ಕುಶಾಲನಗರ, ನ. ೨೭: ಕುಶಾಲನಗರ ತಾಲೂಕು ಕೂಡ್ಲೂರು ಗ್ರಾಮ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ಬಫರ್ ಜೋನ್ ಒತ್ತುವರಿ ಅಳತೆ ಕಾರ್ಯ ನಡೆಯುತ್ತಿದೆ.

ವೀರಾಜಪೇಟೆ ತಾಲೂಕು ಅರ್ಜಿ ಗ್ರಾಮದ ನಿವಾಸಿ ವಿ.ಟಿ. ಮದನ್ ಅವರ ಅರ್ಜಿ ಮೇರೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಕುಶಾಲನಗರ ತಾಲೂಕು ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ, ಮುಡಾ, ಕುಶಾಲನಗರ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಗ್ರಾಮ ಪಂಚಾಯಿತಿ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ಬಫರ್‌ಜೋನ್ ಹಾಗೂ ಕಾವೇರಿ ನದಿ ಪಾತ್ರದ ಜಾಗ ಒತ್ತುವರಿ ಅಳತೆ ಕಾರ್ಯ ನಡೆಯುತ್ತಿದೆ.

ಈ ತಿಂಗಳ ೧೩ ರಿಂದ ಸರ್ವೇ ಕಾರ್ಯ ನಡೆಯುತ್ತಿದ್ದು ನದಿ ತಟದಿಂದ ೫೦ ಮೀಟರ್ ಅಂತರದಲ್ಲಿ ನದಿ ಗಡಿ ಗುರುತು ಕಾರ್ಯ ನಡೆಸಲಾಗುತ್ತಿದೆ.

ಈ ಬಗ್ಗೆ ನಕಾಶೆಯೊಂದಿಗೆ ಜಿಲ್ಲಾಡಳಿತಕ್ಕೆ ವರದಿ ನೀಡಲಾಗುವುದು ಎಂದು ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ ತಿಳಿಸಿದ್ದಾರೆ. ತಾಲೂಕು ಭೂ ಮಾಪಕರಾದ ಹೆಚ್.ಎಸ್. ರವಿ, ಮುಡಾ ಸಹಾಯಕ ನಿರ್ದೇಶಕರಾದ ದಾಕ್ಷಾಯಿಣಿ, ಕುಡಾ ಸದಸ್ಯ ಕಾರ್ಯದರ್ಶಿ ನಾಗೇಶ್, ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಅರವಿಂದ್, ಕಂದಾಯ ಗ್ರಾಮ ಆಡಳಿತ ಅಧಿಕಾರಿ ಗುರು ದರ್ಶನ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಮತ್ತಿತರರು ಇದ್ದರು.