ಕಣಿವೆ, ಡಿ. ೯: ಕುಶಾಲನಗರ ತಾಲೂಕಿನ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಅನ್ನದ ಬೆಳೆ ಭತ್ತದ ಫಸಲು ಕಟಾವಿಗೆ ಬಂದಿದೆ.

ಆದರೆ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಗಣನೀಯವಾಗಿ ಕುಸಿತ ಕಂಡ ಹಿನ್ನೆಲೆಯಲ್ಲಿ ತೀವ್ರ ಆತಂಕಕ್ಕೆ ಒಳಗಾಗಿರುವ ರೈತರು, ಕೂಡಲೇ ಬೆಂಬಲ ಬೆಲೆ ಹೆಚ್ಚಳ ಮಾಡಿ ರೈತರಲ್ಲಿಗೆ ಬಂದು ಭತ್ತ ಖರೀದಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದೀಗ ಮಾರುಕಟ್ಟೆಯಲ್ಲಿ ಸಣ್ಣಮಧು ತಳಿಯ ಒಂದು ಕ್ವಿಂಟಾಲ್ ಭತ್ತಕ್ಕೆ ಮಾರುಕಟ್ಟೆಯಲ್ಲಿ ರೂ. ೧,೨೦೦ ಇದ್ದು ಬೆಳೆ ಬೆಳೆಯಲು ಮಾಡಿರುವ ಖರ್ಚಿನ ಕಾಲು ಭಾಗವೂ ಕೈಗೆ ಸಿಗಲ್ಲ ಎಂದು ಕೃಷಿಕ ಭುವನಗಿರಿ ದಶರಥ ಅಸಮಾಧಾನ ವ್ಯಕ್ತಪಡಿಸಿದರು.

ಕಳೆದ ವರ್ಷ ಇದೇ ಅವಧಿಯಲ್ಲಿ ಇದೇ ಸಣ್ಣಮಧು ಒಂದು ಕ್ವಿಂಟಾಲ್ ಭತ್ತಕ್ಕೆ ರೂ. ೧,೮೦೦ ಇತ್ತು. ಈವಾಗ ರೂ. ೬೦೦ ಕಡಿಮೆ ಆಗಿದೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ಮಾಡುವ ಮೂಲಕ ಭತ್ತದ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ದಶರಥ ಆಗ್ರಹಿಸಿದ್ದಾರೆ.

ಇನ್ನೊಂದೆಡೆ ಮೋಡ ಮುಚ್ಚಿದ ವಾತಾವರಣವಿದ್ದು ಅಕಾಲಿಕ ಮಳೆ ಸುರಿವ ಆತಂಕದಲ್ಲಿಯೂ ಅನ್ನದಾತರಿದ್ದಾರೆ. ಸುಬ್ರಹ್ಮಣ್ಯ ಷಷ್ಠಿ ಸಂದರ್ಭ ಸಾಂಪ್ರದಾಯಿಕವಾಗಿ ಮೋಡ ಹಾಗೂ ಮಳೆಯ ವಾತಾವರಣ ಇದ್ದುದರಿಂದ ಆಗಸದಲ್ಲಿ ಕವಿದಿದ್ದ ಮೋಡ ಹರಿದು ಬಿಸಿಲ ವಾತಾವರಣ ಮೂಡಲಿ ಎಂದು ರೈತರು ಕಾದು ಕುಳಿತರಾದರೂ ಏಕೋ ಏನೋ ಮೋಡ ತಿಳಿಯಾಗುವ ಲಕ್ಷಣ ಗೋಚರಿಸದ ಕಾರಣ ರೈತಾಪಿಗಳು ದೇವರ ಮೇಲೆ ಭಾರ ಹಾಕಿ ಕುಯ್ಲಿಗೆ ಬಂದ ಭತ್ತದ ಫಸಲು ಕಟಾವಿನಲ್ಲಿ ನಿರತರಾಗಿದ್ದಾರೆ. ನಾವು ನಮ್ಮ ಗದ್ದೆಗಳಲ್ಲಿ ಸಿದ್ಧಗೊಂಡಿದ್ದ ಭತ್ತದ ಫಸಲನ್ನು ಮಳೆ ಹಾಗೂ ಮಳೆಯ ಮೋಡ ಯಾವುದನ್ನೂ ಲೆಕ್ಕಿಸದೆಯೇ ಕಟಾವು ಮಾಡಿದ್ದೆವು. ಕಟಾವು ಮಾಡಿದ ಎರಡು ದಿನಕ್ಕೆ ಅಕಾಲಿಕ ಮಳೆ ಸುರಿದು ಭತ್ತದ ಫಸಲಿಗೆ ಹಾನಿಯಾಗಿದೆ.

ಮೊದಲೇ ಅವಧಿ ಕಳೆದು ಕಟಾವು ಮಾಡಿದ್ದರಿಂದ ಗೊನೆಯಲ್ಲಿನ ಭತ್ತ ಗದ್ದೆಗಳ ಅಲ್ಲಲ್ಲಿ ಸುರಿದು ಹಾನಿಯಾಗಿದೆ. ಅದಾಗ್ಯೂ ಮತ್ತೆ ಮಳೆಯ ಆತಂಕದ ನಡುವೆಯೂ ಗದ್ದೆಗಳಲ್ಲಿ ಕೊಯ್ಲು ಮಾಡಿಟ್ಟದ್ದ ಭತ್ತದ ಫಸಲನ್ನು ಕಂತೆ ಕಟ್ಟಿ ಒಂದು ಕಡೆ ಗುಡ್ಡೆ ಮಾಡುತ್ತಿದ್ದೇವೆ.

