ಪಳೆಯಂಡ ಪಾರ್ಥ ಚಿಣ್ಣಪ್ಪ
ವೀರಾಜಪೇಟೆ, ನ. ೨೭: ಪುರಾತನ ಇತಿಹಾಸ ಇರುವ ಪುರಸಭೆಯ ಸುಸಜ್ಜಿತವಾದ ಪುರಭವನ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕಟ್ಟಡಗಳನ್ನು ನಿರ್ಮಾಣ ಮಾಡುವಾಗ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ದಿ ಕಾರ್ಯಗಳನ್ನು ನಡೆಸಬೇಕಾಗುತ್ತದೆ. ಕೆಲವರ ಸ್ವಾರ್ಥಕ್ಕೆ, ಲಾಲಸೆಗೆ ಕಚೇರಿ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಸ್ಥಳಾವಕಾಶ ಇಲ್ಲದ ಹಳೆ ಪುರಭವನದ ಜಾಗದಲ್ಲಿಯೇ ನೂತನ ಕಟ್ಟಡ ಯಾಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಅವರು ಅಭಿವೃದ್ಧಿ ದೃಷ್ಠಿಯಿಂದ ೧೯೩೨ರ ಬ್ರಿಟಿಷರ ಕಾಲದಲ್ಲಿ ೧೫.೨೫ ಸೆಂಟ್ ಜಾಗದಲ್ಲಿ ನಿರ್ಮಾಣಗೊಂಡಿರುವ ಹಾಲಿ ಪುರಭವನಕ್ಕೆ ರೂ. ೭.೫೦ ಕೋಟಿ ಅನುದಾನವನ್ನು ತಂದಿರುವುದು ಸಂತಸ. ಆದರೆ ಸೂಕ್ತ ಸ್ಥಳಾವಕಾಶ ಇಲ್ಲದ ಹಳೆ ಕಚೇರಿಯ ಒತ್ತಿನಲ್ಲಿರುವ ಸುಸಜ್ಜಿತ ಪುರಭವನವನ್ನು ಕೆಡವುದರಲ್ಲಿ ಅರ್ಥವಿಲ್ಲ.
ದಿನಂದಿAದ ದಿನಕ್ಕೆ ಪಟ್ಟಣ ಬೆಳೆಯುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಅಂದಾಜು ೨೨ ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ೧೮ ವಾರ್ಡ್ಗಳಿಂದ ೨೩ ವಾರ್ಡ್ಗಳಿಗೆ ಬಡ್ತಿ ಹೊಂದಿದೆ. ಪಟ್ಟಣ ಸುತ್ತಮುತ್ತಲ ಗ್ರಾಮ ಪಂಚಾಯಿತಿಯ ಕೆಲವು ಭಾಗಗಳು ಪಟ್ಟಣಕ್ಕೆ ಸೇರ್ಪಡೆಗೊಂಡಿವೆ. ಈಗಿರುವ ಪುರಸಭೆಯಲ್ಲಿ ಕಸ ಎತ್ತುವ ಪುರಸಭೆ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಇದೆ. ಕೆಲಸ ಕಾರ್ಯಗಳ ನಿಮಿತ್ತಾ ಪುರಸಭೆಗೆ ಆಗಮಿಸುವ ಸಾರ್ವಜನಿಕರು ಮತ್ತು ಕಚೇರಿ ಸಿಬ್ಬಂದಿಗಳ ವಾಹನಗಳು ಎಲ್ಲೆಂದರಲ್ಲಿ ನಿಲುಗಡೆಗೊಳ್ಳುತ್ತಿವೆ.
ಹಾಲಿ ಇರುವ ಪುರಸಭೆ ಜಾಗವು ಕೆಂಪು ಮಣ್ಣು ಮಿಶ್ರಿತವಾದ ಜಾಗವಾದ ಕಾರಣ ಭವಿಷ್ಯದ ದೃಷ್ಟಿಯಿಂದ ಬೃಹತ್ ಕಟ್ಟಡ ನಿರ್ಮಾಣಕ್ಕೆ ಸೂಕ್ತ ಸ್ಥಳವಲ್ಲ ಎಂಬದು ತಜ್ಞರ ಅಭಿಪ್ರಾಯವಾಗಿದೆ. ಇರುವ ಜಾಗದಲ್ಲಿಯೇ ಪುರಸಭೆಯ ಮುಂಭಾಗ ಮುಖ್ಯ ರಸ್ತೆಗೆ ಜಾಗ ಬಿಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಪುರಸಭೆ ನಗರಸಭೆಯ ಸ್ಥಾನ ಪಡೆಯಬಹುದು. ಮತ್ತೆ ಪುನಹ ಸ್ಥಳಾವಕಾಶದ ಕೊರತೆ ಎದುರಾಗುತ್ತದೆ. ದೂರದೃಷ್ಟಿ ಹೊಂದದೆ ಭವಿಷ್ಯದ ಚಿಂತನೆ ಇಲ್ಲದೆ ಪಾರಂಪರಿಕವಾದ ಬ್ರಿಟಿಷರ ಕಾಲದ ಕಟ್ಟಡವನ್ನು ಒಡೆಯುವುದು ಮೂರ್ಖತನವಾಗುತ್ತದೆ ಎಂಬುದು ಸಾರ್ವಜನಿಕರ ವಾದವಾಗಿದೆ.
ತಾಲೂಕು ಮೈದಾನದ ಒತ್ತಿನಲ್ಲಿ ಕಂದಾಯ ಇಲಾಖೆಗೆ ಸೇರಿದ ಅಂದಾಜು ೨ ಎಕರೆ ಜಾಗದಲ್ಲಿ ಕಂದಾಯ ಇಲಾಖೆಯ ವಸತಿ ಗೃಹಗಳಿವೆ. ಅಲ್ಲಿರುವ ಎಲ್ಲಾ ವಸತಿ ಗೃಹಗಳು ಶಿಥಿಲಾವಸ್ಥೆಗೆ ಬಂದಿದ್ದು, ಹಾವು, ಹೆಗ್ಗಣಗಳ ವಾಸಸ್ಥಾನವಾಗಿ ಕಟ್ಟಡ ಕುಸಿಯುವ ಹಂತದಲ್ಲಿ ಇದೆ. ಜೊತೆಗೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಅಲ್ಲಿರುವ ಒಂದು ಎಕರೆ ಜಾಗವನ್ನು ಬಳಸಿಕೊಂಡರೆ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳೊಂದಿಗೆ ವಿಶಾಲವಾದ ಕಟ್ಟಡ, ಸಭಾಂಗಣ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ.