ಮಡಿಕೇರಿ, ಡಿ. ೮: ನವೆಂಬರ್ ೧ರಿಂದ ೩೦ರವರೆಗೆ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಹಯೋಗದೊಂದಿಗೆ ಕೊಡಗು ಜಿಲ್ಲೆಯಾದ್ಯಂತ ಜರುಗಿಸಿದ್ದು, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ, ಸರ್ಕಾರಿ ಪ. ಪೂ. ಕಾಲೇಜು ಹಾಗೂ ಇನ್ನಿತರ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಸರ್ಕಾರಿ ಜ್ಯೂನಿಯರ್ ಕಾಲೇಜು ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲರಾದ ವಿಜಯ್ ಮತ್ತು ರಾಘವ್ ಅವರ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ವಾಯು ಮಾಲಿನ್ಯದ ದುಷ್ಟರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಕೆ.ಎಸ್.ಆರ್.ಟಿ.ಸಿ. ಚಾಲಕ ಸಿಬ್ಬಂದಿಗಳಿಗೆ ನಗರದ ಪ್ರಮುಖ ಪಟ್ಟಣದಲ್ಲಿ ಸಾರ್ವಜನಿಕರಿಗೆ ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ತಡೆಗಟ್ಟಲು ತೆಗೆದುಕೊಳ್ಳಬಹುದಾದ ಕ್ರಮದ ಬಗ್ಗೆ ತಿಳಿಸಲಾಯಿತು. ಈ ಸಂಬAಧ ತಾ. ೨ ರಂದು ನಗರದ ಹೊರವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯಲ್ಲಿ ಸಮಾರೋಪ ಸಮಾರಂಭವನ್ನು ನಡೆಸಲಾಯಿತು. ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಎಸ್. ಟಿ. ಸತೀಶ್ ಅವರು ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದ ರೊಂದಿಗೆ ಕಲಬೆರಕೆ ಇಂಧನ ಅಥವಾ ಕಲಬೆರಕೆ ಇಂಜಿನ್ ಆಯಿಲ್ ಬಳಸದಂತೆ ಕ್ರಮ ವಹಿಸಬೇಕು. ವಾಹನಗಳಿಗೆ ಕಡ್ಡಾಯವಾಗಿ ವಾಯುಮಾಲಿನ್ಯ ನಿಯಂತ್ರಣ ದೃಢೀಕರಣ ಇಟ್ಟುಕೊಳ್ಳುವಂತೆಯೂ ಸೂಚಿಸಿದರು. ಕಾರ್ಯಕ್ರಮದಲ್ಲಿ ಕಛೇರಿ ಅಧೀಕ್ಷಕರುಗಳಾದ ಕೆ.ಎ. ಸಲೀಮಾ. ಎನ್ ಮೋಹನ ಕುಮಾರ್, ಮೋಟಾರು ವಾಹನ ನಿರೀಕ್ಷಕರಾದ ಮೋಹನ್‌ಕುಮಾರ್, ಪ್ರದೀಪ್ ಅವರು ಹಾಜರಿದ್ದರು. ಡಿ.ಕೆ. ರೀಟಾ ಅವರು ವಂದಿಸಿದರು.