ಕೂಡಿಗೆ, ಡಿ. ೪: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಸಮೀಪದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆಯು ಕಳೆದ ೭ ವರ್ಷಗಳಿಂದಲೂ ಶಿಥಿಲಾವಸ್ಥೆಯಲ್ಲಿದ್ದು ಸಂಬAಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನವಹಿಸಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಸೇತುವೆಯು ಕೊಡಗನ್ನು ಮೈಸೂರಿಗೆ ಸಂಪರ್ಕಿಸುವ ಸೇತುವೆಯಾಗಿದ್ದು, ಇಲ್ಲಿ ಕಳೆದೆರಡು ದಿನಗಳ ಹಿಂದೆ ಮೈಸೂರಿನಿಂದ ಕೊಡಗಿಗೆ ಆಗಮಿಸಿದ್ದ ಪ್ರವಾಸಿ ವಿದ್ಯಾರ್ಥಿಗಳು ಸೇತುವೆಯ ದುಸ್ಥಿತಿಯ ಬಗ್ಗೆ ಅರಿವಿಲ್ಲದೆ ದಾಟುತ್ತಿದ್ದ ದೃಶ್ಯ ‘ಶಕ್ತಿ’ಗೆ ಕಂಡುಬAತು.

೨೦೧೮ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ, ಅತಿಯಾದ ಮಳೆಯಿಂದಾಗಿ ಕಾವೇರಿ ನದಿಯು ಭರ್ತಿಯಾಗಿ ಸೇತುವೆಯ ಕಬ್ಬಿಣದ ರಾಡುಗಳು ಮತ್ತು ಅದಕ್ಕೆ ಅಳವಡಿಕೆ ಮಾಡಲಾಗಿದ್ದ ಕಾಂಕ್ರೀಟ್ ಮೆಟ್ಟಿಲುಗಳು ದುಸ್ಥಿತಿ ತಲುಪಿವೆ. ಒಂದು ಬದಿಯ ಗ್ಯಾಲರಿಗೆ ಅಳವಡಿಕೆ ಮಾಡಲಾಗಿರುವ ಕಬ್ಬಿಣದ ರಾಡುಗಳು ಮುರಿದುಹೋಗಿ ಅಪಾಯ ಆಹ್ವಾನಿಸುತ್ತಿದೆ. ಮಲೆನಾಡು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕಳೆದ ೧೮ ವರ್ಷಗಳ ಹಿಂದೆ ನಿರ್ಮಿಸಲಾದ ಈ ಸೇತುವೆಗೆ ಶೀಘ್ರ ಕಾಯಕಲ್ಪ ದೊರಕದಿದ್ದರೆ ದುರಂತ ಕಟ್ಟಿಟ್ಟ ಬುತ್ತಿ. ಅಪಘಾತ ಸಂಭವಿಸಿದರೆ ಇದರ ಹೊಣೆಯನ್ನು ಯಾರು ಹೊರಲಿದ್ದಾರೆ..? ಎಂಬುದಾಗಿ ಸ್ಥಳೀಯರು ಪ್ರಶ್ನಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