ಚೆಯ್ಯಂಡಾಣೆ, ಡಿ. ೩: ವೀರಾಜಪೇಟೆ ತಾಲೂಕು ಮೈದಾನದಲ್ಲಿ ದ್ವಿತೀಯ ವರ್ಷದ ಕೂರ್ಗ್ ಫುಟ್ಬಾಲ್ ಮಾಸ್ಟರ್ಸ್ ಕಪ್ ೫೦ ವರ್ಷ ಮೇಲ್ಪಟ್ಟವರ ಫುಟ್ಬಾಲ್ ಪಂದ್ಯಾಟ ೨ ದಿನಗಳ ಕಾಲ ನಡೆಯಿತು.

ವೀರಾಜಪೇಟೆಯ ಉದ್ಯಮಿ ಸಿಬಿ ಕುರಿಯನ್ ಉದ್ಘಾಟಿಸಿ ಶುಭ ಕೋರಿದರು. ಹಿಂದು ಮಲೆಯಾಳಿ ಅಸೋಸಿಯೇಷನ್‌ನ ಅಧ್ಯಕ್ಷ ವಿನೂಪ್ ಕುಮಾರ್, ಅಕ್ಸ್ ಫರ್ಡ್ ಫುಟ್ಬಾಲ್ ತಂಡದ ಅಧ್ಯಕ್ಷ ರಾನ್ಸಿ ಮ್ಯಾತ್ಯು ಅತಿಥಿಗಳಾಗಿ ಪಾಲ್ಗೊಂಡಿದ್ದರು.

೫+೨ ಆಟಗಾರರಿಗೆ ಅವಕಾಶವಿದ್ದ ಪಂದ್ಯಾಟದಲ್ಲಿ ಒಟ್ಟು ಎಂಟು ತಂಡಗಳಲ್ಲಿ ೫೬ ಕ್ರೀಡಾಪಟುಗಳು ಭಾಗವಹಿಸಿದ್ದರು. ೮೦ರ ದಶಕದಲ್ಲಿ ಆಡಿದ್ದಂತಹ ಆಟಗಾರರಿಗೆ ಮತ್ತೊಮ್ಮೆ ಮೈದಾನದಲ್ಲಿ ಆಡುವ ಅವಕಾಶ ಕಲ್ಪಿಸಲಾಗಿತ್ತು. ಅಂತಿಮವಾಗಿ ಅಲ್ಪಾಲ್ ಎಫ್ ಸಿ ತಂಡ ಹಾಗೂ ಸ್ನೇಹಿತರ ಬಳಗ ಫೈನಲ್ ಹಂತಕ್ಕೆ ಪ್ರವೇಶಿಸಿತ್ತು.

ಅಲ್ಪಾಲ್ ಎಫ್ ಸಿ ತಂಡ ಹಾಗೂ ಸ್ನೇಹಿತರ ಬಳಗ ತಂಡದ ನಡುವೆ ನಡೆದ ಫೈನಲ್‌ನಲ್ಲಿ ಅಲ್ಪಾಲ್ ಎಫ್ ಸಿ ತಂಡದ ಮುನ್ನಡೆ ಆಟಗಾರ ಅಲ್ತಾಫ್ ಅವರ ಆಕರ್ಷಕ ಗೋಲಿನಿಂದ ೧-೦ ಗೋಲಿನ ಅಂತರದಲ್ಲಿ ಅಲ್ಪಾಲ್ ಎಫ್‌ಸಿ ತಂಡ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತು. ಸ್ನೇಹಿತರ ಬಳಗ ತಂಡ ರನ್ನರ್ಸ್ಗೆ ತೃಪ್ತಿಪಟ್ಟುಕೊಂಡರು.

