ವೀರಾಜಪೇಟೆ, ಡಿ. ೭: ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರ ಸೂಚನೆಯಂತೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಮುಖ್ಯ ಅಭಿಯಂತರ ಹೇಮ ಕುಮಾರ್ ಅವರ ತಂಡ ಪೊಲೀಸ್ ಇಲಾಖೆ ಸಮ್ಮುಖದಲ್ಲಿ ರಸ್ತೆಯ ಅಗಲೀಕರಣ ಕಾರ್ಯಕ್ಕೆ ಚಾಲನೆ ನೀಡಿತು.
ಅನೇಕ ವರ್ಷಗಳ ಸಾರ್ವಜನಿಕರ ಬೇಡಿಕೆಯಾದ ರಸ್ತೆ ಅಗಲೀಕರಣ ಮತ್ತು ನೂತನ ರಸ್ತೆಯ ಕಾಮಗಾರಿ ಮಾಡಲು ಅನೇಕ ಸಮಸ್ಯೆ ಎದುರಾಗಿದ್ದವು. ಅಲ್ಲದೆ ವೀರಾಜಪೇಟೆ ತೆಲುಗರ ಬೀದಿ, ಜೈನರ ಬೀದಿ, ದೊಡ್ಡಟ್ಡಿ ಚೌಕಿ, ಎಫ್.ಎಂ.ಸಿ. ರಸ್ತೆ, ಗಡಿಯಾರ ಕಂಬದ ಮೂಲಕ ಮುಖ್ಯ ರಸ್ತೆಯಿಂದ ಮಲಬಾರ್ ರಸ್ತೆಯವರೆಗೆ ರಸ್ತೆ ಸಂಪೂರ್ಣ ಗುಂಡಿಮಯವಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗಿತ್ತು. ಅನೇಕ ಬಾರಿ ಗುಂಡಿ ಮುಚ್ಚಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಶಾಸಕ ಪೊನ್ನಣ್ಣ ಅವರು ರಸ್ತೆ ವೀಕ್ಷಣೆ ಮಾಡಿ ರಸ್ತೆ ಅಗಲೀಕರಣ ಮಾಡದೇ ಗುಂಡಿಮುಚ್ಚಿ ಯಾವುದೇ ಪ್ರಯೋಜನವಿಲ್ಲ. ನೂತನ ರಸ್ತೆಗೆ ಈಗಾಗಲೇ ಹಣ ಬಿಡುಗಡೆ ಆಗಿದೆ. ಟೆಂಡರ್ ಕೂಡ ಆಗಿದ್ದು ಗುತ್ತಿಗೆದಾರರು ಕೂಡ ಕಾಮಗಾರಿ ಮಾಡಲು ತಯಾರಿದ್ದಾರೆ. ಆದ್ದರಿಂದ ರಸ್ತೆಯ ಎರಡೂ ಬದಿಯಲ್ಲಿ ಇರುವ ಕಟ್ಟಡ ಮಾಲೀಕರು ಸ್ವಇಚ್ಛೆಯಿಂದ ಸರಕಾರ ಗುರುತು ಮಾಡಿದ ಜಾಗವನ್ನು ಬಿಟ್ಟು ಕೊಡುವಂತೆ ಮನವಿ ಮಾಡಿದ್ದರು.
ಈ ಹಿನ್ನಲೆಯಲ್ಲಿ ರಸ್ತೆ ಅಗಲೀಕರಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಮಾತನಾಡಿದ ಮುಖ್ಯಾಧಿಕಾರಿ ನಾಚಪ್ಪ ಅವರು, ರಸ್ತೆಯ ಪಕ್ಕದಲ್ಲಿ ಇರುವ ಅಂಗಡಿ, ಮನೆ, ಕಟ್ಟಡದ ಮಾಲೀಕರಿಗೆ ಅನೇಕ ಬಾರಿ ಪುರಸಭೆ ವತಿಯಿಂದ ನೋಟೀಸ್ ನೀಡಲಾಗಿದೆ.
ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇನ್ನೂ ಅನೇಕರು ಜಾಗವನ್ನು ಬಿಟ್ಟು ಕೊಡುವುದಾಗಿ ವಾಗ್ದಾನ ನೀಡಿದ್ದಾರೆ ಎಂದು ಮಾಹಿತಿ ನೀಡಿ, ನೂತನ ರಸ್ತೆಯ ಕಾಮಗಾರಿಗೆ ಸರ್ವರೂ ಸಹಕಾರ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಕಚೇರಿಯ ಸಿಬ್ಬಂದಿ ಹಾಜರಿದ್ದರು.