ಗೋಣಿಕೊಪ್ಪಲಿನ ೫ನೇ ತರಗತಿ ಈ ವಿದ್ಯಾರ್ಥಿ ಅಪರೂಪದ ಗಾಂಧಾರಿ ವಿದ್ಯೆಯಲ್ಲಿ ಪಾರಂಗತ. ಎಲ್ಲವನ್ನೂ ಕಣ್ಣುಮುಚ್ಚಿಕೊಂಡೇ ಗ್ರಹಿಸಬಲ್ಲ ಅಪೂರ್ವ ವಿದ್ಯೆ ಈ ಬಾಲಕನಿಗೆ ಸಿದ್ಧಿಸಿದೆ.
ಹೌದು. ಪ್ರಾಚೀನ ಕಾಲದಿಂದಲೂ ಹೆಸರುವಾಸಿಯಾಗಿರುವ, ಗಾಂಧಾರಿ ವಿದ್ಯೆಯಲ್ಲಿ ಸಾಧನೆ ಮಾಡುವ ಮೂಲಕ ಗೋಣಿಕೊಪ್ಪಲಿನ ಪ್ರದ್ಯೋತ್ ಕಿರಣ್ ಎನ್. ಪಿ. ಗಮನ ಸೆಳೆಯುತ್ತಿದ್ದಾನೆ.
ಏನಿದು ಗಾಂಧಾರಿ ವಿದ್ಯೆ? ನಾವು ಕಣ್ಣು ತೆರೆದು ನೋಡುವುದನ್ನೆಲ್ಲಾ ಪ್ರದ್ಯೋತ್ ಗಾಂಧಾರಿ ವಿದ್ಯೆಯ ಮೂಲಕ ಕಣ್ಣುಮುಚ್ಚಿಕೊಂಡು ನೋಡಬಲ್ಲವನಾಗಿದ್ದಾನೆ.
ಸರಳವಾಗಿ ಹೇಳಬೇಕೆಂದರೆ, ಪ್ರದ್ಯೋತ್ ಕಣ್ಣಿಗೆ ಬಲವಾಗಿ ಕಪ್ಪು ಬಟ್ಟೆ ಕಟ್ಟಿ, ಏನೂ ಕಾಣದಂತೆ ಕತ್ತಲು ಮಾಡಿದರೂ ಆತ ತನ್ನ ಎದುರಿನ ವಸ್ತುಗಳನ್ನು, ಬಣ್ಣಗಳನ್ನು ನಿಖರವಾಗಿ ಗುರುತಿಸುತ್ತಾನೆ. ಕ್ಷಣಮಾತ್ರದಲ್ಲಿ ತನ್ನ ಮುಂದಿರುವುದು ಏನು ಎಂದು ಸ್ಫಷ್ಟವಾಗಿ, ಗೊಂದಲವಿಲ್ಲದAತೆ ಹೇಳುತ್ತಾನೆ.
ವಸ್ತುಗಳು, ಅದರ ಬಣ್ಣ, ಕರೆನ್ಸಿ ನೋಟುಗಳು, ಸಣ್ಣ ಅಕ್ಷರಗಳು, ಕನ್ನಡ ಇಂಗ್ಲೀಷ್ ಭಾಷೆಗಳನ್ನು ಸೇರಿಸಿ ರಚಿಸುವ ವಾಕ್ಯಗಳು.. ಸಂಖ್ಯೆಗಳು..ಹೀಗೆ ಬರೀ ಕಣ್ಮಿನಿಂದ ನಾವು ಏನನ್ನು ನೋಡಿ ಅದನ್ನು ಗ್ರಹಿಸುತ್ತೇವೆಯೋ ಅದನ್ನೇ ಪ್ರದ್ಯೋತ್ ಕಿರಣ್ ಕಣ್ಣುಮುಚ್ಚಿಕೊಂಡು ಗ್ರಹಿಸಿ, ಹೇಳುತ್ತಾನೆ. ಈ ಮೂಲಕ ಅಚ್ಚರಿಗೆ ಕಾರಣನಾಗುತ್ತಿದ್ದಾನೆ.
ಗಾಂಧಾರಿ ವಿದ್ಯೆ ಒಲಿದದ್ದು..
೫ ತಿಂಗಳ ಹಿಂದೆ ಸಾಮಾಜಿಕ ಜಾಲತಾಣ ನೋಡುತ್ತಿದ್ದಾಗ ಪ್ರದ್ಯುತ್ ಅಮ್ಮ ಶ್ವೇತಾ ಕಿರಣ್ ಅವರಿಗೆ ಶಿವಮೊಗ್ಗದಲ್ಲಿ ಮಂಜುನಾಥ್ ಪೂಜಾರಿ ಎಂಬುವವರು ಗಾಂಧಾರಿ ವಿದ್ಯೆ ಬಗೆಗೆ ಶಿಕ್ಷಣ ನೀಡುವುದಾಗಿ ಹೇಳುತ್ತಿರುವ ವಿಡಿಯೋ ಕಾಣಸಿಕ್ಕಿತು. ಕುತೂಹಲದಿಂದ ಶ್ವೇತಾ ಅವರು ಮಂಜುನಾಥ್ ಅವರನ್ನು ಸಂಪರ್ಕಿಸಿ, ಮಗನಿಗೆ ಈ ವಿದ್ಯೆ ಕಲಿಸುವಿರಾ ಎಂದು ಕೋರಿಕೊಂಡ ಮೇರೆಗೆ ಅವರ ಆನ್ ಲೈನ್ ತರಗತಿಗೆ ಪ್ರದ್ಯುತ್ ಸೇರಿ, ೦೫ ತಿಂಗಳಿನಲ್ಲಿಯೇ ಗಾಂಧಾರಿ ವಿದ್ಯೆಯಲ್ಲಿ ನಿಷ್ಣಾತನಾಗುತ್ತಾನೆ.
ಪ್ರತಿನಿತ್ಯ ಬೆಳಿಗ್ಗೆ ಮತ್ತು ರಾತ್ರಿ ಕಡ್ಡಾಯವಾಗಿ ಪ್ರದ್ಯೋತ್ ಕನಿಷ್ಟ ೨೦ ನಿಮಿಷಗಳ ಕಾಲ ಧ್ಯಾನ ಮಾಡಬೇಕಾಗಿದ್ದು, ಧ್ಯಾನದ ಮೂಲಕ ಏಕಾಗ್ರತೆಯನ್ನು ಪಡೆಯುತ್ತಿದ್ದಾನೆ. ಹನುಮಾನ್ ಛಾಲೀಸ್ ಪಠಣ ಕೂಡ ಈ ಧ್ಯಾನದ ಸಂದರ್ಭ ಮಾಡಬೇಕಾಗಿದೆ. ಕಲಿಕೆ ಹಂತದಲ್ಲಿ ‘ತ್ರಾಟಕ್’ ಎಂಬ ಮನಸ್ಸು ಕೇಂದ್ರೀಕರಿಸುವ ಶಿಕ್ಷಣವನ್ನೂ ಪ್ರದ್ಯೋತ್ ಪಡೆಯತ್ತಿದ್ದಾನೆ.
ಈಗಾಗಲೇ ಗೋಣಿಕೊಪ್ಪಲಿನ ಮಕ್ಕಳ ದಸರಾ, ವೀರಾಜಪೇಟೆಯ ಆಯುಧಪೂಜೆ ಸಮಾರಂಭಗಳಲ್ಲಿ ಪ್ರದರ್ಶನ ನೀಡಿರುವ ಪ್ರದ್ಯೋತ್ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನಡೆದ ಪ್ರತಿಭಾ ಕಾರ್ಯಕ್ರಮದಲ್ಲಿಯೂ ವಿಶೇಷ ಪ್ರದರ್ಶನ ನೀಡಿದ್ದಾನೆ.
ಅಂದಾಜು ೧೦-೧೫ ನಿಮಿಷಗಳ ಕಾಲ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಎದುರಿಗಿರುವುದನ್ನು ಗ್ರಹಿಸಬಲ್ಲ ಸಾಮರ್ಥ್ಯ ಹೊಂದಿದ್ದೇನೆ. ಆ ಬಳಿಕ ಕಣ್ಣು ಮಂಜಾದ ಅನುಭವವಾಗುತ್ತದೆ. ಬಳಿಕ ಮತ್ತೆ ೧೦-೧೫ ನಿಮಿಷ ವಿಶ್ರಾಂತಿ ಪಡೆದುಕೊಂಡು ಮತ್ತೆ ಕತ್ತಲಲ್ಲಿ ಎದುರಿಗಿರುವುದನ್ನು ಗ್ರಹಿಸಬಲ್ಲೆ ಎಂದು ಪ್ರದ್ಯೋತ್ ಹೇಳುತ್ತಾನೆ. ಪ್ರಾರಂಭಿಕ ಹಂತದಲ್ಲಿ ಶ್ವೇತ ಕರವಸ್ತ್ರ ಕಟ್ಟಿಕೊಂಡು ಅಭ್ಯಾಸ ಮಾಡುತ್ತಿದ್ದೆ. ಈಗ ಪ್ರದರ್ಶನ ಸಂದರ್ಭ ದಪ್ಪನೆಯ ಕಪ್ಪು ಬಟ್ಟೆಯನ್ನು ಗಟ್ಟಿಯಾಗಿ ಕಣ್ಣಿಗೆ ಬಿಗಿದುಕೊಂಡು ಎದುರಿಗಿರುವುದನ್ನು ಗ್ರಹಿಸುತ್ತೇನೆ ಎಂದೂ ಪ್ರದ್ಯೋತ್ ಹೇಳುತ್ತಾನೆ.
