ಗೋಣಿಕೊಪ್ಪಲು, ನ. ೨೮: ರೋಟರಿ ರಾಜ್ಯಪಾಲ ರಾಮಕೃಷ್ಣ ಅವರು ಗೋಣಿಕೊಪ್ಪಲುವಿನ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ್ದರು.
ತಿತಿಮತಿ ಮತ್ತಿಗೋಡು ಬಳಿಯ ಆನೆ ಶಿಬಿರಕ್ಕೆ ತೆರಳಿದ ರಾಮಕೃಷ್ಣ ಅವರು, ನಾಗರಿಕರ ಅನುಕೂಲಕ್ಕಾಗಿ ಗೋಣಿಕೊಪ್ಪ ರೋಟರಿ ಕ್ಲಬ್ ವತಿಯಿಂದ ನೀಡಲಾದ ಕಸದ ತೊಟ್ಟಿಯನ್ನು ಹಸ್ತಾಂತರ ಮಾಡಿದರು. ಗೋಣಿಕೊಪ್ಪ ಕಾವೇರಿ ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು. ನಂತರ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೋಟರಿ ಸಂಸ್ಥೆಯ ಸಾಮಾಜಿಕ ಸೇವೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ವಿಚಾರ ವಿನಿಮಯ ನಡೆಸಿದರು. ಈ ವೇಳೆ ಕಾಲೇಜಿನ ಪ್ರಾಂಶುಪಾಲ ಡಾ. ಕಾವೇರಿಯಪ್ಪ, ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ವಿಜಯ್, ಕಾರ್ಯದರ್ಶಿ ಎಂ.ಪಿ.ಪ್ರಮೋದ್ ಕಾಮತ್ ಸಹಾಯಕ ರಾಜ್ಯಪಾಲ ದಿಲನ್ ಚಂಗಪ್ಪ ಸೇರಿದಂತೆ ಪ್ರಮುಖ ಗಣ್ಯರು ಪಾಲ್ಗೊಂಡಿದ್ದರು.
ಕೈಕೇರಿ ರೋಟರಿ ಕ್ಲಬ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಗವರ್ನರ್ ರಾಮಕೃಷ್ಣ ಪ್ರಪಂಚದಲ್ಲಿ ೩೯ ಪೋಲಿಯೊ ಪ್ರಕರಣಗಳು ಬೆಳಕಿಗೆ ಬಂದಿವೆ. ಅವುಗಳಲ್ಲಿ ೩೦ ಪ್ರಕರಣಗಳು ಪಾಕಿಸ್ತಾನದಲ್ಲಿ ಹಾಗೂ ೯ ಪ್ರಕರಣಗಳು ಅಪಘಾನಿಸ್ತಾನದಲ್ಲಿ ಕಾಣಿಸಿಕೊಂಡಿವೆ. ಪ್ರಸ್ತುತ ವರ್ಷ ಡಿಸಂಬರ್ ೨೧ರಂದು ಪೋಲಿಯೊ ಲಸಿಕಾ ಕಾರ್ಯಕ್ರಮ ದೇಶದಾದ್ಯಂತ ನಡೆಯಲಿದೆ. ಪೋಲಿಯೊ ನಿರ್ಮೂಲನೆ ಮಾಡುವುದೇ ರೋಟರಿ ಸಂಸ್ಥೆಯ ಬಹುದೊಡ್ಡ ಉದ್ದೇಶವಾಗಿದೆ ಎಂದರು.
ರೋಟರಿ ಸಂಸ್ಥೆಯು ೧೦ಕ್ಕೂ ಅಧಿಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇದರಲ್ಲಿ ಅಂಗನವಾಡಿ ಕೇಂದ್ರಗಳಿಗೆ ಬಣ್ಣ ಬಳಿಯುವುದು, ಹೆಣ್ಣು ಮಕ್ಕಳು ರಕ್ತದಾನ ಮಾಡುವಂತೆ ಮನವೊಲಿಸುವುದು, ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಕರ್ಯ ಒದಗಿಸುವುದು, ಮಾನಸಿಕ ಒತ್ತಡಗಳಿಗೆ ಒಳಪಟ್ಟವರಿಗೆ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ನೀಡುವುದು, ಕಾಡು, ನೀರು, ಮಣ್ಣು ಮತ್ತು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ರೋಟರಿ ಕ್ಲಬ್‌ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೋಣಿಕೊಪ್ಪಲುವಿನ ಕುಕೂನ್ ಸಭಾಂಗಣದಲ್ಲಿ ಆಯೋಜನೆಗೊಂಡಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಪಿ.ಕೆ. ವಿಜಯ್‌ಕುಮಾರ್ ವಹಿಸಿದ್ದರು. ಗೋಣಿಕೊಪ್ಪ ರೋಟರಿ ಕ್ಲಬ್ ನಡೆಸಿರುವ ಸಮಾಜಮುಖಿ ಕಾರ್ಯದ ಬಗ್ಗೆ ಕಾರ್ಯದರ್ಶಿ ಎಂ.ಪಿ.ಪ್ರಮೋದ್ ಕಾಮತ್ ವರದಿ ನೀಡಿದರು. ಈ ವೇಳೆ ನಗರದ ಮಹಿಳಾ ಆಟೋ ಚಾಲಕಿ ಮಂಜುಳ, ಮನೆ ಮನೆಗೆ ಪತ್ರಿಕೆ ವಿತರಿಸುವ ವಿತರಕರಾದ ಮಂಜು ಹಾಗೂ ಅತ್ಯುತ್ತಮ ಮಹಿಳಾ ಸಾಧಕಿ ಚೇಂದAಡ ಸುಮಿ ಸುಬ್ಬಯ್ಯ ಅವರನ್ನು ಸನ್ಮಾನಿಸಿ ಗೌರವಿಸ ಲಾಯಿತು. ವೇದಿಕೆಯಲ್ಲಿ ಸಹಾಯಕ ರಾಜ್ಯಪಾಲ ದಿಲನ್ ಚಂಗಪ್ಪ, ಜೋನಲ್ ಲೆಫ್ಟಿನೆಂಟ್ ಕೆ.ಹೆಚ್.ಆದಿತ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರೋಟರಿ ಸಂಸ್ಥೆಯ ಪ್ರಮುಖರಾದ ಶುಭಾಷಿಣಿ, ದೀನಾ, ಎಂ.ಜಿ. ಮೋಹನ್, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ನಿಕಟಪೂರ್ವ ಅಧ್ಯಕ್ಷೆÀ ಚೇಂದAಡ ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಪ್ರಮೋದ್ ಕಾಮತ್ ವಂದಿಸಿದರು.