ಒಂದು ವೇಳೆ ಮಳೆ ಬಂದರೆ ಟಾರ್ಪಲಿನಿಂದ ಮುಚ್ಚಬೇಕು. ಮೊದಲೇ ಮಳೆಗೆ ಭತ್ತದ ಹುಲ್ಲು ನೆನೆದಿದ್ದ ಕಾರಣ ಎರಡು ದಿನಗಳಲ್ಲಿ ಒಕ್ಕಣೆ ಮಾಡಲೇಬೇಕು ಎನ್ನುತ್ತಾರೆ ಮತ್ತೋರ್ವ ರೈತ ಸುರೇಶ.

ಆದಾಯಕ್ಕಿಂತ ಖರ್ಚು ಜಾಸ್ತಿ

ಅಕ್ಕಿ ವರ್ಷವಿಡೀ ಊಟ ಮಾಡೋಕೆ ಬೇಕು ಎಂಬ ಕಾರಣಕ್ಕೆ ನಾವುಗಳು ಭತ್ತ ಬೆಳೆಯಬೇಕೇ ಹೊರತು ಲಾಭದ ಉದ್ದೇಶ ಇಟ್ಟುಕೊಂಡು ಬೆಳೆಯೋಕೆ ಆಗಲ್ಲ.

ಕೂಲಿ ಕಾರ್ಮಿಕರ ಸಮಸ್ಯೆ ಒಂದು ಕಡೆಯಾದರೆ, ದುಪ್ಪಟ್ಟು ಇರುವ ಕೂಲಿಯನ್ನು ಕೊಟ್ಟು ನಾವು ಭತ್ತದ ಕೃಷಿಯನ್ನು ಮಾಡೋಕೆ ಆಗುವುದಿಲ್ಲ.

ಒಂದು ಎಕರೆ ಗದ್ದೆಯಲ್ಲಿ ಭತ್ತ ಬೆಳೆಯಲು ಬಿತ್ತನೆ ಬೀಜ, ರಸಗೊಬ್ಬರ, ಉಳುಮೆ, ಭತ್ತದ ನಾಟಿ ಅಂದುಕೊAಡು ಸರಾಸರಿ ರೂ. ೪೨ ಸಾವಿರ ಖರ್ಚಾಗಿದೆ.

ಈಗ ಭತ್ತ ಕಟಾವು ಮಾಡೋಕೆ ರೂ. ೧೬ ಸಾವಿರ ಆಯ್ತು. ಅದನ್ನು ಕಂತೆ ಕಟ್ಟಿ ಹೊತ್ತು ಗುಡ್ಡೆ ಮಾಡೋಕೆ ರೂ. ೨೦ ಸಾವಿರ, ಅದನ್ನು ಒಕ್ಕಣೆ ಮಾಡಲು ರೂ. ೧೦ ಸಾವಿರ, ನಂತರ ಹುಲ್ಲು ತುಣಿಸಿ ಹುಲ್ಲಿನ ಗುಡ್ಡೆ ಒಟ್ಟೋಕೆ ರೂ. ೧೦ ಸಾವಿರ ಒಂದು ಎಕರೆ ಗದ್ದೆಯಲ್ಲಿ ಬೆಳೆದ ಭತ್ತ ೨೫ ಚೀಲ ಇಳುವರಿ ಬರಬಹುದು. ಈಗ ಇರುವ ೧೨೦೦ ರೂಗೆ ಮಾರಾಟ ಮಾಡಿದರೆ ಇಡೀ ಭತ್ತಕ್ಕೆ ರೂ. ೨೭ ಸಾವಿರ, ಹುಲ್ಲಿಗೆ ರೂ. ೧೦ ಸಾವಿರ ಅಂದರೂ ರೂ. ೩೭ ಸಾವಿರ ಆಯ್ತು. ಭತ್ತದ ಬೆಳೆಗೆ ಖರ್ಚು ಮಾಡಿದ ಹಣಕ್ಕಿಂತ ಹೆಚ್ಚು ನಮ್ಮ ಕಿಸೆಯಿಂದಲೇ ಖರ್ಚಾಗುತ್ತಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

ನೀಡುತ್ತಿದ್ದವರು ಬೇಡುತ್ತಿದ್ದೇವೆ

ಹಿಂದೆಲ್ಲಾ ಕೃಷಿ ಕಾರ್ಮಿಕರು ಯಥೇಚ್ಛವಾಗಿ ಇದ್ದರು. ಕೂಲಿಯ ಹಣವೂ ಕಡಿಮೆ ಇತ್ತು. ಹಾಗಾಗಿ ಭತ್ತ ಬೆಳೆಯುತ್ತಿದ್ದ ನಮ್ಮ ಪೂರ್ವಜರು ಅಕ್ಕಿ ಇಲ್ಲದವರಿಗೆ ಕೈನೀಡಿ ದಾನ ಮಾಡುತ್ತಿದ್ದರು. ಆದರೆ ಇದೀಗ ಪರಿಸ್ಥಿತಿ ಹದಗೆಟ್ಟಿರುವುದರಿಂದ ಯಾರೂ ಕೂಡ ಭತ್ತ ಬೆಳೆಯಲು ಮುಂದಾಗದ ಕಾರಣ ಸರ್ಕಾರ ಕೊಡುವ ಉಚಿತ ಅಕ್ಕಿಯನ್ನು ಪಡಿತರ ಅಂಗಡಿಯ ಬಳಿ ಹೋಗಿ ನಿಂತು ಬೇಡುವಂತಾಗಿದೆ ಎಂದು ರೈತ ದಶರಥ ನೋವು ವ್ಯಕ್ತಪಡಿಸಿದರು. - ಕೆ.ಎಸ್. ಮೂರ್ತಿ