ಮಗನ ಪ್ರತಿಭೆ ಬಗ್ಗೆ ಅಪಾರ ಹೆಮ್ಮೆಯಿದೆ. ಸತತ ಅಭ್ಯಾಸದಿಂದ ಈ ವಿದ್ಯೆ ಮತ್ತು ಸಾಧನೆ ಸಾಧ್ಯವಾಗಿದೆ ಎಂದು ಈತನ ಪೋಷಕರಾದ ಪ್ರಭಾತ್ ಕಿರಣ್ ಎನ್.ಪಿ. ಮತ್ತು ಶ್ವೇತಾ ಕಿರಣ್ ಹೆಮ್ಮೆಯಿಂದ ಹೇಳುತ್ತಾರೆ.
ಪ್ರದ್ಯೋತ್‌ನಿಗೆ ಮನಸ್ಸಿನ ಹತೋಟಿ ಮತ್ತು ಧ್ಯಾನಕ್ಕೆ ಅಗತ್ಯವಾದ ಏಕಾಗ್ರತೆ ಬಹಳ ಚೆನ್ನಾಗಿದೆ. ಸಾಮಾನ್ಯವಾಗಿ ಚಿಕ್ಕಂದಿನಲ್ಲಿ ಮಕ್ಕಳಿಗೆ ಇಂಥ ಏಕಾಗ್ರತೆ ಬಹಳ ಸುಲಭವಾಗಿ ಸಿಗುತ್ತದೆ. ಪ್ರದ್ಯೋತ್ ಛಲಬಿಡದೆ ಆಸಕ್ತಿಯೊಂದಿಗೆ ಗಾಂಧಾರಿ ವಿದ್ಯೆಯ ಮೂಲಕ ಗ್ರಹಣ ಶಕ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ ಎಂದು ಹೆಮ್ಮೆಯಿಂದ ಈತನ ಚಿಕ್ಕಮ್ಮ ಶಿಕ್ಷಕಿಯಾಗಿರುವ ಸೌಮ್ಯ ಎನ್ ಹೇಳುತ್ತಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹಾಯಾಗಿ ಸೈಕಲ್ ಸವಾರಿ ಕೂಡ ಮಾಡಬಲ್ಲ ಪ್ರದ್ಯೋತ್ ಭಗವದ್ಗೀತೆ ಯಾವ ಅಧ್ಯಾಯವನ್ನಾದರೂ ಕಣ್ಣಿಗೆ ಕಟ್ಟುವಂತೆ ಕಣ್ಣು ಕಟ್ಟಿ ಹೇಳುತ್ತಾನೆ.!
ಪ್ರದ್ಯೋತ್ ಗೋಣಿಕೊಪ್ಪಲಿನ ಕಾಪ್ಸ್ ಶಾಲೆಯಲ್ಲಿ ೫ನೇ ತರಗತಿ ವಿದ್ಯಾರ್ಥಿಯಾಗಿದ್ದು ಈತನ ಸಹಪಾಠಿಗಳು ಆಗಾಗ್ಗೆ ಎದುರಿಗಿರುವ ವಸ್ತು ಯಾವುದು ಎಂದು ಕಣ್ಣುಮುಚ್ಚಿಕೊಂಡು ಹೇಳು ಎಂದು ಕೋರುವುದು ಕೂಡ ಪ್ರದ್ಯೋತ್‌ಗೆ ಸಂತೋಷದ ಅನುಭವ ನೀಡಿದೆಯಂತೆ!
ಕತ್ತಲಲ್ಲಿ ಕರಡಿಗೆ ಜಾಮೂನ್ ತಿನ್ನಿಸೋಕೆ ಹೋಗಬೇಡ್ರಿ.. ಎಂಬ ಸಿನಿಮಾ ಹಾಡಿನ ಸಾಲು ಅಥವಾ ಕಡು ಕತ್ತಲಲ್ಲಿ ಕರಿಬೆಕ್ಕು ಹುಡುಕಬಲ್ಲಿರಾ ಎಂಬ ಪ್ರಶ್ನೆಗೆ ಪ್ರದ್ಯೋತ್ ಬಳಿ ಉತ್ತರವಿದೆ.!
