ಕೂಡಿಗೆ, ಡಿ. ೫: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮೀಪದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗು ಸೇತುವೆ ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದ್ದು, ಈ ಬಗ್ಗೆ ‘ಶಕ್ತಿ’ ವರದಿ ಮಾಡಿದ ಬೆನ್ನಲ್ಲೇ ಸ್ಥಳಕ್ಕೆ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾ.೪ ರಂದು ‘ಶಕ್ತಿ’ಯಲ್ಲಿ ಪ್ರಕಟವಾದ ‘ಅಪಘಾತ ಸಂಭವಿಸಿದರೆ ಯಾರು ಹೊಣೆ?’ ಎಂಬ ವರದಿ ಗಮನಿಸಿದ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವರ್ಗದವರು ಸ್ಥಳಕ್ಕೆ ಭೇಟಿ ನೀಡಿ ತೂಗು ಸೇತುವೆಯನ್ನು ಪರಿಶೀಲಿಸಿದರು.
ಸೇತುವೆ ಮೇಲೆ ನಿಂತು ಕಾವೇರಿ ನದಿ ವೀಕ್ಷಣೆಗೆ ನಿರ್ಬಂಧವಿಧಿಸುವAತೆ ಹಾಗೂ ಒಂದೇ ಸಮನೆ ೪, ೫ ಮಂದಿಗಿAತ ಹೆಚ್ಚು ಜನರು ಸೇತುವೆ ದಾಟುವುದನ್ನು ನಿಷೇಧಿಸಲಾಗಿದೆ ಎಂಬ ಸೂಚನಾ ಫಲಕವನ್ನು ಅಳವಡಿಸುವಂತೆ ತಹಶೀಲ್ದಾರರು ಪಂಚಾಯಿತಿ ಅಧಿಕಾರಿ ವರ್ಗದವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಿರಣ್ ಗೌರಯ್ಯ ಅವರು, ಕಳೆದ ಮೂರು ತಿಂಗಳ ಹಿಂದೆ ಹೆಚ್ಚು ಮಳೆಯಿಂದಾಗಿ ಸಾರ್ವಜನಿಕರಿಗೆ ಸೇತುವೆ ಬಳಸಲು ನಿರ್ಬಂಧ ಹೇರಲಾಗಿತ್ತು. ಹೊರ ಜಿಲ್ಲೆಯಿಂದ ಹೆಚ್ಚು ಪ್ರವಾಸಿಗರು ಜಿಲ್ಲೆಗೆ ಬರುವ ಸಂದರ್ಭದಲ್ಲಿ ವೀಕ್ಷಣೆಗೆ ಅವಕಾಶ ನೀಡದಂತೆ ಕ್ರಮ ವಹಿಸಲಾಗುವುದು. ಇದೀಗ ಸೇತುವೆ ಶಿಥಿಲಾವಸ್ಥೆಯ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆÀ ತರಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕಂದಾಯ ಇಲಾಖೆಯ ಪರಿವೀಕ್ಷಣಾಧಿಕಾರಿ ಸಂತೋಷ್, ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿಕುಮಾರ್, ಗ್ರಾಮ ಲೆಕ್ಕಾಧಿಕಾರಿ ಮಹಮದ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.