ಪೊನ್ನAಪೇಟೆ, ಡಿ. ೭: ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡ್ ಈ ಮೂರು ನಾಡುಗಳು ಒಂದೆಡೆ ಸೇರಿ ನಡೆಸುವ ಇತಿಹಾಸ ಪ್ರಸಿದ್ಧ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಕುಂದ ಸಮೀಪದ ಕೈಮುಡಿಕೆ ಕೋಲ್ ಮಂದ್‌ನಲ್ಲಿ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅವರ ನೇತೃತ್ವದಲ್ಲಿ ಸಂಭ್ರಮದಿAದ ನಡೆಯಿತು. ಮೂರು ನಾಡಿನ ತಕ್ಕ ಮುಖ್ಯಸ್ಥರು ಮೂರು ಕಡೆಯಿಂದ ಪಟ್ಟು ಹಿಡಿದು ಓಡಿ ಬಂದು ಮಂದ್ ಮಧ್ಯ ಭಾಗದಲ್ಲಿರುವ ಆಲದ ಮರಕ್ಕೆ ಕೋಲು ಬಾರಿಸುವ ಮೂಲಕ ಮಂದ್‌ಗೆ ಚಾಲನೆ ನೀಡಲಾಯಿತು.

ನಂತರ ಮೂರು ನಾಡಿನವರು ಒಟ್ಟಾಗಿ ಸೇರಿ ಪುತ್ತರಿ ಕೋಲು ಹೊಡೆಯುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಬಾಚಿರಣಿಯಂಡ ಅಪ್ಪಣ್ಣ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕಡ ಪರಿಷತ್ ಅಧ್ಯಕ್ಷೆ ಬಾಚಿರಣಿಯಂಡ ರಾಣು ಹಾಗೂ ಅಪ್ಪಣ್ಣ ದಂಪತಿಯರನ್ನು ಕೈಮುಡಿಕೆ ಮಂದ್ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾಚಿರಣಿಯಂಡ ಅಪ್ಪಣ್ಣ ಅವರು, ಕೊಡವ ಸಂಸ್ಕೃತಿ ಆಚಾರ ವಿಚಾರವನ್ನು ಬೆಳೆಸುವಲ್ಲಿ ಈ ಮಂದ್ ಶ್ರಮಿಸುತ್ತಿದೆ. ಕೊಡಗಿನಲ್ಲಿರುವ ಹಲವಾರು ಮಂದ್ ಅಭಿವೃದ್ದಿ ಕಾಣದೇ ಮುಚ್ಚಿಹೋಗಿವೆ. ಆದರೆ ಹಿಂದಿನ ಕಾಲದಂತೆಯೇ ಸಂಭ್ರಮ ಸಡಗರದಿಂದ ಕಾರ್ಯನಿರ್ವಹಿಸುತ್ತಿರುವ ಕೈಮುಡಿಕೆ ಮಂದ್ ಗಮನಿಸಿದರೆ ಕೊಡವರ ಸಂಸ್ಕೃತಿ, ಆಚಾರ ವಿಚಾರ ಉತ್ತುಂಗಕ್ಕೆ ತಲುಪುವುದರಲ್ಲಿ ಸಂಶಯವಿಲ್ಲ ಎಂದರು.

ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, ಕೊಡಗಿನ ಆಚಾರ, ವಿಚಾರ, ಪದ್ಧತಿ, ಪರಂಪರೆ ಉಳಿಸಿ ಬೆಳೆಸಿ ಕಿರಿಯರಿಗೆ ತಿಳುವಳಿಕೆ ನೀಡಿರುವುದು ನಮ್ಮ ಹಿರಿಯರು. ಹಲವಾರು ಮಂದ್ ಮಾನಿಗಳು ಮುಚ್ಚಿ ಹೋಗಿರುವ ಸಂದರ್ಭದಲ್ಲಿಯೂ ಈ ಕೈಮುಡಿಕೆ ಮಂದ್ ಕಂಬದAತೆ ನಿಂತು ಕೊಡವರ ಆಚಾರ ವಿಚಾರವನ್ನು ಬೆಳೆಸುತ್ತಾ ಬಂದಿದೆ. ಇಷ್ಟು ವರ್ಷದವರೆಗೂ ಆಚಾರ ವಿಚಾರವನ್ನು ಪ್ರೋತ್ಸಾಹಿಸಿ ಬೆಳೆಸಿ ಕೈಮುಡಿಕೆ ಮಂದ್ ಅನ್ನು ಹಾಗೆಯೇ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ. ಈ ನಾಡಿನ ಜನರ ಸೇವೆ ಮೆಚ್ಚುವಂಥದ್ದು ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಬೊಟ್ಟಿಯತ್ ಮೂಂದ್ ನಾಡ್ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಮಾತನಾಡಿ ಹಿಂದಿನ ಕಾಲದಲ್ಲಿ ಮಂದ್ ಹಾಗೂ ಮುಂದ್ ಎಂಬ ಎರಡು ಪ್ರಾಮುಖ್ಯ ಸ್ಥಳಗಳಿದ್ದವು. ಮಂದ್ ನಲ್ಲಿ ಊರು ಕೇರಿಯ ವ್ಯಾಜ್ಯಗಳು ಬಗೆ ಹರಿಯದಿದ್ದರೆ ಮುಂದ್‌ನಲ್ಲಿ ಕುಟುಂಬದ ವ್ಯಾಜ್ಯಗಳು ಬಗೆ ಹರಿಯುತ್ತಿದ್ದವು. ಈ ಮಂದ್ ಮೂರು ನಾಡಿಗೆ ಸೇರಿರುವ ಜಾಗವಾಗಿದೆ. ಈ ಮಣ್ಣಿನಲ್ಲಿ ಜನರಲ್ ತಿಮ್ಮಯ್ಯ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಕೋಲಾಟ ಆಡಿರುವುದು ಹೆಮ್ಮೆಯ ವಿಚಾರ. ಮಂದ್ ಮಾನಿಯಲ್ಲಿ ಸೇರುವ ಕೊಡವ ಬಾಂಧವರು ಕೊಡವರ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಬೇಕು. ಕೊಡವರ ಉಡುಪು ಕೇವಲ ಮದುವೆ ಸಮಾರಂಭಗಳಿಗೆ ಸೀಮಿತವಲ್ಲ, ಮಂದ್ ಎಂಬ ದೇವರ ಸ್ಥಾನಕ್ಕೆ ಸಾಂಪ್ರದಾಯಿಕ ಉಡುಪಿನಲ್ಲಿ ಬರಬೇಕೆಂದರು.

