ಪೊನ್ನAಪೇಟೆ/ವೀರಾಜಪೇಟೆ ಡಿ. ೧೦: ಒಂದೇ ಕುಟುಂಬದ ನಾಲ್ವರನ್ನು ಕತ್ತಿಯಿಂದ ಹಲ್ಲೆಗೈದು ಬರ್ಬರವಾಗಿ ಹತ್ಯೆಗೈದಿದ್ದ ಅಪರಾಧಿಗೆ ಮರಣದಂಡನೆ ಹಾಗೂ ಪ್ರತ್ಯೇಕ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ವೀರಾಜಪೇಟೆ ನ್ಯಾಯಾಲಯವು ಇಬ್ಬರಿಗೆ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿ ತೀರ್ಪು ಘೋಷಿಸಿದೆ. ಮಾರ್ಚ್ ೨೭ ರಂದು ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬೇಗೂರು ಗ್ರಾಮದಲ್ಲಿ ಕತ್ತಿಯಿಂದ ಹಲ್ಲೆಗೈದು ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿ, ಜೈಲು ಪಾಲಾಗಿದ್ದ ಕೇರಳ ಮಾನಂದವಾಡಿಯ ಅತ್ತಿಮಾಲ ಕಾಲೋನಿಯ ಎ.ಕೆ. ಗಿರೀಶ್ (೩೮) ಎಂಬಾತನಿಗೆ ವೀರಾಜಪೇಟೆಯ ೨ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಘಟನೆ ನಡೆದ ೯ ತಿಂಗಳ ಅವಧಿಯಲ್ಲಿ ಗಲ್ಲು ಶಿಕ್ಷೆ ಪ್ರಕಟವಾಗಿದ್ದು, ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಇದು ಅಪರೂಪದ ವಿದ್ಯಮಾನವಾಗಿದೆ.

ಏನಿದು ಘಟನೆ?

ಆರೋಪಿ ಗಿರೀಶ್ ಮಾರ್ಚ್ ೨೭ ರಂದು ರಾತ್ರಿ ಜೇನುಕುರುಬ ಸಮುದಾಯದ ಕರಿಯ (೭೦), ಗೌರಿ (೭೮), ನಾಗಿ (೩೦) ಮತ್ತು ೬ ವರ್ಷದ ಕಾವೇರಿಯನ್ನು ಕತ್ತಿಯಿಂದ ಬರ್ಬರವಾಗಿ ಕೊಚ್ಚಿ ಅಮಾನುಷವಾಗಿ ಕೊಂದು ತಲೆಮರೆಸಿಕೊಂಡಿದ್ದ.

ಘಟನೆ ಮಾರ್ಚ್ ೨೮ ರಂದು ಬೆಳಿಗ್ಗೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಕೊಡಗು ಎಸ್.ಪಿ. ರಾಮರಾಜನ್, ಅಂದಿನ ಅಡಿಷನಲ್ ಎಸ್ಪಿ ಸುಂದರ್ ರಾಜ್ ಭೇಟಿ ನೀಡಿ ಮಾಹಿತಿ ಪಡೆದು ಪರಿಶೀಲನೆ ನಡೆಸಿ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿ, ಕೊಲೆ ಆರೋಪಿ ಗಿರೀಶ್‌ನನ್ನು ಘಟನೆ ನಡೆದ ೨೪ ಗಂಟೆಯೊಳಗೆ ಕೇರಳದಲ್ಲಿ ಬಂಧಿಸಲಾಗಿತ್ತು. ಆರೋಪಿ ತಾನು ಒಂದು ವರ್ಷದ ಹಿಂದೆ ವಿವಾಹವಾಗಿದ್ದ ನಾಗಿಗೆ ಬೇರೊಬ್ಬರೊಂದಿಗೆ ಅಕ್ರಮ ಸಂಬAಧ ಇದೆ ಎಂಬ ಅನುಮಾನದಿಂದ ಹಾಗೂ ಆಕೆಯ ಅಜ್ಜ ಕಾಫಿ ಮಾರಲು ಅವಕಾಶ ನೀಡಲಿಲ್ಲ ಎಂಬ ಕೋಪದಿಂದ ಆಕೆಯ ಮೇಲೆ ಕತ್ತಿಯಿಂದ ಮನಬಂದAತೆ ಹಲ್ಲೆ ನಡೆಸಿದ್ದ, ಈ ಸಂದರ್ಭ ತಡೆಯಲು ಬಂದ ಅಜ್ಜ ಕರಿಯ, ಅಜ್ಜಿ ಗೌರಿಗೂ ಕತ್ತಿಯಿಂದ ಕಡಿದು, ತನ್ನ ಪತ್ನಿ ನಾಗಿಯ ಎರಡನೇ ಪತಿಗೆ ಜನಿಸಿದ್ದ ೬ ವರ್ಷದ ಮಗುವಿನ ತಲೆ, ಕಿವಿ, ಮುಖದ ಭಾಗಕ್ಕೆ ಕಡಿದು ವಿಕೃತಿ ಮೆರೆದು ಕೊಲೆ ಮಾಡಿದ್ದ.

ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ೨ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್. ನಟರಾಜು ಅವರು ಸಾಕ್ಷಿ, ಪುರಾವೆಗಳನ್ನು ಅವಲೋಕಿಸಿ ಆರೋಪಿ ಎ.ಕೆ. ಗಿರೀಶ್ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ ಕಲಂ ೧೦೩(೧), ೨೩೮ ಬಿ.ಎನ್.ಎಸ್ ಅಡಿಯಲ್ಲಿ ಅಪರಾಧಕ್ಕೆ ಗಲ್ಲು ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಯಾಸಿನ್ ಅಹಮದ್ ಅವರು ವಾದ ಮಂಡಿಸಿದರು. ತನಿಖಾಧಿಕಾರಿ, ವೃತ್ತನಿರೀಕ್ಷಕ ಶಿವರಾಜ್ ಆರ್. ಮುಧೋಳ್, ಸಹಾಯಕ ತನಿಖಾಧಿಕಾರಿ ಅಬ್ದುಲ್ ಮಜೀದ್, ಹೇಮಲತಾ ರೈ ಅವರು ಪ್ರಕರಣದ ತನಿಖೆ ಮಾಡಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಇಬ್ಬರಿಗೆ ಜೀವಾವಧಿ : ನಿಟ್ಟೂರು ಹಾಗೂ ಬೇತ್ರಿ ಸಮೀಪದ ನಾಲ್ಕೇರಿಯಲ್ಲಿ ನಡೆದಿದ್ದ ಪ್ರತ್ಯೇಕ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದೆ.

ತಾ. ೧೩.೦೬.೨೦೨೨ರಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟೂರು ಗ್ರಾಮದಲ್ಲಿ ತನ್ನ ಪತ್ನಿ ಮುತ್ತಕ್ಕಿಯನ್ನು ಕತ್ತಿಯಿಂದ ಕಡಿದು ಹತ್ಯೆಗೈದಿದ್ದ ಜೇನು ಕುರುಬರ ರಾಜು ಎಂಬಾತನಿಗೆ ವೀರಾಜಪೇಟೆಯ ೨ ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಧೀಶರಾದ ಎಸ್. ನಟರಾಜು ವಾದ ಪ್ರತಿವಾದ ಆಲಿಸಿ ಆರೋಪಿ ಜೇನುಕುರುಬರ ರಾಜು ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಬಿಎನ್‌ಎಸ್ ಕಲಂ ೩೦೨, ಅಡಿಯಲ್ಲಿ ಅಪರಾಧಕ್ಕೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ. ೨೫,೦೦೦ ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದಲ್ಲಿ ೬ ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ. ಅಂದಿನ ವೃತ್ತನಿರೀಕ್ಷಕ ಎಂ.ವಿ. ಗೋವಿಂದರಾಜು ಅವರು ಪ್ರಕರಣದ ತನಿಖೆ ಮಾಡಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ತಾ.೨೮.೪.೨೦೨೨ ರಂದು ವೀರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೇತ್ರಿ ಸಮೀಪದ ನಾಲ್ಕೇರಿ ಗ್ರಾಮದ ತೋಟವೊಂದರ ಲೈನ್‌ಮನೆಯಲ್ಲಿ ವಾಸವಿದ್ದ ಚೋಮಚ್ಚೀರ ಲವ (ಮುತ್ತಣ್ಣ) ತನ್ನ ಪತ್ನಿ ಸುಮಿತ್ರಳನ್ನು ಪೈಪ್‌ನಿಂದ ಹಲ್ಲೆಗೈದು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಈ ಕುರಿತು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವೀರಾಜಪೇಟೆಯ ಅಂದಿನ ಡಿವೈಎಸ್‌ಪಿ ನಿರಂಜನ್ ರಾಜ್ ಅರಸ್ ಆರೋಪಿ ವಿರುದ್ಧ ಐಪಿಸಿ ೩೦೨, ಎಸ್.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಅಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಟರಾಜು ಅವರು ಕೊಲೆ ಅಪರಾಧಕ್ಕೆ ಜೀವಾವಧಿ ಶಿಕ್ಷೆ, ರೂ ೨೫ ಸಾವಿರ ರೂ. ದಂಡ, ಪಾವತಿಸುವುದು ತಪ್ಪಿದಲ್ಲಿ ೬ ತಿಂಗಳ ಸಾದಾ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ಇವೆಲ್ಲ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಯಾಸಿನ್ ಅಹಮದ್ ವಾದ ಮಂಡಿಸಿದರು.