ಮಡಿಕೇರಿ, ಡಿ. ೭: ಹೃದಯಾಘಾತದ ಸಂದರ್ಭದಲ್ಲಿ "ಸಮಯವೇ ಜೀವನ". ಏಕೆಂದರೆ ತುರ್ತು ಪರಿಸ್ಥಿತಿಯಲ್ಲಿ ನೀಡುವ ತಕ್ಷಣದ ನೆರವು ಮತ್ತು ವೈದ್ಯಕೀಯ ಚಿಕಿತ್ಸೆಯು ರೋಗಿಯ ಜೀವ ಉಳಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ. ಅಬ್ದುಲ್ ಅಜೀಜ್ ಸಲಹೆ ನೀಡಿದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು, ಮಡಿಕೇರಿ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೃದಯಾಘಾತದ ಲಕ್ಷಣಗಳನ್ನು ಸರಿಯಾಗಿ ಗುರುತಿಸಿದರೆ ಜೀವ ರಕ್ಷಣೆ ಸಾಧ್ಯ. ಹೃದಯ ಸ್ತಂಭನ ಕುರಿತು ಜಾಗೃತಿ, ತುರ್ತು ನೆರವು ಹಾಗೂ ಆರೋಗ್ಯಕರ ಜೀವನಶೈಲಿ ನಮ್ಮ ಹೃದಯ ರಕ್ಷಕರು. ಪ್ರತಿಯೊಬ್ಬರು ಪ್ರಥಮ ಚಿಕಿತ್ಸೆ ಕುರಿತು ತರಬೇತಿ ಪಡೆದಲ್ಲಿ ಇನ್ನೊಬ್ಬರ ಜೀವನವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯ ಅಗತ್ಯತೆಯ ಕುರಿತು ಮಾಹಿತಿ ನೀಡುವುದರ ಜೊತೆಗೆ ಆಪತ್ಕಾಲದಲ್ಲಿ ಸಿಲುಕಿದವರ ಪ್ರಾಣವನ್ನು ಉಳಿಸಬಹುದಾದ ಕ್ರಮಗಳ ಬಗ್ಗೆ ಡಾ. ಅಬ್ದುಲ್ ಅಜೀಜ್ ಸಲಹೆ ನೀಡಿದರು. ಶಿಬಿರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ., ಪ್ರಥಮ ಚಿಕಿತ್ಸೆ ತರಬೇತಿ ಜೀವ ರಕ್ಷಿಸುವ ಕೌಶಲ್ಯ. ಅಪಘಾತ ಅಥವಾ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಸರಿಯಾದ ಕ್ರಮ ಕೈಗೊಳ್ಳುವುದರಿಂದ ಅನೇಕ ಜೀವಗಳನ್ನು ಉಳಿಸಬಹುದು. ಪ್ರಥಮ ಚಿಕಿತ್ಸೆಯ ಜ್ಞಾನ ಎಂಬುದು ಕೇವಲ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಸೀಮಿತವಾಗಿರದೇ ಸಮಾಜದ ಎಲ್ಲಾ ನಾಗರಿಕರ ಜವಾಬ್ದಾರಿಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಹಾಗೂ ಸಮಾಜದ ಎಲ್ಲಾ ನಾಗರಿಕರು ಇಂತಹ ತರಬೇತಿಯನ್ನು ಸದುಪಯೋಗಪಡಿಸಿಕೊಂಡು ಸಂಕಷ್ಟದಲ್ಲಿರುವವರ ಜೀವವನ್ನು ಉಳಿಸುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಶೈಕ್ಷಣಿಕ ಕ್ಷೇತ್ರದ ಭಾಗವಾದ ಎನ್‌ಸಿಸಿ ವಿದ್ಯಾರ್ಥಿಗಳು ಇಂತಹ ತರಬೇತಿಗಳಲ್ಲಿ ಭಾಗವಹಿಸಿ, ಕೌಶಲ್ಯವನ್ನು ಪಡೆದು ತಮ್ಮ ಗ್ರಾಮೀಣ ಭಾಗದ ಪ್ರದೇಶಗಳಿಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನೆರವಾಗುವುದರ ಮೂಲಕ ಸಮಾಜ ಸೇವೆಯನ್ನು ಮಾಡಬಹುದು ಎಂದರು.

ಶಿಬಿರದಲ್ಲಿ ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ವಿಜಯ್ ಕುಮಾರ್ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಹೃದಯಘಾತ ಸಂದರ್ಭ ಸಿಪಿಆರ್ ಪ್ರಥಮ ಚಿಕಿತ್ಸೆ ಹಾಗೂ ಪಾರ್ಶ್ವವಾಯು, ನಾಯಿ ಕಡಿತ, ಮೂರ್ಛೆರೋಗ, ವಿಷಪೂರಿತ ಹಾವು ಕಡಿತ ಹಾಗೂ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿದಾಗ, ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಮತ್ತು ಇತ್ಯಾದಿ ತುರ್ತು ಸಂದರ್ಭಗಳಲ್ಲಿ ಹೇಗೆ ಜೀವ ರಕ್ಷಕರಾಗಿ ಚಿಕಿತ್ಸೆಯನ್ನು ನೀಡಿ, ಪ್ರಾಥಮಿಕ ಹಂತದ ಚಿಕಿತ್ಸಾ ಕ್ರಮವನ್ನು ನಿರ್ವಹಿಸಬಹುದು ಎಂಬುದನ್ನು ತಿಳಿಸಿಕೊಟ್ಟರು.

ಶಿಬಿರದಲ್ಲಿ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಸಿಬ್ಬಂದಿಗಳು, ಉಪನ್ಯಾಸಕರಾದ ಖುರ್ಷಿದ ಭಾನು, ಎನ್‌ಸಿಸಿ ವಿದ್ಯಾರ್ಥಿ ನಾಯಕರಾದ ಕೆ.ಎಂ. ತಿಮ್ಮಯ್ಯ, ವಂಶಿಕ್ ಸೋಮಣ್ಣ, ಸೇಜಲ್, ಎಂ.ಎಸ್. ಆಶೀತಾ ಮತ್ತು ಬೋಧಕ-ಬೋಧಕೇತರ ವರ್ಗ, ಎನ್‌ಸಿಸಿ ಕೆಡೆಟ್‌ಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಎನ್‌ಸಿಸಿ ನಾಯಕಿ ಚರಿಷ್ಮಾ ರೈ ಮತ್ತು ಕೆಡೆಟ್ ರಕ್ಷಿತಾ ಪ್ರಾರ್ಥನೆ ಮಾಡಿದರು. ಕೆಡೆಟ್ ಸಂದೇಶ್ ನಿರೂಪಿಸಿ, ವಂದಿಸಿದರು.