ವೀರಾಜಪೇಟೆ, ಡಿ. ೯ : ಹಬ್ಬ ಹರಿದಿನಗಳಲ್ಲಿ ರಾತ್ರಿ ವೇಳೆಯಲ್ಲಿ ವ್ಯಾಪಾರ ಚಟುವಟಿಕೆ ನಡೆಸಲು ಪೊಲೀಸ್ ಇಲಾಖೆ ಅವಕಾಶ ನೀಡಬೇಕೆಂದು ವೀರಾಜಪೇಟೆ ನಗರ ವರ್ತಕರ ಸಂಘ ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಹಾಗೂ ನಗರ ಠಾಣಾಧಿಕಾರಿ ಹೆಚ್.ಎಸ್. ಪ್ರಮೋದ್ ಅವರಿಗೆ ಮನವಿ ಸಲ್ಲಿಸಿತು.

ವ್ಯಾಪಾರ ಮಳಿಗೆಗಳನ್ನು ಶೀಘ್ರವಾಗಿ ಮುಚ್ಚುವುದರಿಂದ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಸಮಸ್ಯೆ ಉಂಟಾಗುತ್ತಿರುವುದರಿAದ, ವರ್ತಕರುಗಳ ಹಿತದೃಷ್ಟಿಯಿಂದ ಕಾಲಾವಧಿಯನ್ನು ವಿಸ್ತರಿಸಬೇಕು ಎಂದು ಸಂಘದ ಅಧ್ಯಕ್ಷ ಪಿ.ಎ. ಮಂಜುನಾಥ್ ಒತ್ತಾಯಿಸಿದರು.

ರಾತ್ರಿ ವೇಳೆ ಸಾಮಗ್ರಿಗಳನ್ನು ಲಾರಿ ಅಥವಾ ಇನ್ನಿತರ ವಾಹನಗಳಲ್ಲಿ ತಂದು ಇಳಿಸಿ ಅದರ ನಿರ್ವಹಣೆ ಮಾಡುವ ಸಂದರ್ಭ ಕಾಲಾವಕಾಶ ಹೆಚ್ಚು ಬೇಕಾಗುತ್ತದೆ. ಅಲ್ಲದೆ ದೂರದಿಂದ ಬಂದವರಿಗೆ ಅಗತ್ಯ ವಸ್ತು ಖರೀದಿಸಬೇಕಾದರೆ ಅಂಗಡಿಗಳು ಮುಚ್ಚಲ್ಪಟ್ಟಿರುತ್ತದೆ. ಕನಿಷ್ಟ ಕಾಫಿ ಕುಡಿಯಲು ಅವಕಾಶ ಇಲ್ಲದ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಮಳಿಗೆಗಳನ್ನು ಮುಚ್ಚುವ ಕಾಲಾವಕಾಶವನ್ನು ವಿಸ್ತರಿಸಬೇಕು. ಕೆಲವರು ರಾತ್ರಿ ವೇಳೆ ಮದ್ಯಪಾನ ಮಾಡಿ ವರ್ತಕರಿಗೆ ತೊಂದರೆ ನೀಡುವಾಗ ಪೊಲೀಸರು ತುರ್ತು ಸ್ಪಂದನ ನೀಡಿ ಕ್ರಮಕೈಗೊಳ್ಳಬೇಕು ಎಂದು ಕೋರಿದರು.

ಸಂಘದ ನಿರ್ದೇಶಕ ಕೆ.ಎಚ್ ಮೊಹಮ್ಮದ್ ರಾಫಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಅಂಗಡಿ ಮಳಿಗೆಗಳನ್ನು ಮುಚ್ಚಲು ಈಗಾಗಲೇ ಸಮಯವನ್ನು ನಿಗದಿಪಡಿಸಲಾಗಿದೆ. ಹಬ್ಬ ಹರಿದಿನಗಳಂತಹ ವಿಶೇಷ ದಿನಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಹೆಚ್ಚುವರಿ ಸಮಯ ಅವಶ್ಯಕವಾಗಿದೆ ಎಂದರು.

ಈ ಸಂದರ್ಭ ಸಂಘದ ನಿರ್ದೇಶಕರುಗಳಾದ ಆರ್. ಸುರೇಶ್, ರಾಜೇಶ್ ಆರ್ ಶೇಟ್, ಶಶಿ ಕೆ.ಆರ್, ಹಾಗೂ ಎಂ.ಎಸ್ ಮೊಹಮ್ಮದ್ ಹನೀಫ್ ಉಪಸ್ಥಿತರಿದ್ದರು.