ಇಷ್ಟಕ್ಕೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕತ್ತಲನ್ನು ನೋಡುವ ಪ್ರದ್ಯೋತ್‌ಗೆ ಎದುರಿಗೆ ಹೇಗೆ ಕಾಣುತ್ತದೆ ಎಂಬ ಕುತೂಹಲದ ಪ್ರಶ್ನೆಗೆ ಪ್ರದ್ಯೋತ್ ಉತ್ತರಿಸಿದ್ದು ಹೀಗೆ.
ಕಣ್ಣಿಗೆ ಬಟ್ಟೆ ಕಟ್ಟಿಕೊಂಡ ಕೂಡಲೇ ಓಂಕಾರ ಧ್ಯಾನದೊಂದಿಗೆ ಮನಸ್ಸನ್ನು ಕೇಂದ್ರೀಕರಿಸಿಕೊಳ್ಳುತ್ತೇನೆ. ಹಣೆಯ ಮಧ್ಯ ಭಾಗಕ್ಕೆ ಎಲ್ಲಾ ಗಮನವನ್ನು ಕೇಂದ್ರೀಕರಿಸುತ್ತೇನೆ. ಆಗ ಅಲ್ಲಿರುವ ಒಳಗಣ್ಣು ತೆರೆದಂತಾಗುತ್ತದೆ.
ಈ ಮೂರನೇ ಕಣ್ಣು ಅಥವಾ ಒಳಗಣ್ಣಿನ ಮೂಲಕ ಮುಂದಿರುವುದನ್ನು ಸುಲಭವಾಗಿ ಗ್ರಹಿಸುತ್ತೇನೆ. ಮನಸ್ಸಿನ ಏಕಚಿತ್ತದ ಕೇಂದ್ರೀಕರಣ ಈ ಸಂದರ್ಭ ಅತ್ಯಗತ್ಯ. ಕಷ್ಟ ಕೂಡ, ಆ ಸಂದರ್ಭ ಅರೆಕ್ಷಣ ಕೂಡ ಬೇರೆ ವಿಚಾರಗಳತ್ತ ಮನಸ್ಸು ಹೋಗಬಾರದು. ಹೀಗಾದಾಗಲೇ ಮೂರನೇ ಕಣ್ಣು ತೆರೆದುಕೊಂಡು ಎದುರಿಗಿರುವುದನ್ನು ನೋಡುವ ಶಕ್ತಿ ಸಿದ್ದಿಸುತ್ತದೆ.
ಪ್ರದ್ಯೋತ್ ಹೇಳಿಕೊಳ್ಳುವಂತೆ, ಈ ಸಾಧನೆಯಿಂದ ನನಗೇನು ಫೇಮಸ್ ಆಗಬೇಕೆಂದಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಲಿತು, ಬೇರೆಯವರಿಗೂ ಗಾಂಧಾರಿಯAಥ ವಿಶೇಷ ವಿದ್ಯೆ ಕಲಿಸಬೇಕೆಂಬುದೇ ನನ್ನ ಉದ್ದೇಶವಾಗಿದೆ. !
ಪ್ರಾಚೀನ ಕಥೆಗಳಲ್ಲಿಯೂ ಗಾಂಧಾರಿ ವಿದ್ಯೆ ಬಗ್ಗೆ ಸಾಕಷ್ಟು ಮಾಹಿತಿ ದೊರಕುತ್ತದೆ. ಪ್ರತೀಯೋರ್ವರಲ್ಲಿಯೂ ಮೂರನೇ ಕಣ್ಣು ಇದ್ದೇ ಇರುತ್ತದೆ. ಆದರೆ ಅಂಥ ಒಳನೋಟವನ್ನು ತೆರೆಯುವ ಸಾಧನೆ ಸುಲಭಸಾಧ್ಯವಲ್ಲ. ಮನಸ್ಸಿನ ಕೇಂದ್ರೀಕರಣವೇ ಈ ಮೂರನೇ ಕಣ್ಣಿನ ತೆರೆಯುವಿಕೆಗೆ ಅತೀ ಮುಖ್ಯ.
ಇಂಥ ಸಾಧನೆ ಮಾಡಿದ ಕೊಡಗಿನ ಬಾಲ ಪ್ರತಿಭೆಯಾಗಿ ಪ್ರದ್ಯೋತ್ ಕಿರಣ್ ಕಂಗೊಳಿಸುತ್ತಾನೆ.
ಪ್ರದ್ಯೋತ್ ತಂದೆ ಪ್ರಭಾತ್ ಕಿರಣ್ ಅವರ ಸಂಪರ್ಕ ಸಂಖ್ಯೆ - ೯೯೪೫೬೩೫೦೮೪.
- ಅನಿಲ್ ಎಚ್.ಟಿ.