ಚೆಯ್ಯAಡಾಣೆ, ಡಿ. ೧೦: ಇತಿಹಾಸ ಪ್ರಸಿದ್ಧ ನಾಪೋಕ್ಲುವಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯದಲ್ಲಿ ತಾ. ೧೫ ರಂದು ವಿವಿಧ ದೈವ ಕೋಲಗಳೊಂದಿಗೆ ಆಚರಿಸಲ್ಪಡುವ ಪುತ್ತರಿ ವೆಳ್ಳಾಟಂ ನಡೆಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ಪೊನ್ನು ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಎ.ಕೆ. ಚಂದ್ರನ್ ಅವರು ತಿಳಿಸಿದ್ದಾರೆ.
ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಪುತ್ತರಿ ಹಬ್ಬಾಚರಣೆ ಕಾರ್ಯಕ್ರಮದ ಸಂದರ್ಭ ಮಾಹಿತಿ ನೀಡಿದ ಅವರು, ಹಲವಾರು ವರ್ಷಗಳಿಂದ ನಮ್ಮ ದೇವಾಲಯದಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ಪುತ್ತರಿ ವೆಳ್ಳಾಟಂ ನಡೆಸಿಕೊಂಡು ಬರುತ್ತಿದ್ದೇವೆ.
ಅದರಂತೆ ತಾ. ೧೫ ರಂದು ಮಧ್ಯಾಹ್ನ ೩ ಗಂಟೆಗೆ ದೇವಾಲಯದಲ್ಲಿ ಕೇರಳದ ಪ್ರಖ್ಯಾತ ಪರಶಿನಿಕಡವು ಮಡೆಯನ್ ಅವರ ನೃತ್ಯದೊಂದಿಗೆ ದೇವರನ್ನು ಮಲೆ ಇಳಿಸುವ ಮೂಲಕ ಪುತ್ತರಿ ವೆಳ್ಳಾಟಂಗೆ ಚಾಲನೆ ನೀಡಲಾಗುವುದು.
ಸಂಜೆ ೬ ಗಂಟೆಗೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ ನಡೆಯಲಿದೆ. ರಾತ್ರಿ ೭.೩೦ ಗಂಟೆಗೆ ಗುಳಿಗ ದೇವರ ವೆಳ್ಳಾಟಂ, ೮ ಗಂಟೆಗೆ ಕುಟ್ಟಿಚಾತ ದೇವರ ವೆಳ್ಳಾಟಂ ನಡೆದ ಬಳಿಕ ೯.೩೦ ಗಂಟೆಗೆ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭ ದೇವಾಲಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ. ಸಿ. ರಾಜೀವನ್, ಉಪಾಧ್ಯಕ್ಷ ರಿತೇಶ್ ಚಿನ್ನ, ಖಜಾಂಚಿ ಪಿ.ಸಿ. ಕಿಶೋರ್, ಸಹ ಕಾರ್ಯದರ್ಶಿ ಮನೋಹರ್, ಬಿ.ಬಿ. ಹರೀಶ್, ಟಿ.ಸಿ. ಮಣಿ, ಅಜಿತ್, ಟಿ.ಸಿ. ಹರೀಶ್ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.