ಅನಿಲ್ ಎಚ್.ಟಿ.

ಮಡಿಕೇರಿ, ನ. ೨೮: ಕಳೆದ ಕೃಷಿ ಸಾಲಿನಲ್ಲಿ ಕಾಫಿಗೆ ಅತ್ಯುತ್ತಮ ಬೆಲೆಯನ್ನು ಪಡೆದ ಸಂಭ್ರಮದಲ್ಲಿಯೇ ಈ ವರ್ಷ ಕಾಫಿ ಕೊಯ್ಲಿಗೆ ಸಕಲ ಸಿದ್ಧತೆಯನ್ನು ಬೆಳೆಗಾರರು ಮಾಡಿಕೊಳ್ಳುತ್ತಿದ್ದರೂ ಕಾಫಿ ತೋಟಗಳಲ್ಲಿ ಗಣನೀಯ ಪ್ರಮಾಣದಲ್ಲಿ ಇಳುವರಿ ಕಡಿಮೆಯಾಗಿರುವುದು ಸಹಜ ಚಿಂತೆಗೆ ಕಾರಣವಾಗಿದೆ.

೨೦೨೫ ರ ಪ್ರಾರಂಭದಿAದಲೇ ಕಾಫಿ ಕೃಷಿಕರು ತಾವು ಬೆಳೆಸಿದ ಫಸಲಿಗೆ ಈ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಅತ್ಯುತ್ತಮ ಬೆಲೆಯನ್ನು ಪಡೆದಿದ್ದರು. ಉತ್ತಮ ಫಸಲು ಕೂಡ ಬೆಳೆಗಾರನಿಗೆ ದೊರಕಿದ್ದೂ ಅದಕ್ಕೆ ತಕ್ಕಂತೆ ಬೆಲೆ ಕೂಡ ದೊರಕಿದ್ದು ಕಾಫಿ ಕೃಷಿಕರಿಗೆ ಸಂತೋಷ ಮತ್ತು ಸಮಾಧಾನ ತಂದಿತ್ತು.

ಇದೀಗ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿರುವ ಅಂದಾಜು ೨ ಸಾವಿರ ಕಾಫಿ ಬೆಳೆಗಾರರು ಫಸಲಿನ ಕೊಯ್ಲಿಗೆ ಸಿದ್ಧತೆ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಲಭ್ಯವಿಲ್ಲದೆ ಇರುವುದು ಚಿಂತೆಗೆ ಕಾರಣವಾಗಿದೆ.

ಕಾಫಿ ಮಂಡಳಿ ಸಮೀಕ್ಷೆ ಪ್ರಕಾರ ೨೦೨೫-೨೬ನೇ ಸಾಲಿನಲ್ಲಿ ಭಾರತದ ಕಾಫಿ ಉತ್ಪಾದನೆ ೪.೦೩ ಲಕ್ಷ ಟನ್ ಎಂದು ಅಂದಾಜಿಸಲಾಗಿತ್ತು. ಮುಂಗಾರಿಗೆ ಮುನ್ನ ಈ ಸಮೀಕ್ಷೆ ಮಾಡಲಾಗಿತ್ತು. ಆದರೆ ಈ ವರ್ಷ ಮೇ ೨೪ ರಿಂದಲೇ ಪ್ರಾರಂಭವಾದ ಮುಂಗಾರಿನಿAದಾಗಿ ಕಾಫಿ ಕೃಷಿ ಪ್ರತಿಕೂಲ ಪರಿಣಾಮ ಎದುರಿಸುವಂತಾಯಿತು. ಮೇನಲ್ಲಿ ಆರಂಭವಾದ ಮಳೆ ಅಕ್ಟೋಬರ್ ಕೊನೆಯವರೆಗೂ ಬೆಳೆಗಾರರನ್ನು ಕಾಡಿತ್ತು. ಹೀಗಾಗಿ ಇದೀಗ ಭಾರತದ ಕಾಫಿ ಉತ್ಪಾದನೆ ೩೦ ಸಾವಿರ ಟನ್‌ಗಳಿಗೆ ಕುಸಿಯುವ ಸಾಧ್ಯತೆಯಿದ್ದು, ೩.೭೪ ಲಕ್ಷ ಟನ್ ಕಾಫಿ ಉತ್ಪಾದನೆ ನಿರೀಕ್ಷಿಸಲಾಗಿದೆ ಎಂದು ಕರ್ನಾಟರ ಬೆಳೆಗಾರರ ಸಂಘ ಮಾಹಿತಿ ನೀಡಿದೆ.