ಪೊನ್ನAಪೇಟೆ ಕೊಡವ ಪೊಮ್ಮಕಡ ಕೂಟ, ಕಾವೇರಿ ಕಾಲೇಜು ವಿದ್ಯಾರ್ಥಿಗಳು, ಅಪ್ಪಚ್ಚಕವಿ ವಿದ್ಯಾರ್ಥಿಗಳು, ಕುತ್ತ್ ನಾಡ್ ಪೊಮ್ಮಕ್ಕ, ಲಯನ್ಸ್ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಮೂರು ನಾಡಿನವರಿಂದ ಉಮ್ಮತಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ಬಾಳೋ ಪಾಟ್, ಕೊಡವ ಪಾಟ್ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಕಣ್ಮನ ಸೆಳೆದವು.

ಈ ಸಂದರ್ಭ ಬೇರಳಿನಾಡ್ ತಕ್ಕ ಮಳುವಂಡ ಭುವೇಶ್ ದೇವಯ್ಯ, ಕುತ್ತ್ ನಾಡ್ ತಕ್ಕ ಪಂದಿಮಾಡ ರಮೇಶ್ ಅಚ್ಚಪ್ಪ, ಮೂಂದ್ ನಾಡ್ ಗೌರವ ಕಾರ್ಯದರ್ಶಿ ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ, ಬೇರಳಿನಾಡ್ ಕಾರ್ಯದರ್ಶಿ ಅಪ್ಪಂಡೇರAಡ ಮೋಹನ್, ಬೊಟ್ಟಿಯತ್ ನಾಡ್ ಸಹ ಕಾರ್ಯದರ್ಶಿ ತೀತಮಾಡ ಶಿವಮಣಿ ಕರುಂಬಯ್ಯ, ಕುತ್ತ್ ನಾಡ್ ಸಹ ಕಾರ್ಯದರ್ಶಿ ತೀತಮಾಡ ಗಣೇಶ್ (ಗಾಂಧಿ), ಹಳ್ಳಿಗಟ್ಟ್ ಊರು ತಕ್ಕ ಚಮ್ಮಟೀರ ಪ್ರವೀಣ್ ಉತ್ತಪ್ಪ, ಅಚ್ಚಿಯಂಡ ವೇಣು ಗೋಪಾಲ್, ಅರ್ವತೋಕ್ಲು ಊರು ತಕ್ಕ ಕಾಡ್ಯಮಾಡ ಮೋತಿ ಅಪ್ಪಚ್ಚು, ಕುಂದ ಊರು ತಕ್ಕ ಕೊಡಂದೆರ ಸುಬ್ಬಯ್ಯ, ಈಚೂರು ಊರು ತಕ್ಕ ತೀತಮಾಡ ಉಮೇಶ್, ಮುಗುಟಗೇರಿ ಊರು ತಕ್ಕ ಮನೆಯಪಂಡ ಬೆಳ್ಯಪ್ಪ, ಬೇರಳಿನಾಡಿನ ತಕ್ಕ ಅಪ್ಪಂಡೇರAಡ ಅಶೋಕ್, ಕೊಂಗAಡ ಡೆಟ್ರನ್, ಮೂಕಚಂಡ ಚುಮ್ಮಿ ದೇವಯ್ಯ, ಬೋಳಡಿಚಂಡ ಕಿರಣ್ ಸೇರಿದಂತೆ ಇತರ ತಕ್ಕಮುಖ್ಯಸ್ಥರು ಉಪಸ್ಥಿತರಿದ್ದರು.