ಸೋಮವಾರಪೇಟೆ, ನ.೨೬: ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಕೊಡಗು ಜಿಲ್ಲಾ ಘಟಕ ಹಾಗೂ ಮಹಾಸಭಾದ ಸೋಮವಾರಪೇಟೆ ತಾಲೂಕು ಘಟಕ ಹಾಗೂ ಜಿಲ್ಲಾ ಯುವ ಘಟಕದ ವತಿಯಿಂದ ತಾಲೂಕಿನ ಗೌಡಳ್ಳಿ ಬಿ.ಜಿ.ಎಸ್.ವಿದ್ಯಾಸಂಸ್ಥೆಯ ಆವರಣದಲ್ಲಿ ಬಸವಣ್ಣ ನವರ ಜಯಂತಿ, ಹಾನಗಲ್ ಕುಮಾರಸ್ವಾಮಿ ಜಯಂತಿ, ಡಾ. ಶಿವಕುಮಾರ ಸ್ವಾಮೀಜಿ ಹಾಗೂ ರೇಣುಕಾಚಾರ್ಯ ಜಯಂತಿ ಅಂಗವಾಗಿ ಧಾರ್ಮಿಕ ಸಭೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಹಕಾರಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಬಸವಣ್ಣನ ಅನುಯಾಯಿಗಳಾದ ನಾವು ಸಮಾಜ ಮುಖಿ ಚಿಂತನೆಗಳನ್ನು ಅಳವಡಿಸಿಕೊಂಡು ಧರ್ಮ ಮಾರ್ಗದಲ್ಲಿ ನಡೆಯುವ ಮೂಲಕ ಇತರರಿಗೆ ಮಾದರಿಯಾಗಿ ಬದುಕಬೇಕು ಎಂದರು.

ಕಲುಷಿತಗೊಳ್ಳುತ್ತಿರುವ ಸಾಮಾಜಿಕ ಬದುಕನ್ನು ಉತ್ತಮ ಪಡಿಸಿಕೊಳ್ಳಲು ಪ್ರತಿಯೊಬ್ಬರೂ ಬಸವಾದಿ ಶರಣರ ಜೀವನ ಮತ್ತು ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವೀರಶೈವ- ಲಿಂಗಾಯತ ಜಿಲ್ಲಾ ಮಹಾಸಭಾದ ವತಿಯಿಂದ ಕುಶಾಲನಗರದಲ್ಲಿ ನಿರ್ಮಿಸಲು ದ್ದೇಶಿರುವ ಸಮಾಜದ ‘ಬಸವ ಭವನ’ ಕಟ್ಟಡ ನಿರ್ಮಾಣಕ್ಕೆ ತಮ್ಮ ಶಾಸಕರ ಅನುದಾನದಲ್ಲಿ ರೂ. ೧೦ ಲಕ್ಷ ಅನುದಾನವನ್ನು ಒದಗಿಸುವುದಾಗಿ ಶಾಸಕ ಡಾ ಮಂತರ್ ಗೌಡ ಭರವಸೆ ನೀಡಿದರು. ಧಾರ್ಮಿಕ ಸಭೆಯಲ್ಲಿ ಧರ್ಮ ಮತ್ತು ಸಮಾಜದ ಕುರಿತು ಆಶಯ ಭಾಷಣ ಮಾಡಿದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಸಮಾನತೆ ಸಾರಿದ ಶರಣರ ಚಿಂತನೆಗಳಿಗೆ ಸಮನವಾದ ಶಕ್ತಿ ಇಲ್ಲ. ಎಲ್ಲ ಕಾಲಕ್ಕೂ ಶರಣರ ಚಿಂತನೆಗಳು ಅನ್ವಯ­ವಾಗುವುದು ಶರಣ ತತ್ವಗಳ ಚಿಂತನೆ­ಯ ವಿಶೇಷತೆ ಎಂದು ಹೇಳಿದರು.

“ನುಡಿದಂತೆ ನಡೆ- ನಡೆದಂತೆ ನುಡಿ” ಎಂದು ತಿಳಿಸುವ ಶರಣರ ವಚನಗಳು, ಕಾಯಕ, ದಾಸೋಹ ಮತ್ತು ಪ್ರಸಾದ ಸಂಸ್ಕೃತಿಯನ್ನು ಸಾರುತ್ತಿವೆ. ನಮ್ಮನ್ನು ನಾವು ತಿದ್ದಿಕೊಳ್ಳಲು ಸಹಕಾರಿಯಾಗಿವೆ ಎಂದರು.

ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಸಚ್ಚಿದಾನಂದ ಮೂರ್ತಿ, ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಭ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಲ್ಲಹಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ತೊರೆನೂರು ವಿರಕ್ತ ಮಠದ

೪ಏಳನೇ ಪುಟಕ್ಕೆ (ಮೊದಲ ಪುಟದಿಂದ)

ಮಲ್ಲೇಶ ಸ್ವಾಮೀಜಿ, ವಾಣಿಜ್ಯ ಮತ್ತು ಕೈಗಾರಿಕಾ ಘಟಕದ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ಅವರುಗಳು ಉಪಸ್ಥಿತರಿದ್ದು, ಮಾತನಾಡಿದರು.

ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ. ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಟಿ.ಎಸ್. ಶಾಂಭಶಿವಮೂರ್ತಿ, ಕೋಶಾಧಿಕಾರಿ ಎಚ್.ಪಿ. ಉದಯ್ ಕುಮಾರ್, ಉಪಾಧ್ಯಕ್ಷೆ ಡಿ.ಜೆ. ರಶ್ಮಿ, ಪ್ರವೀಣ್, ನಿರ್ದೇಶಕ ಬಾಲಶಂಕರ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಪಿ. ಆದರ್ಶ್, ಕಾರ್ಯದರ್ಶಿ ಎಂ.ಎನ್. ಚಂದ್ರಶೇಖರ್, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಎಚ್.ಎಂ. ಮಧುಸೂದನ್, ಕಟ್ಟಡ ದಾನಿ, ನಿವೃತ್ತ ಕಂದಾಯಾಧಿಕಾರಿ ಎಂ.ಬಿ. ಬಸವರಾಜ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೋಕ್ಷಿಕ್ ರಾಜ್, ಪದಾಧಿಕಾರಿಗಳಾದ ಶಿವಾನಂದ್, ಭರತ್, ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಉಷಾರಾಣಿ ವಂದಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಪ್ರಭಾಕರ್ ಶಿಶಿಲ ಅವರು ದೊಡ್ಡರಾಜೇಂದ್ರ ಅವರ ಕುರಿತು ಬರೆದ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ವೀರಶೈವ ಸಮಾಜದವರಿಗೆ ಆಯೋಜಿಸಿದ್ದ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.