೩.೭೪ ಲಕ್ಷ ಟನ್ ಕಾಫಿ ಉತ್ಪಾದನೆಯಾದಲ್ಲಿ ಅಂದಾಜು ೪೦೦ ರಿಂದ ೫೦೦ ಕೋಟಿ ರೂಪಾಯಿ ಮೌಲ್ಯದ ಕಾಫಿಯನ್ನು ಭಾರತ ಉತ್ಪಾದಿಸಿದಂತಾಗುತ್ತದೆ.

೨೦೨೫-೨೬ ರಲ್ಲಿ ಅರೇಬಿಕಾ ತಳಿ ಕಾಫಿಯ ಉತ್ಪಾದನೆ ೧ ರಿಂದ ೧.೦೨ ಲಕ್ಷ ಟನ್ ಆಗುವ ನಿರೀಕ್ಷೆಯಿದೆ. (ಕಾಫಿ ಮಂಡಳಿಯ ಸಮೀಕ್ಷೆ ೧.೧೯ ಲಕ್ಷ ಟನ್ ಎಂದು ಅಂದಾಜಿಸಿತ್ತು) . ರೋಬಸ್ಟಾ ತಳಿ ಕಾಫಿಯ ಉತ್ಪಾದನೆಯು ೨.೭೦ ಲಕ್ಷ ಟನ್ ತಲುಪುವ ಸಾಧ್ಯತೆಯಿದೆ. ( ಕಾಫಿ ಮಂಡಳಿಯ ಸಮೀಕ್ಷೆಯು ೨.೮೫ ಲಕ್ಷ ಟನ್ ಎಂದು ಅಂದಾಜಿಸಿತ್ತು) ಕರ್ನಾಟದಲ್ಲಿ ಕಳೆದ ಸಾಲಿನಲ್ಲಿ ೨.೫೬ ಲಕ್ಷ ಟನ್‌ಗಳಷ್ಟಿತ್ತು. ಈ ವರ್ಷ ೨.೮೦ ಲಕ್ಷ ಟನ್ ತಲುಪುವ ಗುರಿಯನ್ನು ಕಾಫಿ ಮಂಡಳಿ ಹೊಂದಿತ್ತಾದರೂ ಅಷ್ಟೊಂದು ಪ್ರಮಾಣದಲ್ಲಿ ಕಾಫಿ ಉತ್ಪಾದನೆಯಾಗುವ ಸಾಧ್ಯತೆಯಿಲ್ಲ ಎಂದು ಕೆಪಿಎ ಅನಿರೀಕ್ಷಿತವಾಗಿ ಸುರಿಯುತ್ತಿರುವ ಮಳೆ, ಮುಂಗಾರಿನ ಮುಂದುವರಿಕೆ, ಅಕಾಲಿಕ ಮಳೆ, ಮಂಜಿನ ವಾತಾವರಣ ಇತ್ಯಾದಿ ಕಾರಣಗಳಿಂದಾಗಿ ಕರ್ನಾಟಕದಲ್ಲಿಯೂ ಕಾಫಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಈಗಾಗಲೇ ಅರೇಬಿಕಾ ಕೊಯ್ಲು ಬಹುತೇಕ ಕಡೆ ಪ್ರಾರಂಭವಾಗಿದ್ದರೆ ರೋಬಸ್ಟಾ ಕೊಯ್ಲು ಡಿಸೆಂಬರ್ ಮಧ್ಯಭಾಗದಲ್ಲಿ ಬೆಳೆಗಾರರು ಮುಂದಾಗಲಿದ್ದಾರೆ. ನಿಗದಿತ ರೀತಿಯಲ್ಲಿ ಕಾಫಿ ಗಿಡಗಳಿಗೆ ಸೂರ್ಯನ ಬೆಳಕು ೫-೬ ತಿಂಗಳು ದೊರಕದೇ ಇರುವುದು ಕೂಡ ಉತ್ಪಾದನೆ ಮಾತ್ರವಲ್ಲದೇ ಕಾಫಿಯ ಗುಣಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ನಿಕಟಪೂರ್ವ ಅಧ್ಯಕ್ಷ ಎ. ಅರವಿಂದ್ ರಾವ್ ತಿಳಿಸಿದ್ದಾರೆ. ಕೆಪಿಎನ ೬೭ನೇ ವಾರ್ಷಿಕ ಸಮ್ಮೇಳನದ ಹಿನ್ನೆಲೆಯಲ್ಲಿ ಅವರು ಈ ಮಾಹಿತಿ ಬಿಡುಗಡೆಗೊಳಿಸಿದ್ದಾರೆ. ಭಾರತದ ಕಾಫಿ ಉತ್ಪಾದನೆಯಲ್ಲಿ ಪ್ರತೀ ವರ್ಷದಂತೆ ಕರ್ನಾಟಕದ ಪಾಲು ಹೆಚ್ಚಾಗಿಯೇ ಇದೆ. ಹೀಗಿದ್ದರೂ ವರ್ಷದಿಂದ ವರ್ಷಕ್ಕೆ ಉತ್ಪಾದನಾ ಪ್ರಮಾಣ ಹೆಚ್ಚಿಸಬೇಕೆಂಬ ಕಾಫಿ ರಂಗದ ಗುರಿಗೆ ಮಳೆಯಿಂದಾಗಿ ಈ ವರ್ಷ ಹಿನ್ನಡೆಯಾಗಿದೆ ಎಂದೂ ಅರವಿಂದ್ ವಿಷಾದಿಸಿದರು. ೪ಆರನೇ ಪುಟಕ್ಕೆ (ಮೊದಲ ಪುಟದಿಂದ)

