ಸೋಮವಾರಪೇಟೆ, ಡಿ. ೭: ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹಾಗೂ ಏಕಾಗ್ರತೆಯೊಂದಿಗೆ ವಿದ್ಯಾಭ್ಯಾಸದಲ್ಲಿ ತೊಡಗಬೇಕು. ಯಾವುದೇ ಕಾರಣಕ್ಕೂ ಗುರಿ ಸಾಧನೆಯಿಂದ ಹಿಂದೆ ಸರಿಯಬಾರದು ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕೊಡಗು ಜಿಲ್ಲಾ ನಿರ್ದೇಶಕ ಹೆಚ್.ಎನ್. ರವೀಂದ್ರ ಹರಪಳ್ಳಿ ಕರೆ ನೀಡಿದರು. ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಸಭಾಂಗಣದಲ್ಲಿ ಆಯೋಜಿಸಿದ್ದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. ೯೫ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಜಿಲ್ಲೆಯ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾಭ್ಯಾಸದಲ್ಲಿ ಏಳಿಗೆ ಕಾಣಬೇಕಾದರೆ ಕಠಿಣ ಪರಿಶ್ರಮ ಅಗತ್ಯ. ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಯತ್ತ ಮಾತ್ರ ಗಮನ ಹರಿಸಬೇಕು. ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣ ನಿರ್ಮಿಸಿಕೊಡಬೇಕು. ಮಾಹಿತಿ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳದೇ, ಭವಿಷ್ಯತ್ತಿಗೆ ಪೂರಕವಾಗುವಂತೆ ಬಳಸಬೇಕೆಂದು ಇದೇ ಸಂದರ್ಭ ಕಿವಿಮಾತು ಹೇಳಿದರು.
ದೇಶದ ಮಹಾನ್ ದಾರ್ಶನಿಕರು, ಸಮಾಜ ಸೇವಕರ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದ ಅವರು, ಹಲವು ಅಡೆತಡೆಗಳ ನಡುವೆಯೂ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಸೋಮವಾರಪೇಟೆಯಲ್ಲಿ ಒಕ್ಕಲಿಗರ ಸಂಘದಿAದ ವಿದ್ಯಾರ್ಥಿ ವಸತಿ ನಿಲಯ ಸ್ಥಾಪನೆಗೆ ಕ್ರಮವಹಿಸಲಾಗಿದೆ. ಸುಮಾರು ರೂ. ೯.೯೦ ಕೋಟಿ ವೆಚ್ಚದಲ್ಲಿ ವಸತಿ ನಿಲಯ ನಿರ್ಮಾಣವಾಗಲಿದೆ ಎಂದರು. ಮುಂದಿನ ದಿನಗಳಲ್ಲಿ ಕುಶಾಲನಗರ ಹಾಗೂ ಮಡಿಕೇರಿ ಯಲ್ಲಿಯೂ ವಸತಿ ನಿಲಯ ಸ್ಥಾಪನೆ ಮಾಡಲಾಗುವುದು. ಸೋಮವಾರ ಪೇಟೆಯಲ್ಲಿ ಹೃದ್ರೋಗ ತಪಾಸಣಾ ಘಟಕದ ಸ್ಥಾಪನೆಗೂ ಅನುಮೋದನೆ ಪಡೆಯಲಾಗಿದೆ ಎಂದು ರವೀಂದ್ರ ತಿಳಿಸಿದರು. ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದ ಗೌಡಳ್ಳಿ ವಿಎಸ್‌ಎಸ್‌ಎನ್ ನಿರ್ದೇಶಕ ಹೆಚ್.ಆರ್. ಸುರೇಶ್ ಮಾತನಾಡಿ, ಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಸಂಘಟನೆಯ ಜವಾಬ್ದಾರಿ.
ಹರಪಳ್ಳಿ ರವೀಂದ್ರ ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಘದಿAದ ಮಾತ್ರವಲ್ಲದೆ ವೈಯುಕ್ತಿಕವಾಗಿಯೂ ಸಾಕಷ್ಟು ನೆರವು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಪಡೆಯಲು ಸಾಕಷ್ಟು ಅವಕಾಶಗಳಿದ್ದು, ತಂತ್ರಜ್ಞಾನವನ್ನು ಉತ್ತಮ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಯಾರೂ ಕಿತ್ತುಕೊಳ್ಳಲಾಗದ ಸಂಪತ್ತು ವಿದ್ಯೆ. ಇದರ ಸಂಪಾದನೆಗೆ ಕಠಿಣ ಪರಿಶ್ರಮ ಅಗತ್ಯ. ಪೋಷಕರು ತಮ್ಮ ಮಕ್ಕಳಿಗೆ ಆಸ್ತಿ ಮಾಡುವ ಬದಲು, ಅವರಿಗೆ ಉತ್ತಮ ವಿದ್ಯೆ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಕರೆ ನೀಡಿದರು. ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಚಕ್ರವರ್ತಿ ಸುರೇಶ್ ಮಾತನಾಡಿ, ವಿದ್ಯೆಯಿಂದ ಮಾತ್ರ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ನಗರಳ್ಳಿ ಬಸಪ್ಪ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ತಾರುಣ್ಯ ಪ್ರಾರ್ಥಿಸಿ, ಶಾಂತಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳು, ಪೋಷಕರು, ಒಕ್ಕಲಿಗರ ಸಂಘದ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.