ಸಿದ್ದಾಪುರ, ಡಿ. ೮: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟಳ್ಳಿ ಹಾಡಿಯಲ್ಲಿ ನೂತನ ಅಂಗನವಾಡಿ ಕಟ್ಟಡವನ್ನು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹಾಡಿಯ ನಿವಾಸಿಗಳ ಮಕ್ಕಳಿಗೆ ಪೋಷಕರು ಉತ್ತಮ ಶಿಕ್ಷಣವನ್ನು ನೀಡಬೇಕೆಂದು ಕಿವಿ ಮಾತು ಹೇಳಿದರು. ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಪ್ರಥಮವಾಗಿ ಶಿಕ್ಷಣ ಪಡೆದು ಬಳಿಕ ಮುಂದಿನ ಶಿಕ್ಷಣದ ಹೆಜ್ಜೆಯನ್ನು ಇಡಬೇಕೆಂದು ತಿಳಿಸಿದರು. ಸರಕಾರವು ಬಡ ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಆದಿವಾಸಿಗಳು ಶಿಕ್ಷಣವನ್ನು ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಅಲ್ಪಸಂಖ್ಯಾತರ ಘಟಕದ ಹನೀಫ್, ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಕಾಂಗ್ರೆಸ್ ಪ್ರಮುಖರಾದ ಹಚ್.ಎಸ್. ಗಣೇಶ ಸೇರಿದಂತೆ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.