೇಶ್ ಕುಮಾರ್, ದೇವಾಲಯ ಸಮಿತಿಯ ಸದಾಶಿವ ರೈ, ಸುನಿಲ್ ಕುಮಾರ್, ದಿವಾಕರ್, ಮಂಜುನಾಥ್ ಇತರರು ಇದ್ದರು.
- ರಾಜು ರೈಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದ ನಾಗರಬನದಲ್ಲಿ ಸುಬ್ರಹ್ಮಣ್ಯ ಸ್ವಾಮಿ ಷಷ್ಠಿ ಪೂಜೆ ಅದ್ದೂರಿಯಾಗಿ ಪೂಜೆ ನೆರವೇರಿಸಲಾಯಿತು.
ಪೂಜಾ ಕಾರ್ಯವನ್ನು ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅರ್ಚಕರಾದ ಸೋಮಶೇಖರ್ ಮತ್ತು ಅನಂತಪದ್ಮನಾಭ ಭಟ್ ನೆರವೇರಿಸಿದರು. ಗ್ರಾಮದ ನೂರಾರು ಮಂದಿ ಭಾಗವಹಿಸಿದ್ದರು. ಭಕ್ತರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯಿತು. - ಕುಡೆಕಲ್ ಗಣೇಶ್ವೀರಾಜಪೇಟೆ: ವೀರಾಜಪೇಟೆಯ ಮೀನುಪೇಟೆಯ ಕಂಚಿ ಕಾಮಾಕ್ಷಿ ಅಮ್ಮನವರ ದೇವಸ್ಥಾನದ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಷಷ್ಠಿ ಉತ್ಸವ ವಿಜೃಂಭಣೆಯಿAದ ನಡೆಯಿತು. ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿದ್ದ ಭಕ್ತರು, ನಾಗದೇವರಿಗೆ ಹಾಲು ಅಭಿಷೇಕ ಮಾಡಿ ನೈವೇದ್ಯ ಸಮರ್ಪಣೆ ಮಾಡಿದರು.
ಷಷ್ಠಿ ಪ್ರಯುಕ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಜಿ. ಮೋಹನ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.ಕಣಿವೆ: ದೇವಾಲಯದ ಮಾರ್ಗದಲ್ಲಿ ದೇವರ ಚಿತ್ರ ಭಾವಚಿತ್ರ ಹೊತ್ತು, ಕೈಯಲ್ಲೊಂದು ಚಾವಟಿ ಹಿಡಿದು ನಿಂತ ಈ ದೇವ ಮಾನವ ದೇವಾಲಯಕ್ಕೆ ಹೋಗುವವರ ತಲೆ ಮೇಲೆ ಕೈಇಟ್ಟು ದೇವರಿಗೆ ದುಡ್ಡು ಹಾಕು. ನಿನಗೆ ಪುಣ್ಯ ಬರುತ್ತೆ. ಶಾಂತಿ ಪ್ರಾಪ್ತವಾಗುತ್ತೆ ಎಂದೆಲ್ಲಾ ಹೇಳಿಕೊಂಡು ಬಲವಂತದಿ ಹಣ ಪೀಕುತ್ತಿದ್ದ ಚಿತ್ರಣ ಕಂಡು ಬಂತು.
