ವೀರಾಜಪೇಟೆ, ಡಿ. ೩: ಕನ್ನಡ ಭಾಷೆಯನ್ನು ಉಚ್ಚರಿಸುವ ಸಂದರ್ಭದಲ್ಲಿ ವಿವಿಧ ಭಾಷೆಗಳ ಒತ್ತಡದಿಂದಾಗಿ ಭಾಷೆ ಪ್ರಯೋಗದಲ್ಲಿ ಸ್ಪಷ್ಟ ಕನ್ನಡ ಕಣ್ಮರೆಯಾಗುತ್ತಿದೆ ಎಂದು ನಿವೃತ್ತ ಶಿಕ್ಷಕರಾದ ಅಬ್ದುಲ್ ಲತೀಫ್ ಕಳವಳ ವ್ಯಕ್ತಪಡಿಸಿದರು.
ಎಂಬಾರ್ಕ್ ಅಸೋಸಿಯೇಷನ್ ವೀರಾಜಪೇಟೆ ವತಿಯಿಂದ ೭೦ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ವಿಷಯಗಳ ಸ್ಪಷ್ಟ ಕನ್ನಡ ಭಾಷಣ ಸ್ಪರ್ಧೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಮಾತನಾಡಿ, ಭಾಷೆಯನ್ನು ಧೀಮಂತಗೊಳಿಸಲು ಶಬ್ದ ಉಚ್ಚರಣೆ, ಅರ್ಥ ಮತ್ತು ಗ್ರಹಿಸಿ ಮಾತನಾಡುವುದು ಮುಖ್ಯ. ಕನ್ನಡ ಭಾಷೆಗೆ ತನ್ನದೆಯಾದ ಸ್ಥಾನಮಾನಗಳಿವೆ. ಆಧುನಿಕ ಕನ್ನಡವು ಇಂದು ಹಲವು ಭಾಷೆಗಳ ಬೆರೆಕೆಯಿಂದಾಗಿ ತಾಯಿ ಭಾಷೆಯು ಕಲಬೆರೆಕೆಯ ಭಾಷೆಯಾಗುತ್ತಿರುವುದು ಕಳವಳಕಾರಿ ಸಂಗತಿ.
ಕನ್ನಡ ಭಾಷೆಯು ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ಕನ್ನಡ ಚಿರಾಯುವಾಗಿರುವಂತೆ ದಿನನಿತ್ಯ ಅಚ್ಚಕನ್ನಡದಲ್ಲಿ ಉಚ್ಚರಿಸಿ ಮಾತನಾಡಿದರೆ ಇದೇ ನಾವು ಕನ್ನಡ ತಾಯಿಗೆ ನೀಡುವ ಕಾಣಿಕೆ ಎಂದು ಹೇಳಿದರು. ನಿವೃತ್ತ ಶಿಕ್ಷಕ ಚಾರ್ಲ್ಸ್ ಡಿಸೋಜಾ ಮಾತನಾಡಿ, ಕನ್ನಡ ಭಾಷೆ ಜೀವಂತ ಎಂದು ಪರಿಗಣಿಸಬೇಕು. ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಶಿಕ್ಷಣ ಕನ್ನಡ ಮಾದ್ಯಮದಲ್ಲಿ ಪೂರೈಸಿದ ಯುವ ಸಮುದಾಯವು ದಿನಬಳಕೆಗಾಗಿ ಬೆರೆಕೆ ಕನ್ನಡದಲ್ಲಿ ವ್ಯವಹರಿಸುವುದು ಕಳವಳಕಾರಿ ಸಂಗತಿ. ಕನ್ನಡ ಉಸಿರು ಕನ್ನಡ ಹಸಿರು ಎಂದು ಚಿಂತಿಸಿ ಎಂದು ಕಿವಿ ಮಾತು ಹೇಳಿದರು.
ಎಂಬಾರ್ಕ್ ಅಸೋಸಿಯೇಷನ್ ಸಂಸ್ಥೆಯ ಅಧ್ಯಕ್ಷ ದಿವಾಕರ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯ ಶಿಕ್ಷಣದಿಂದ ಕಾಲೇಜು ಶಿಕ್ಷಣ ಪೂರೈಸಿ ಜೀವನ ಪ್ರಾರಂಭಿಸುವ ಕ್ಷಣದಲ್ಲಿ ಕನ್ನಡ ಬರೆಯಲು ತಿಳಿದಿಲ್ಲ, ವ್ಯವಹರಿಸಲು ತಿಳಿದಿಲ್ಲ ಎಂದು ಪರಿತಪಿಸುತ್ತಿರುವುದು ಪ್ರಸ್ತುತ ಸಮಾಜದಲ್ಲಿ ಕಂಡು ಬರುತ್ತಿದೆ ಎಂದರು.
ಕರ್ನಾಟಕದ ಜಾನಪದ ಕಲೆಗಳು ವಿಷಯದಲ್ಲಿ ೧೦ ನೇ ತರಗತಿ ವಿದ್ಯಾರ್ಥಿ ನಜೀರುದ್ದೀನ್ ಹೆಚ್. ಎಂ (ಪ್ರ) ಜ. ತಿಮ್ಮಯ್ಯ ವಿಷಯದಲ್ಲಿ ಮೊಹಮ್ಮದ್ ಇಷಾಮ್ ಕೆ.ಎಸ್. (ದ್ವಿ), ಡಾ. ರಾಜ್ ಕುಮಾರ್ ವಿಷಯದಲ್ಲಿ ಲಾವಣ್ಯ ಪಿ.ಟಿ(ತೃ), ಸ್ಥಾನ ಪಡೆದುಕೊಂಡರು. ಒಟ್ಟು ೧೮ ವಿಧ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಮದನ್, ಪತ್ರಕರ್ತೆ ಉಷಾ ಪ್ರೀತಂ ಉಪಸ್ಥಿತರಿದ್ದರು.