ಪೊನ್ನಂಪೇಟೆ, ಡಿ. ೬: ಮಾಯಾಮುಡಿಯ ರಿಮ್ ಫೈರ್ ಶೂಟರ್ಸ್ ಮತ್ತು ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ೭ರಂದು (ಇಂದು) ಮಾಯಮುಡಿಯಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಮುಕ್ತ ಸ್ಪರ್ಧೆ ತೋಕ್ ನಮ್ಮೆ ಆಯೋಜಿಸಲಾಗಿದೆ. ಮಾಯಮುಡಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದೆ ಎಂದು ತೋಕ್ ನಮ್ಮೆಯ ಸಂಚಾಲಕ ಸಣ್ಣುವಂಡ ವಿನಯ್ ಅಯ್ಯಪ್ಪ ತಿಳಿಸಿದ್ದಾರೆ.

ಸ್ಪರ್ಧೆಯು .೨೨ ರೈಫಲ್ ಮತ್ತು ೧೨ನೇ ಬೋರ್ ಕೋವಿಯ ಪ್ರತ್ಯೇಕ ಎರಡು ವಿಭಾಗಗಳಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ವಿಜೇತರಾಗುವ ಸ್ಪರ್ಧಿಗಳಿಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನದ ವಿಶೇಷ ಪಾರಿತೋಷಕ ಸೇರಿದಂತೆ ಆಕರ್ಷಕ ನಗದು ಬಹುಮಾನವನ್ನು ನೀಡಲಾಗುವುದು ಎಂದು ಮಾಹಿತಿ ನೀಡಿರುವ ವಿನಯ್ ಅಯ್ಯಪ್ಪ ಅವರು, ಸ್ಪರ್ಧಿಗಳಿಗೆ ಸ್ಥಳದಲ್ಲೇ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ಬೆಳಿಗ್ಗೆ ೧೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಮಾಜಿ ಎಂಎಲ್ಸಿ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ಅವರು ತೋಕ್ ನಮ್ಮೆಯನ್ನು ಉದ್ಘಾಟಿಸಲಿದ್ದಾರೆ. ಗೋಣಿಕೊಪ್ಪಲಿನ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷ ಕೊಟ್ಟಂಗಡ ವಿಜು ದೇವಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಗೋಣಿಕೊಪ್ಪಲು ಎಪಿಎಂಸಿಯ ಮಾಜಿ ಅಧ್ಯಕ್ಷ ಕಾಳಪಂಡ ಟಿ. ಟಿಪ್ಪು ಬಿದ್ದಪ್ಪ, ಯುವ ಉದ್ಯಮಿ ಕಾಳಪಂಡ ಜೆ. ಬೋಪಣ್ಣ ಮತ್ತು ಕೋಣನಕಟ್ಟೆಯ ಕಾಫಿ ಬೆಳೆಗಾರರಾದ ಚೆಪ್ಪುಡಿರ ಕಿಟ್ಟು ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ವಿನಯ್ ಅಯ್ಯಪ್ಪ ವಿವರಿಸಿದರು.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಗುವುದು. ಈ ಕಾರ್ಯಕ್ರಮಕ್ಕೆ ಮಾಯಮುಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆಪಟ್ಟಿರ ಟಾಟು ಮೊಣ್ಣಪ್ಪ, ಮಾಯಮುಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಆಪಟ್ಟಿರ ಬೋಪಣ್ಣ, ಸದಸ್ಯರಾದ ಮಲ್ಲೇಂಗಡ ಮಮತಾ ಪೂಣಚ್ಚ, ಮಾಯಮುಡಿಯ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಸಿ. ಸುಧೀರ್, ಕಾಫಿ ಬೆಳೆಗಾರರಾದ ಸಣ್ಣುವಂಡ ಸರೋಜ, ಆಪಟ್ಟಿರ ಶ್ಯಾಮ್ ಸೋಮಯ್ಯ, ಗೋಣಿಕೊಪ್ಪಲಿನ ಟಾಟಾ ಮೊಟರ್ಸ್ ನ ಪ್ರಧಾನ ವ್ಯವಸ್ಥಾಪಕರಾದ ಪುಳ್ಳಂಗಡ ಸಿಮ್ ಕುಟ್ಟಪ್ಪ, ವ್ಯವಸ್ಥಾಪಕ ಮನೆಯಪಂಡ ಬೋಪಣ್ಣ, ಉದ್ಯಮಿಗಳಾದ ತಾತಂಡ ಸೋಮಯ್ಯ, ಮಾಚಿಮಾಡ ಮಧುಮಂದಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿನಯ್ ಅಯ್ಯಪ್ಪ ತಿಳಿಸಿದ್ದಾರೆ.