ಮಡಿಕೇರಿ, ನ. ೨೬: ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಜಾರಿಗೊಳಿಸಿದೆ ಎಂದು ಆರೋಪಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಪ್ರಮುಖರು ನಗರದಲ್ಲಿ ಪ್ರತಿಭಟನೆ ನಡೆಸಿ ಸರಕಾರದ ಆದೇಶ ಪ್ರತಿಯನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಇಂದಿರಾ ಗಾಂಧಿ ವೃತ್ತದಲ್ಲಿ ಜಮಾಯಿಸಿದ ಸಿಐಟಿಯು ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಸಂಹಿತೆ ಹಿಂಪಡೆಯುವAತೆ ಒತ್ತಾಯಿಸಿದರು.
ಸಿಐಟಿಯು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಭರತ್ ಮಾತನಾಡಿ, ಕಾರ್ಮಿಕ ವಿರೋಧಿಯಾದ ಕಾರ್ಮಿಕ ಸಂಹಿತೆಗಳನ್ನು ಏಕಪಕ್ಷೀಯವಾಗಿ ಜಾರಿಗೊಳಿಸಿರುವುದು ಖಂಡನೀಯ. ಇದು ರಾಷ್ಟçದ ದುಡಿಯುವ ಜನರ ವಿರುದ್ಧ ಕೇಂದ್ರ ಸರಕಾರ ತೆಗೆದುಕೊಂಡಿರುವ ಅಮಾನವೀಯ ಕ್ರಮವಾಗಿದೆ ಎಂದು ಆರೋಪಿಸಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಎ.ಸಿ. ಸಾಬು ಮಾತನಾಡಿ, ನೂತನ ಕಾರ್ಮಿಕ ಸಂಹಿತೆಗಳ ಮೂಲಕ ಕಾರ್ಮಿಕರ ದುಡಿಯುವ ಅವಧಿಯನ್ನು ಹನ್ನೆರಡು ಗಂಟೆಗಳಿಗೆ ಹೆಚ್ಚಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದು ಕೇವಲ ಕಾರ್ಮಿಕರಿಗಷ್ಟೆ ಅಲ್ಲ, ಬಿಸಿಯೂಟ ತಯಾರಕರು, ಅಂಗನವಾಡಿ ನೌಕರರಿಗೂ ಸಂಬಧಿಸಿದ್ದಾಗಿದೆ. ಇಂತಹ ಕಾನೂನುಗಳ ಮೂಲಕ ಕೇಂದ್ರ ಸರಕಾರ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳಲು ಮುಂದಾಗಿದೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಎ.ಸಿ. ಸಾಬು, ಜಿಲ್ಲಾ ಖಜಾಂಜಿ ಎನ್.ಡಿ. ಕುಟ್ಟಪ್ಪನ್ ಉಪಾಧ್ಯಕ್ಷರುಗಳಾದ ಹರಿದಾಸ್, ಕುಸುಮ, ಉಪ ಕಾರ್ಯದರ್ಶಿ ಸಾಜಿ ರಮೇಶ್, ಪ್ರಮುಖರಾದ ಜಾನಕಿ, ರಜಿನಿ ರೈತ ಸಂಘದ ಮುಖಂಡರುಗಳು ಟಿ.ಟಿ. ಉದಯ್ ಕುಮಾರ್, ಅಮಿತ್, ಹಮಾಲಿ ಕಾರ್ಮಿಕ ಸಂಘದ ಮುಖಂಡ ಗಾಲಿಸಾಬ್ ಗಿರೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.