ಅAಕಿ ಅಂಶ..

ಭಾರತದಲ್ಲಿ ೪.೬೫ ಲಕ್ಷ ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ ಈ ಪೈಕಿ ಕರ್ನಾಟಕದಲ್ಲಿ ೨.೪೬ ಲಕ್ಷ ಹೆಕ್ಟೇರ್‌ನಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಭಾರತದ ಕಾಫಿ ಕೃಷಿ ಭೂಮಿಯಲ್ಲಿ ಕರ್ನಾಟಕದ ಪಾಲು ಶೇ.೭೦ ರಷ್ಟಿದೆ. ಕಳೆದ ೨೦ ವರ್ಷಗಳಿಗೆ ಹೋಲಿಸಿದಲ್ಲಿ ದೇಶದಲ್ಲಿಯೇ ಕಾಫಿ ಕೃಷಿ ಪ್ರದೇಶ ಹೆಚ್ಚಾಗುವ ಬದಲಿಗೆ ಕಡಮೆಯಾಗುತ್ತಿದೆ. ಪ್ರತಿಕೂಲ ಹವಾಮಾನ, ನಿರೀಕ್ಷಿತ ಬೆಲೆ ಮತ್ತು ಬೆಳೆ ದೊರಕದೇ ಇರುವುದು ಕೂಡ ಈ ಇಳಿಕೆಗೆ ಕಾರಣ ಎನ್ನಲಾಗಿದೆ.

