ಸುಂಟಿಕೊಪ್ಪ, ಡಿ. ೭: ವ್ಯಕ್ತಿತ್ವ ನಿರ್ಮಾಣದಲ್ಲಿ ಶಾಲೆ ಮತ್ತು ಶಿಕ್ಷಕರ ಜವಬ್ದಾರಿ ಬಹುದೊಡ್ಡದಿದ್ದು, ಕೇವಲ ಒಂದು ದಿನ, ಒಂದು ವರ್ಷ, ಸಾವಿರಾರು ದಿನಗಳಲ್ಲಿ ನಡೆಯುವ ಕಾರ್ಯವಲ್ಲ. ನಿರಂತರವಾಗಿ ನಡೆಯುವ ಕಾರ್ಯವಾಗಿದೆ. ಪೋಷಕರು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣವನ್ನು ತಮ್ಮ ಕುಟುಂಬಗಳಲ್ಲಿ ಒದಗಿಸಿದಲ್ಲಿ ಮಾತ್ರ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯವೆಂದು ಗುರುಗಳಾದ ವಿಜಯಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಶಾಲಾ ಆವರಣದಲ್ಲಿ ಮಕ್ಕಳ ಕವಾಯತ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.
ಸಮಾರಂಭದಲ್ಲಿ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ಆರ್ಶೀವಚನ ನೀಡಿ ಮಾತನಾಡಿದರು. ಪೋಷಕರು ಮಕ್ಕಳನ್ನು ಒಮ್ಮೆ ಶಾಲೆಗೆ ಸೇರಿಸಿಬಿಟ್ಟರೆ ತಮ್ಮ ಜವಬ್ದಾರಿ ಮುಗಿಯಿತು ಎಂಬ ಭಾವನೆಯನ್ನು ಹೊಂದಿರ ಬಾರದು. ಮಕ್ಕಳ ಸರ್ವೋತ್ತೋಮುಖ ಬೆಳವಣಿಗೆಗೆ ಶಾಲೆ, ಪೋಷಕರು ಮತ್ತು ಶಿಕ್ಷಕರ ಪಾತ್ರ ಬಹಳ ಮಹತ್ವದೆಂದು ವಿಜಯಕುಮಾರ್ ಹೇಳಿದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ಕುಮಾರ್ ಆಗಮಿಸಿ ಮಾತನಾಡಿ, ತಾವು ಈ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದು, ಈ ಶಾಲೆಯಲ್ಲಿ ನೀಡಿದ ಶಿಕ್ಷಣವು ತನ್ನನ್ನು ಸುಂಟಿಕೊಪ್ಪದ ಪ್ರಥಮ ಪ್ರಜೆಯನ್ನಾಗಿ ರೂಪಿಸಿದೆ ಎಂದರು.
ಮುಖ್ಯ ಅತಿಥಿ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಕೃಷ್ಣಪ್ಪ ಮಾತನಾಡಿ, ಸಂತ ಅಂತೋಣಿ ಶಾಲೆಯು ಉತ್ತಮ ಶಿಕ್ಷಣ ನೀಡುವಿಕೆಗೆ ಹೆಸರಾಗಿದೆ. ಖಾಯಂ ಶಿಕ್ಷಕರ ನೇಮಕಾತಿ ಕೊರತೆ, ಮೊದಲಾದ ಸಮಸ್ಯೆಗಳ ನಡುವೆಯೂ ಸಂತ ಅಂತೋಣಿ ಶಾಲೆಯು ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯವಾದುದು ಎಂದರು.
ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಅರ್ಸುಲಾಯ್ನ್ ಫ್ರಾನ್ಸಿಸ್ಕನ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಫಿಲೋಮೆನ್ ನೊರೋನ್ಹಾ ಅವರು ವಹಿಸಿ ಮಾತನಾಡಿ, ಶಾಲೆಯಲ್ಲಿ ಮೌಲ್ಯಧಾರಿತ ಶಿಕ್ಷಣಕ್ಕೆ ಮೊದಲ ಒತ್ತು ನೀಡುವ ಮೂಲಕ ಮಕ್ಕಳನ್ನು ಸಮಾಜದ ಬಹುದೊಡ್ಡ ಆಸ್ತಿಯನ್ನಾಗಿ ರೂಪಿಸಬೇಕು. ಇಂದು ಪಟ್ಟಣಗಳಲ್ಲಿನ ಮೊಬೈಲ್ ಸಂಸ್ಕೃತಿ ಹಳ್ಳಿ ಮಕ್ಕಳನ್ನು ಆವರಿಸಿದೆ. ಅವರನ್ನು ಮೊಬೈಲ್ ಗೀಳಿನಿಂದ ಬಿಡಿಸಿ ಪುಸ್ತಕಗಳನ್ನು ಇಡಿಸಿ ಒಳಿತು - ಕೆಡುಕುಗಳ ವ್ಯತ್ಯಾಸ ತಿಳಿಸಿ ಅವರೊಂದಿಗೆ ಇದ್ದು ಅವರನ್ನು ಕಾಪಾಡಬೇಕಾದ ಜವಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಯು. ರಫೀಕ್ಖಾನ್, ಕೊಡಗು ಜಿಲ್ಲಾ ಸ್ಕೌಟ್-ಗೈಡ್ ಜಿಲ್ಲಾ ಆಯುಕ್ತ ಬೇಬಿ ಮಾಥ್ಯು, ಶಾಲೆಯ ಹಳೆ ವಿದ್ಯಾರ್ಥಿ, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಸಹಕಾರ ಸಂಘ ಅಧ್ಯಕ್ಷ ಜೆರ್ಮಿ ಡಿಸೋಜ, ಸುಂಟಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಕೆ. ರಕ್ಷಿತ್ ಮಾತನಾಡಿದರು. ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಗೊಂಡಿರುವ ಶಿಕ್ಷಕಿ ಮುತ್ತಮ್ಮ ಹಾಗೂ ಉತ್ತಮ ಶಾಲಾ ಮುಖ್ಯೋಪಾಧ್ಯಾಯಿನಿ ಪ್ರಶಸ್ತಿಗೆ ಭಾಜನರಾದ ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೋವಿಟಾ ವಾಸ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಜೆಸ್ಸಿಂತ ಪಿರೇರಾ, ಬಿಂದು ಎಲಿಜಬೆತ್, ಕೊಡಗು ಜಿಲ್ಲಾ ಬುಲ್ಸ್ ಬುಲ್ಸ್ ಆಯುಕ್ತ ಎಂ. ಡೈಸಿ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್.ಎಂ. ಹೀನಾ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ವ್ಯವಸ್ಥಾಪಕ ಜೆಸ್ಸಿ ವೇಗಸ್, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಜೋವಿಟಾ ವಾಸ್, ಪ್ರೀತಿ ಜಾಯ್ಸ್ ಕುಟೀನಾ, ಯಿವಾಬೆನ್ಸಿಸ್ ಸೇರಿದಂತೆ ಶಿಕ್ಷಕರು ಇದ್ದರು.