ಸೋಮವಾರಪೇಟೆ, ನ. ೨೬: ರಾಜ್ಯದಲ್ಲಿ ಮೊದಲು ಕೊಡಗಿನ ಸಿ ಮತ್ತು ಡಿ ಜಾಗದ ಸಮಸ್ಯೆಗಳ ಪರಿಹಾರಕ್ಕೆ ಅನುಪಾಲನ ವರದಿ ನೀಡಲು ಸರ್ಕಾರ ವಿಶೇಷ ಸಮಿತಿ ರಚನೆ ಮಾಡಿರುವುದು ಶ್ಲಾಘನೀಯವಾಗಿದ್ದು, ಈ ಸಮಿತಿ ವಸ್ತುನಿಷ್ಠ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳಿ, ೨೦೨೪ ಜನವರಿಯಿಂದಲೇ ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯು ಹಂತ ಹಂತವಾಗಿ ಹೋರಾಟ ನಡೆಸುತ್ತಾ ಸರ್ಕಾರದ ಗಮನ ಸೆಳೆಯಲು ಯಶಸ್ವಿಯಾಗಿದೆ ಎಂದರು.

ಹಿರಿಯ ಅನುಭವಿ ಮಾರ್ಗದರ್ಶಕರು ಮತ್ತು ನುರಿತ ಕಾನೂನು ಸಲಹೆಗಾರರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ತಹಶೀಲ್ದಾರ್, ಅರಣ್ಯ ಇಲಾಖೆ, ಕೊಡಗು ಜಿಲ್ಲಾಧಿಕಾರಿ, ಎಫ್‌ಎಸ್‌ಒ ರೇಣುಕಾಂಬ, ರಾಜ್ಯ ಅರಣ್ಯ ಸಂರಕ್ಷಣಾಧಿಕಾರಿ ದೀಕ್ಷಿತ್, ಕಂದಾಯ ಇಲಾಖೆ ಆಯುಕ್ತ ರಾಜೇಂದ್ರ ಕುಮಾರ್ ಕಟಾರಿಯ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರೊಂದಿಗೆ ಹಲವು ಬಾರಿ ಸಭೆ ನಡೆಸಿ, ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೊಡಗಿನಲ್ಲಿ ರೈತರು ಸಾಗುವಳಿ ಮಾಡಿಕೊಂಡಿರುವ ಜಮೀನಿನ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡು ಹುಡುಕುವ ನಿಟ್ಟಿನಲ್ಲಿ ಗಮನ ಸೆಳೆಯಲಾಗಿತ್ತು ಎಂದು ತಿಳಿಸಿದರು.

ಮಡಿಕೇರಿ ಶಾಸಕರು ಈ ಬಗ್ಗೆ ಮುತುವರ್ಜಿ ವಹಿಸಿ ಸದನದಲ್ಲಿ ಕೊಡಗಿನ ಜಮೀನಿನ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಕರ್ನಾಟಕ ರಾಜ್ಯ ಅರ್ಜಿ ಸಮಿತಿಯ ಸದಸ್ಯರು ಆಗಿರುವ ಶಾಸಕರು ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯು ಅರ್ಜಿ ಸಮಿತಿಗೆ ನೀಡಿದ ಪತ್ರಕ್ಕೆ ಸ್ಪಂದಿಸಿ, ವೀರಾಜಪೇಟೆ ಶಾಸಕರಾದ ಎ.ಎಸ್. ಪೊನ್ನಣ್ಣ ಅವರನ್ನು ಜೊತೆಯಲ್ಲಿ ಸೇರಿಸಿಕೊಂಡು ಕಂದಾಯ ಸಚಿವರು, ಅರಣ್ಯ ಸಚಿವರು, ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಕೊಡಗಿನ ರೈತರು ಅನುಭವಿಸುತ್ತಿರುವ ಜಮೀನು ಸಮಸ್ಯೆಗಳ ಪರಿಹಾರಕ್ಕೆ ಮೊದಲ ಹಂತದಲ್ಲಿ ಸಮಿತಿ ರಚಿಸಿ ಅನುಪಾಲನ ವರದಿ ಪಡೆಯಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಕೊಡಗು ಜಿಲ್ಲೆಗೆ ಪ್ರಾಯೋಗಿಕವಾಗಿ ಅಧಿಕಾರೇತರ ನಿವೃತ್ತ ಐಎಎಸ್, ನಿವೃತ್ತ ಹೆಚ್ಚುವರಿ ಅಡ್ವೋಕೇಟ್ ಜನರಲ್, ನಿವೃತ್ತ ಡಿಸಿಎಫ್, ನಿವೃತ್ತ ತಹಸೀಲ್ದಾರ್‌ರನ್ನು ಒಳಗೊಂಡAತೆ ಸಮಿತಿಯನ್ನು ರಚಿಸಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳ ನಡುವಿನ ಸಮಸ್ಯೆಗಳು ಮತ್ತು ವಸ್ತುಸ್ಥಿತಿ ಅಧ್ಯಯನ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವ ಸಲಹಾತ್ಮಕ ಅಂಶಗಳೊAದಿಗೆ ಆರು ತಿಂಗಳೊಳಗೆ ವರದಿ ನೀಡಲು ಸೂಚಿಸಲಾಗಿದ್ದು, ರೈತರು ತಮ್ಮ ಸಮಸ್ಯೆಗಳನ್ನು ಸಮಿತಿಗೆ ತಿಳಿಸುವ ಅವಕಾಶವಿದೆ ಎಂದು ಹೇಳಿದರು.

೧೯೭೭ ರಿಂದ ಸರ್ಕಾರದ ಕೆಲವು ಅವೈಜ್ಞಾನಿಕ ಮತ್ತು ಗೊಂದಲದ ಆದೇಶಗಳಿಂದ ರೈತರು ಹಲವು ಸಮಸ್ಯೆಗಳನ್ನು ಅನುಭವಿಸುವಂತಾಗಿದ್ದು, ಸರಿಪಡಿಸುವ ನಿಟ್ಟಿನಲ್ಲಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಪಾರದರ್ಶಕವಾಗಿ ಸಲಹಾತ್ಮಕ ವರದಿಯನ್ನು ಸರ್ಕಾರ ನಿಗದಿಪಡಿಸಿದ ಸಮಯದಲ್ಲಿ ನೀಡಬೇಕು ಎಂದು ಅರುಣ್ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಖಜಾಂಚಿ ತ್ರಿಶೂಲ್ ಕಾರ್ಯಪ್ಪ, ಪದಾಧಿಕಾರಿಗಳಾದ ಡಿ.ಎ. ಉದಯ್, ಕೆ.ಎ. ಪ್ರಕಾಶ್ ಇದ್ದರು.