ಜಾತ್ರೆ ಎಂದ ಮೇಲೆ ಇದು ಇದ್ದದ್ದೇ ಅಲ್ಲವೇ.. ಅದಕ್ಕೆ ಹೇಳೋದು ಎಲ್ಲರೂ ಮಾಡೋದು ಹೊಟ್ಟೆಗಾಗಿ....!ಸೋಮವಾರಪೇಟೆ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯ
ಸೋಮವಾರಪೇಟೆ: ಶ್ರೀ ಮುತ್ತಪ್ಪ ಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಚಂಪಾ ಷಷ್ಠಿಯ ಅಂಗವಾಗಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯದ ಅರ್ಚಕ ಮಣಿಕಂಠನ್ ನಂಬೂದರಿ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ನಾಗದೇವರಿಗೆ ಹಾಲಿನ ಅಭಿಷೇಕ, ಎಳನೀರು ಅಭಿಷೇಕ, ಅರಶಿನ ಅಭಿಷೇಕ, ಪುಷ್ಪಾರ್ಚನೆ ಮಾಡಲಾಯಿತು. ದೇವಾಲಯದ ಅಧ್ಯಕ್ಷ ವಿನೋದ್ ಕುಮಾರ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಯರ್, ಉಪಾಧ್ಯಕ್ಷ ರಾಜೇಂದ್ರನ್ ಮತ್ತು ಆಡಳಿತ ಮಂಡಳಿಯ ಸದಸ್ಯರು ಈ ಸಂದರ್ಭ ಇದ್ದರು. - ವಿಜಯ್ಕಣಿವೆ: ಹಿಂದೆಲ್ಲಾ ಸಾಮಾನ್ಯವಾಗಿ ಯಾವುದೇ ಹಬ್ಬ - ಹರಿದಿನ, ಜಾತ್ರೆ, ರಥೋತ್ಸವಗಳು ಎಂದರೆ ಅಲ್ಲಿ ಭಾಗಿಯಾಗುವ ಹೆಣ್ಣು ಮಕ್ಕಳು ಹಾಗೂ ಮುತ್ತೆöÊದೆಯರು ಬಳೆಗಾರರನ್ನು ಹುಡುಕಿ ಬಳೆ ತೊಡಿಸಿಕೊಳ್ಳುತ್ತಿದ್ದರು. ಆದರೆ, ಬೆರಳ ತುದಿಯಲ್ಲಿ ಪ್ರಪಂಚ ನೋಡುವ ವೈಜ್ಞಾನಿಕತೆ ಬಂದೊಡನೆ ಬಳೆ ತೊಡುವ ಸಂಸ್ಕೃತಿ ಹಳತಾಗುತ್ತಿದೆ. ಬಳೆಗಳನ್ನು ಹೊತ್ತು ತರುವ ಬಳೆಗಾರರು ತಂದ ಬಳೆಗಳನ್ನು ಬಂದ ದಾರಿಗೆ ಸುಂಕವಿಲ್ಲದAತೆ ಮರಳುವ ದುಸ್ಥಿತಿ ಎದುರಾಗಿದೆ.
ಕೂಡಿಗೆಯ ರಥೋತ್ಸವದ ನಿಮಿತ್ತ ಸೇರಿದ್ದ ಜಾತ್ರೆಯಲ್ಲಿ ಬಳೆಗಾರರ ಮಳಿಗೆಗಳ ಬಳಿ ಬರುತ್ತಿದ್ದ ಹೆಂಗಳೆಯರು ಬಳೆ ನೋಡಿ ಮುಂದೆ ಸಾಗುತ್ತಿದ್ದರೇ ವಿನಃ ಹೊಸ ಬಳೆ ತೊಡದೇ ಸಾಗುತ್ತಿದ್ದರು.
ಇಂತಹ ಸ್ಥಿತಿಯಲ್ಲಿ ಬಳೆಗಳನ್ನು ನೋಡುತ್ತಿದ್ದವರ ನಡುವೆ ಬಳೆ ತೊಡುವವರನ್ನು ಬಳೆಗಾರರು ನೋಡಿ ನಿರಾಶೆಯಾಗುತ್ತಿದ್ದುದು ಕಂಡು ಬಂತು...!ಕೂಡಿಗೆ: ಕೂಡಿಗೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವದ ಮರುದಿನ ನಡೆಯುವ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅವಿಭೃತೋತ್ಸವ ಪೂಜಾ ಕಾರ್ಯಕ್ರಮ ವಿಜೃಂಭಣೆಯಿAದ ನಡೆಯಿತು.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹವನ್ನು ಕಾವೇರಿ ನದಿ ತೀರ್ಥ ಸ್ನಾನದೊಂದಿಗೆ ಗಂಗಾ ಪೂಜೆ ನಡೆಸಿ ಮೆರವಣಿಗೆ ಮೂಲಕ ದೇವಾಲಯಕ್ಕೆ ತರಲಾಯಿತು. ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಂತರ ರಥೋತ್ಸವದ ಸಮಾರೋಪ ಸಮಾರಂಭ ದೇವಾಲಯದ ಆವರಣದಲ್ಲಿ ನಡೆಯಿತು.
ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಯು. ಸೋಮಯ್ಯ ಅಧ್ಯಕ್ಷತೆಯಲ್ಲಿ ಸಮಾರಂಭ ಜರುಗಿತು. ಈ ಸಂದರ್ಭ ಟಾಟಾ ಕಾಫಿ ಕೇಂದ್ರದ ಸೀನಿಯರ್ ಮ್ಯಾನೇಜರ್ ನವೀನ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಮಾಡ್ಲಿಗೌಡ, ಶ್ರೀ ಸತ್ಯನಾರಾಯಣ ವ್ರತಾಚರಣ ಸಮಿತಿ ಅಧ್ಯಕ್ಷ ಗುರು, ಖಜಾಂಚಿ ಧರ್ಮ, ಸಮಿತಿಯ ಪದಾಧಿಕಾರಿಗಳು, ದೇವಸ್ಥಾನ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗದವರು, ಭಕ್ತರು ಹಾಜರಿದ್ದರು.ಶ್ರೀ ಅಂಗಾಳ ಪರಮೇಶ್ವರಿ ದೇವಾಲಯ
ವೀರಾಜಪೇಟೆ: ನಗರದ ತೆಲುಗರ ಬೀದಿಯಲ್ಲಿರುವ ಶ್ರೀ ಅಂಗಾಳ ಪರಮೇಶ್ವರಿ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ನಾಗದೇವರ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಪೂಜೆಯ ಅಂಗವಾಗಿ ದೇವರನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ನಾಗನ ರೂಪ ಹೋಲುವಂತೆ ದೇವರ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು. ದೇವರಿಗೆ ಹಾಲಿನ ಅಭಿಷೇಕ, ವಿಶೇಷ ಪೂಜೆಗಳು ನಡೆದವು.
ತಂಬಿಲ ಸೇವೆ, ಕ್ಷೀರಾಭಿಷೇಕ, ಕುಂಕುಮಾರ್ಚನೆ ಮತ್ತು ಪುಷ್ಪಾರ್ಚನೆಯೊಂದಿಗೆ ಮಹಾ ಮಂಗಳಾರತಿ ನೆರವೇರಿಸಲಾಯಿತು. ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.ಶ್ರೀ ಗೌರಿಶಂಕರ ದೇವಾಲಯ
ಮಡಿಕೇರಿ: ಮಡಿಕೇರಿ ಸಮೀಪದ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಪೂಜಾ ಕಾರ್ಯಕ್ರಮ ನಡೆಯಿತು. ಪೂಜಾ ಕೈಂಕರ್ಯವನ್ನು ದೇವಾಲಯದ ಅರ್ಚಕ ಕೃಷ್ಣಭಟ್ ಹಾಗೂ ರಾಧಾಕೃಷ್ಣ ಭಟ್ ನೆರವೇರಿಸಿದರು.
ಈ ಸಂದರ್ಭ ಕಾಣಿಕೆ ಸೇವೆಗೆ ನೂತನವಾಗಿ ನಿರ್ಮಿಸಲಾದ ಭಂಡಾರ ಡಬ್ಬಕ್ಕೆ ಪೂಜೆ ಸಲ್ಲಿಸಿ ಭಕ್ತರ ಕಾಣಿಕೆ ಸೇವೆಗೆ ಸಮರ್ಪಣೆ ಮಾಡಲಾಯಿತು.
ಅನ್ನಸಂತರ್ಪಣೆ ನಡೆಯಿತು. ದೇವಾಲಯ ಸಮಿತಿ ಅಧ್ಯಕ್ಷ ಕೆ.ಕೆ. ಪೂರ್ಣಯ್ಯ ಹಾಗೂ ಸಮಿತಿಯ ಪದಾಧಿಕಾರಿಗಳು ಹಾಗೂ ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.