ಸೋಮವಾರಪೇಟೆ, ಡಿ.೮: ಸಂಸ್ಕಾರ ರಹಿತ ಶಿಕ್ಷಣ ವ್ಯರ್ಥ; ಜೀವನದ ಮೌಲ್ಯಗಳನ್ನು ತಿಳಿಸುವ ಶಿಕ್ಷಣದಿಂದ ಮಾತ್ರ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ ಎಂದು ಮುಳ್ಳೂರು ಮಠದ ಸ್ವತಂತ್ರ ಬಸವಲಿಂಗ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ ವತಿಯಿಂದ ಸೋಮವಾರಪೇಟೆ ಕಾರ್ಯಕ್ಷೇತ್ರಕ್ಕೆ ಒಳಪಡುವ ಪ್ರಗತಿಬಂಧು ಸ್ವಸಹಾಯ ಗುಂಪುಗಳ ನೇತೃತ್ವದಲ್ಲಿ ಪಟ್ಟಣದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಗಣ ಹೋಮ ಮತ್ತು ಮಾತೃ ವಂದನಾ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಂಸ್ಕಾರ ಕಡಿಮೆಯಾಗುತ್ತಿರುವುದರಿಂದ ಮಾತೃ ವಂದನೆಯAತಹ ಕಾರ್ಯಕ್ರಮಗಳನ್ನು ವೇದಿಕೆಯಲ್ಲಿ ಮಾಡುವಂತಹ ದುಸ್ಥಿತಿ ಬಂದಿರುವುದು ವಿಪರ್ಯಾಸ. ತಾಯಿ ತನ್ನ ನಡವಳಿಕೆ ಮೂಲಕ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಸಂಸ್ಕಾರದ ಕೊಂಡಿ ಕಳಚಿದರೆ ಸಮಾಜಕ್ಕೆ ಭವಿಷ್ಯವಿಲ್ಲ. ಧರ್ಮಕ್ಕೆ ನಾವು ಆಧಾರವಾಗಿ ನಿಲ್ಲಬೇಕು. ಧರ್ಮದ ಹಾದಿಯಲ್ಲಿ ನಡೆಯುವವರನ್ನು ಧರ್ಮವೇ ರಕ್ಷಿಸುತ್ತದೆ ಎಂದು ಅಭಿಪ್ರಾಯಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಜನಜಾಗೃತಿ ಸಮಿತಿ ಸ್ಥಾಪಕಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಮಾತನಾಡಿ, ಮಹಾನ್ ಪುರುಷರ ಪುಣ್ಯ ಕಥೆ ಗಳನ್ನು ಮಕ್ಕಳಿಗೆ ಹೇಳಿಕೊಡಬೇಕು. ಮೊಬೈಲ್ ಗೀಳಿನಿಂದ ಹೊರತರಬೇಕು. ತಾಯಿ ಹಾಗೂ ಮಕ್ಕಳ ಬಾಂಧವ್ಯ ಬೆಸೆಯುವಂತೆ ಮಾಡಲು ಕ್ಷೇತ್ರದಿಂದ ರಾಜ್ಯಾದ್ಯಂತ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಸೋಮೇಶ್ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗ್ರಾಮಾಭಿವೃದ್ಧಿ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಸ್ವಾವಲಂಬನೆಗೆ ಹೆಚ್ಚಿನ ಒತ್ತು ನೀಡಿದೆ. ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಸ್ವಾವಲಂಬಿಗಳಾಗಲು ವೇದಿಕೆ ಕಲ್ಪಿಸಿದೆ. ನಮ್ಮ ಆಚಾರ ವಿಚಾರ ಉಳಿಯಬೇಕಾದರೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದರು.

ಕರವೇ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ, ನೆಲದ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳು ಮಹತ್ವದ ಪಾತ್ರ ವಹಿಸುತ್ತವೆ. ಈ ಹಿನ್ನೆಲೆ ಧರ್ಮಸ್ಥಳ ಹಾಗೂ ಗ್ರಾಮಾಭಿವೃದ್ಧಿ ಸಮಿತಿಗಳು ಹೆಚ್ಚು ಕ್ರಿಯಾಶೀಲವಾಗಿವೆ ಎಂದರು.

ಮಹಿಳಾ ಸಮಾಜದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಮಾತನಾಡಿ, ದೇಶದ ಸಂಸ್ಕೃತಿ, ಆಚಾರ ವಿಚಾರಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಅಭಿಪ್ರಾಯಿಸಿದರು.

ವೇದಿಕೆಯಲ್ಲಿ ಜನಜಾಗೃತಿ ಸಮಿತಿಯ ಸದಸ್ಯ ಮಸಗೋಡು ಸುರೇಶ್, ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಪೂಜಾ ಸಮಿತಿ ಅಧ್ಯಕ್ಷೆ ಪೌಲಿನಾ ಸಿಕ್ವೇರಾ, ಒಕ್ಕೂಟದ ಅಧ್ಯಕ್ಷರುಗಳಾದ ರವಿಕುಮಾರ್, ಚೇತನ್, ಲತಾ ಅಣ್ಣಪ್ಪ, ಲತಾ ರಾಮದಾಸ್, ರೂಪಾ ಹರೀಶ್, ಮುತ್ತಮ್ಮ ಅವರುಗಳು ಉಪಸ್ಥಿತರಿದ್ದರು. ಸೀತಾ ಬಳಗದ ಸದಸ್ಯರು ಪ್ರಾರ್ಥಿಸಿ, ಸೇವಾ ಪ್ರತಿನಿಧಿ ತಾರಾಲಕ್ಷ್ಮಿ ನಿರೂಪಿಸಿ, ವಲಯ ಮೇಲ್ವಿಚಾರಕ ದೇವೇಂದ್ರ ವಂದಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಸೋಮೇಶ್ವರ ದೇವಾಲಯದ ಪ್ರಧಾನ ಅರ್ಚಕ ಚಿತ್ರಕುಮಾರ್ ಭಟ್ ಅವರ ನೇತೃತ್ವದಲ್ಲಿ ಗಣಹೋಮ ಹಾಗೂ ಮಾತೃವಂದನೆ ನಡೆಯಿತು. ಮಕ್ಕಳು ತಮ್ಮ ತಾಯಂದಿರ ಪಾದ ತೊಳೆದು, ಆರತಿ ಬೆಳಗಿ ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿದರು.