ಕಣಿವೆ, ಡಿ. ೯ : ಹಳೆ ಪಿಂಚಣಿ ಯೋಜನೆ, ಮಕ್ಕಳ ದಾಖಲಾತಿಯಲ್ಲಿ ವಿನಾಯಿತಿ, ಶಾಲೆ ಮಾನ್ಯತೆ ನವೀಕರಣ ಹಾಗೂ ಅನುದಾನಿತ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿ. ೧೭ ರಂದು ಬೆಳಗಾವಿಯಲ್ಲಿ ಆಖಿಲ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘ ಬೃಹತ್ ಹೋರಾಟ ನಡೆಸಲಿದೆ ಎಂದು ಕೊಡಗು ಜಿಲ್ಲಾ ಅನುದಾನಿತ ನೌಕರರ ಸಂಘದ ಕಾರ್ಯದರ್ಶಿ ನಾಗರಾಜ್ ಎಸ್. ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ಹಳೆಯ ಪಿಂಚಣಿ ಅತಿ ಶೀಘ್ರವಾಗಿ ಜಾರಿಗೆ ಸೇರಿದಂತೆ ಅನುದಾನಿತ ನೌಕರರ ಸಂಘದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೃಹತ್ ಹೋರಾಟಕ್ಕೆ ರಾಜ್ಯ ಸಂಘ ಈಗಾಗಲೇ ತೀರ್ಮಾನಿಸಿದ್ದು, ರಾಜ್ಯ, ಜಿಲ್ಲಾ ಮತ್ತು ತಾಲೂಕು ಸಂಘಟನೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದ್ದಾರೆ.