೨೦೧೮ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಭೂಕುಸಿತ, ಮಹಾಮಳೆ, ಅಕಾಲಿಕ ಮಳೆ, ಮಣ್ಣಿನ ಗುಣಮಟ್ಟ ಕುಸಿತ, ವನ್ಯಜೀವಿ, ಕಾಡಾನೆ ಹಾವಳಿಯಿಂದ ಕೃಷಿ ಪ್ರದೇಶದಲ್ಲಿನ ಇಳಿಕೆ ಮುಂತಾದ ಕಾರಣಗಳೂ ಕಾಫಿ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಕಾಫಿ ಕೃಷಿಯನ್ನು ತೋಟಗಾರಿಕಾ ಬೆಳೆಗಳ ಪಟ್ಟಿಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಕೇಂದ್ರದ ವಾಣಿಜ್ಯ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದ್ದು, ತೋಟಗಾರಿಕಾ ಬೆಳೆಯೆಂದು ಪರಿಗಣಿಸಲ್ಪಟ್ಟಲ್ಲಿ ಕಾಫಿ ಕೃಷಿಕರಿಗೆ ಮತ್ತಷ್ಟು ಸವಲತ್ತು ದೊರಕಲಿದೆ ಎಂದು ಅರವಿಂದ್ ಭರವಸೆ ವ್ಯಕ್ತಪಡಿಸುತ್ತಾರೆ. ತೋಟಗಾರಿಕಾ ಬೆಳೆಯ ಮನ್ನಣೆ ಕಾಫಿಗೆ ದೊರಕಿದ್ದೇ ಆದಲ್ಲಿ, ಪ್ರತಿಕೂಲ ಹವಾಮಾನ ಸಂದರ್ಭ ಕಾಫಿಗೆ ಬೆಳೆ ವಿಮೆ ಸೌಲಭ್ಯವೂ ದೊರಕಿದಂತಾಗಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಫಿ ಗಿಡಗಳಿಗೆ ಬಿಳಿ ಕಾಂಡಕೊರಕ ರೋಗ ಮಾರಕವಾಗುತ್ತಲೇ ಇದ್ದು, ಕಾಫಿ ಮಂಡಳಿ ರೋಗ ನಿರೋಧಿಸುವ ನಿಟ್ಟಿನಲ್ಲಿ ಮತ್ತಷ್ಟು ಗಂಭೀರ ಯೋಜನೆ ಜಾರಿಗೊಳಿಸಲೇಬೇಕಾಗಿದೆ. ಇಲ್ಲದೇ ಹೋದಲ್ಲಿ ಕಾಂಡಕೊರಕಗಳ ಧಾಳಿಯಿಂದ ಅರೇಬಿಕಾ ಸಸಿಗಳು ಸಾವನ್ನಪ್ಪುವ ಸಾಧ್ಯತೆ ಹೆಚ್ಚಾಗಿದೆ ಎಂಬ ಆತಂಕವೂ ಬೆಳೆಗಾರರಲ್ಲಿದೆ. ತೀವ್ರ ಮಳೆಯಿಂದಾಗಿ ಸಾಕಷ್ಟು ದುಸ್ಥಿತಿಯಲ್ಲಿರುವ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ರಸ್ತೆಯನ್ನು ವಿಳಂಬರಹಿತವಾಗಿ ದುರಸ್ತಿಗೊಳಿಸಬೇಕು. ಕಾಫಿ ಕುಯ್ಲು ಮತ್ತು ಕಾಫಿ ಸಾಗಾಣೆ ಪ್ರಾರಂಭವಾಗುವ ಈ ದಿನಗಳಲ್ಲಿ ರಸ್ತೆ ದುಸ್ಥಿತಿ ಮುಂದುವರೆದಲ್ಲಿ ಕಾಫಿ ಬೆಳೆಗಾರರು, ಕಾರ್ಮಿಕರಿಗೂ ಸಮಸ್ಯೆಯಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾಫಿ ಬೆಳೆಗಾರ ಜಿಲ್ಲೆಗಳಿಗೆ ವಿಳಂಬರಹಿತವಾಗಿ ರಸ್ತೆ ದುರಸ್ತಿಗೆ ಹಾಗೂ ರಸ್ತೆಗಳ ಗುಂಡಿ ಮುಚ್ಚಲು ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆಯೂ ಅವರು ಒತ್ತಾಯಿಸಿದ್ದಾರೆ. ಕಾಫಿ ಕೃಷಿಕರಿಗೆ ಸಾಲ ಮತ್ತು ಬಡ್ಡಿ ಪಾವತಿ ಸಂಬAಧಿತ ಬ್ಯಾಂಕ್‌ಗಳು ಕಿರುಕುಳ ನೀಡದಂತೆ ಮತ್ತೊಮ್ಮೆ ಸರ್ಕಾರಗಳ ಗಮನ ಸೆಳೆಯಲಾಗುತ್ತದೆ ಎಂದೂ ಅರವಿಂದ್ ಹೇಳಿದರು. ಸರ್ಫಾಸಿ ಕಾಯ್ದೆಯನ್ನೂ ಕೆಲವು ಬ್ಯಾಂಕ್‌ಗಳು ಬೆಳೆ ಮೇಲೆ ಪ್ರಯೋಗಿಸುತ್ತಿದ್ದು, ಕೂಡಲೇ ಇಂಥ ಕಿರುಕುಳ ನಿಲ್ಲಬೇಕೆಂದು ಬೆಳೆಗಾರ ಸಂಘಟನೆಗಳ ಪರವಾಗಿ ಒತ್ತಾಯಿಸಿದರು.