ತೃತೀಯ ಸ್ಥಾನವನ್ನು ಬ್ಲಾಕ್ ಅಂಡ್ ವೈಟ್ ಹಾಗೂ ನಾಲ್ಕನೇ ಸ್ಥಾನವನ್ನು ಶಿವಾಜಿ ತಂಡ ಪಡೆಯಿತು. ಉತ್ತಮ ಗೋಲು ಹೊಡೆದ ಆಟಗಾರ ಪ್ರಶಸ್ತಿಯನ್ನು ಬ್ಲಾಕ್ ಅಂಡ್ ವೈಟ್ ತಂಡದ ತಂಬು, ಉತ್ತಮ ಗೋಲ್ ಕೀಪರ್ ಪ್ರಶಸ್ತಿಯನ್ನು ಅಲ್ಪಾಲ್ ಎಫ್ ಸಿ ತಂಡದ ವರ್ಗಿಸ್, ಉತ್ತಮ ಡಿಫೆಂಡರ್ ಪ್ರಶಸ್ತಿಯನ್ನು ಅಲ್ಪಾಲ್ ಎಫ್ ಸಿ ತಂಡದ ನಯಾಜ್, ಅತಿ ಹೆಚ್ಚು ಗೋಲು ಬಾರಿಸಿದ ಪ್ರಶಸ್ತಿಯನ್ನು ಅಲ್ಪಾಲ್ ಎಫ್ ಸಿ ತಂಡದ ಅಲ್ತಾಫ್, ಶಿಸ್ತು ಬದ್ದ ತಂಡ ಪ್ರಶಸ್ತಿಯನ್ನು ಎಸ್ ಪಿ ಟವರ್ಸ್ ವೀರಾಜಪೇಟೆ, ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಅಲ್ಪಾಲ್ ಎಫ್ ಸಿ ತಂಡದ ಜೇಮ್ಸ್, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಅಲ್ಪಾಲ್ ಎಫ್ ಸಿ ತಂಡದ ಅಲ್ತಾಫ್ ಪಡೆದು ಕೊಂಡರು. ಇದೆ ಸಂದರ್ಭ ಪುರಸಭೆಯ ಮಾಜಿ ಸದಸ್ಯ ಪ್ರಥ್ವಿನಾಥ್, ಕೂರ್ಗ್ ಮಾಸ್ಟರ್ಸ್ ಫುಟ್ಬಾಲ್‌ಕ್ಲಬ್ ಅಧ್ಯಕ್ಷ ಭಾಸ್ಕರ್ ಹಾಗೂ ಸ್ನೇಹಿತರ ಬಳಗದ ಹಿರಿಯ ಆಟಗಾರ ಹ್ಯಾಂಡಿ ಅವರನ್ನು ಸನ್ಮಾನಿಸಲಾಯಿತು.

ಸಮಾರೋಪ ಸಮಾರಂಭ ಕೂರ್ಗ್ ಮಾಸ್ಟರ್ಸ್ ಕ್ಲಬ್ ಫುಟ್ಬಾಲ್ ಕ್ಲಬ್ ಅಧ್ಯಕ್ಷರಾದ ಭಾಸ್ಕರ್ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಐಆರ್ ಎಸ್ ಲಿಂಗರಾಜು ಕೆ.ಬಿ.ಪಾಲ್ಗೊಂಡು ಮಾತನಾಡಿ ಕ್ರೀಡಾ ಕೂಟ ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು. ಮತ್ತೋರ್ವ ಮುಖ್ಯ ಅತಿಥಿ ಬೀನಾ ಜಗದೀಶ್ ಮಾತನಾಡಿ ೫೦ ವರ್ಷ ಮೇಲ್ಪಟ್ಟವರಿಗೆ ಕ್ರೀಡಾಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು. ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ನಾಸರ್ ಸಿ.ಎ.ಮಾತನಾಡಿ ೫೦ ವರ್ಷ ಮೇಲ್ಪಟ್ಟವರ ಕ್ರೀಡೆ ಉತ್ತಮವಾಗಿ ನಡೆದಿದೆ ಎಂದರು.

ಚಾಂಪಿಯನ್ ತಂಡ ಹಾಗೂ ರನ್ನರ್ಸ್ ತಂಡಕ್ಕೆ ಅತಿಥಿಗಳು ಬಹುಮಾನವನ್ನು ವಿತರಿಸಿದರು. ಈ ಸಂದರ್ಭ ವೀರಾಜಪೇಟೆ ಪುರಸಭೆಯ ಮಾಜಿ ಸದಸ್ಯ ಪ್ರಥ್ವಿನಾಥ್, ವಕೀಲರಾದ ಟಿ.ಪಿ.ಕೃಷ್ಣ, ಶಕೀಲ್, ಸುಮೇಶ್ ಪಿ.ಜಿ,ಜಗನ್, ಅನಿಲ್, ಪವಿತ್ರನ್, ಅನಿಲ್ ಶಿನಪ್ಪ,ರಹೀಂ ಕೆ.ಕೆ,ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಆನಂದ್ ಎಸ್ ಬಿಐ, ಕೋಶಾಧಿಕಾರಿ ಅಲ್ತಾಫ್, ಸಹ ಕಾರ್ಯದರ್ಶಿ ಪ್ರಕಾಶ್, ಶಶಿಧರನ್, ಚಾರ್ಲ್ಸ್ ಮಾಸ್ಟರ್, ಪರಮೇಶ್ವರ್, ತಂಬು ರಾಮಕೃಷ್ಣ, ಖಲೀಲ್, ಅಂತೋಣಿ, ಮತ್ತಿತರರು ಉಪಸ್ಥಿತರಿದ್ದರು. ಚಾರ್ಲ್ಸ್ ಮಾಸ್ಟರ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.