ವೀರಾಜಪೇಟೆ, ಡಿ. ೬: ವೀರಾಜಪೇಟೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸರಕಾರದಿಂದ ಅನುದಾನ ಬಂದಿದೆ, ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಆಗಿ ಗುತ್ತಿಗೆದಾರರಿಗೆ ನೀಡಲಾಗಿದೆ. ಇನ್ನು ಅಧಿಕಾರಿಗಳು ತಡ ಮಾಡದೇ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಟ್ಟಣ ಹಾಗೂ ಇತರ ಎಲ್ಲಾ ರಸ್ತೆಗಳ ಅಭಿವೃದ್ಧಿ ಕಾಮಗಾರಿ ನಡೆಸುವಂತೆ ವೀರಾಜಪೇಟೆ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಹೇಳಿದರು.

ವೀರಾಜಪೇಟೆ ಪುರಸಭೆ ವ್ಯಾಪ್ತಿಯ ಗಾಂಧಿನಗರದಲ್ಲಿ ರೂ.೧೨ ಲಕ್ಷ ಅನುದಾನದಲ್ಲಿ ನೂತನವಾಗಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆ ಲೋಕಾರ್ಪಣೆಗೊಳಿಸಿ ಬಳಿಕ ಪಟ್ಟಣದ ಕೀರ್ತಿ ಲೇಔಟ್ ಬಡಾವಣೆಯಲ್ಲಿ ರೂ.೧೦ ಲಕ್ಷ ಅನುದಾನದಲ್ಲಿ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿದ ಶಾಸಕ ಪೊನ್ನಣ್ಣ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ವೀರಾಜಪೇಟೆ-ಮಡಿಕೇರಿ ರಸ್ತೆಯ ಬೇತ್ರಿಯಲ್ಲಿ ಕುಡಿಯುವ ನೀರು ಪೈಪ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿರುವ ಕಾರಣ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತದೆ. ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಂದಿದ್ದು ಕಾಮಗಾರಿಗಳು ಸದ್ಯದಲ್ಲಿ ನಡೆಯಲಿವೆ. ಈ ವರ್ಷ ಭಾರೀ ಮಳೆಯಿಂದಾಗಿ ಪಟ್ಟಣ ಹಾಗೂ ಗ್ರಾಮೀಣ ಭಾಗದ ರಸ್ತೆಗಳು ಬಹುತೇಕ ದುಸ್ಥಿತಿಯಲ್ಲಿದ್ದು, ಈಗಾಗಲೇ ಗ್ರಾಮೀಣ ಭಾಗದ ಕೆಲವು ರಸ್ತೆಗಳು ಕಾಂಕ್ರೀಟ್, ಇತರೆಡೆ ಡಾಂಬರೀಕರಣಗೊAಡಿದ್ದು ಈಗ ವೀರಾಜಪೇಟೆ ಪಟ್ಟಣದ ಮುಖ್ಯ ರಸ್ತೆ ರೂ. ೫ ಕೋಟಿ ೬೦ ಲಕ್ಷ ಅನುದಾನದಲ್ಲಿ ರಸ್ತೆಯ ಕಾಮಗಾರಿ ಪ್ರಾರಂಭಿಸಲಿದ್ದು ರಸ್ತೆ ಅಗಲೀಕರಣ ಸಂದರ್ಭ ರಸ್ತೆ ಬದಿಯಲ್ಲಿರುವ ನಿವಾಸಿಗಳು ಸಾರ್ವಜನಿಕ ರಸ್ತೆಗೆ ಜಾಗ ಬಿಟ್ಟುಕೊಡುವ ಮೂಲಕ ಸಹಕಾರ ನೀಡುವಂತಾಗಬೇಕು ಎಂದರು.

ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ, ಅಭಿಯಂತರ ಎನ್.ಪಿ. ಹೇಮ್‌ಕುಮಾರ್, ಸಹಾಯಕ ಮುರುಳಿ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ನಗರ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಪುರಸಭೆ ಮಾಜಿ ಅಧ್ಯಕ್ಷರಾದ ದೇಚಮ್ಮ ಕಾಳಪ್ಪ, ಮಾಜಿ ಸದಸ್ಯರಾದ ಡಿ.ಪಿ. ರಾಜೇಶ್, ಎಸ್.ಹೆಚ್. ಮತೀನ್, ಮಹಮ್ಮದ್ ರಾಫಿ, ಆತೀಫ್ ಮನ್ನ, ಬ್ಲಾಕ್ ಯುವ ಕಾಂಗ್ರೆಸ್‌ನ ಶಬೀರ್, ಮುಖಂಡರಾದ ವಿ.ಕೆ. ಸತೀಶ್, ಎ.ವಿ. ಮಂಜುನಾಥ್, ಜೋಕಿಂ ರಾಡ್ರಿಗಸ್ ಹಾಜರಿದ್ದರು.

ಕಾಂಕ್ರೀಟ್ ರಸ್ತೆ ಉದ್ಘಾಟನೆ ಸಂದರ್ಭ ಗಾಂಧಿನಗರದಲ್ಲಿ ಶಾಸಕ ಪೊನ್ನಣ್ಣ ಕಾಂಕ್ರೀಟ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡಿದರು. ಬಳಿಕ ಶಾಸಕರನ್ನು ಸನ್ಮಾನಿಸಲಾಯಿತು.

ಈ ವೇಳೆ ಕೋಲತಂಡ ಬೋಪಯ್ಯ, ಸ್ಥಳೀಯ ವಾರ್ಡ್ ಮಾಜಿ ಸದಸ್ಯೆ ಜೂನಾ ಸುನಿತ, ಡಾ. ಶ್ರೀನಿವಾಸ್, ಶೋಭ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ರವಿ ಉತ್ತಪ್ಪ, ಉಪಾಧ್ಯಕ್ಷರಾದ ಕಾಣತಂಡ ಜಗದೀಶ್, ಸ್ಥಳಿಯ ನಿವಾಸಿಗಳಾದ ಮಿಟ್ಟು ಕಾವೇರಪ್ಪ, ಸಾಬು ಪೂವಯ್ಯ, ಪುಗ್ಗೇರ ಎಸ್. ನಂದ, ಸಿ.ಎನ್. ಗಂಗಾಧರ, ಪಿ.ಜಿ. ಸುಮೇಶ್, ಗುತ್ತಿಗೆದಾರ ಸ್ವಾಮಿ ಮತ್ತು ನವೀನ್, ಪಕ್ಷದ ಮುಖಂಡರು ಮತ್ತಿತರರು ಹಾಜರಿದ್ದರು.