ಸಾಕಷ್ಟು ಪ್ರಯತ್ನದ ಫಲವಾಗಿಯೂ ಜಾಗತಿಕವಾಗಿ ಇಂಡಿಯನ್ ಕಾಫಿಯನ್ನು ನಿರೀಕ್ಷಿತ ರೀತಿಯಲ್ಲಿ ಬ್ರಾಂಡಿAಗ್ ಮಾಡಲು ಇನ್ನೂ ಆಗಲಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಪ್ರತೀ ಬೆಳೆಗಾರರು ತಮ್ಮ ಕಾಫಿಯ ಗುಣಮಟ್ಟ ಕಾಯ್ದುಕೊಂಡಾಗ ಮಾತ್ರ ವಿಶ್ವ ಮಾರುಕಟ್ಟೆಯಲ್ಲಿ ಇಂಡಿಯನ್ ಕಾಫಿ ವಿಶೇಷ ಗಮನ ಸೆಳೆದು ಬ್ರಾಂಡ್ ಆಗಲು ಸಾಧ್ಯ. ಈ ಸತ್ಯವನ್ನು ನಾವೆಲ್ಲಾ ಒಪ್ಪಿಕೊಳ್ಳಲೇಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಬೆಲೆ?

ಕಾಫಿಗೆ ಈ ವರ್ಷವೂ ಹೆಚ್ಚಿನ ಬೆಲೆ ದೊರಕೀತೆ? ಕಾಫಿ ದಾಸ್ತಾನು ಇರಿಸುವುದು ಸೂಕ್ತವೇ? ಯಾವ ತಿಂಗಳಿನಲ್ಲಿ ಕಾಫಿಗೆ ದರ ಏರಿಕೆಯಾದೀತು. ಮುಂತಾದ ಪ್ರಶ್ನೆಗಳಿಗೆ ಉತ್ತರಕ್ಕೆ ಇದು ಸಕಾಲವಲ್ಲ. ಬ್ರೆಜಿಲ್, ವಿಯೆಟ್ನಾಂ ಮಾರುಕಟ್ಟೆಯ ಮೇಲೆ ದರದ ಏರಿಕೆ, ಇಳಿಕೆ ಅವಲಂಬಿಸಿರುವುದರಿAದಾಗಿ ಈಗಲೇ ಕಾಫಿ ದರದ ಭವಿಷ್ಯ ಹೇಳಲಾಗದು. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಕಾಫಿಗೆ ಎಷ್ಟರ ಮಟ್ಟಿಗೆ ಬೇಡಿಕೆ ಬರಲಿದೆ ಎಂಬುದರ ಮೇಲೆ ಕಾಫಿ ಬೆಲೆಯ ಭವಿಷ್ಯವೂ ನಿರ್ಧರಿತವಾಗಲಿದೆ.