ನಾಪೋಕ್ಲು, ಡಿ. ೧೦: ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭಾರತೀಯ ಸಂಬಾರ ಮಂಡಳಿ ಮಡಿಕೇರಿ ಹಾಗೂ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಅಪ್ಪಂಗಳ ಇವುಗಳ ಜಂಟಿ ಆಶ್ರಯದಲ್ಲಿ ಕಾಳುಮೆಣಸು ಹಾಗೂ ಏಲಕ್ಕಿ ಬೆಳೆಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರಾಜೆ ವಿ.ಎಸ್.ಎಸ್.ಎನ್. ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ವಹಿಸಿ ಮಾತನಾಡಿ, ಕೃಷಿಕರು ಆಗಿಂದಾಗ್ಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೃಷಿಯಲ್ಲಿ ಋಷಿಯಾಗಿ ಖುಷಿ ಕಂಡವರಿದ್ದು, ಕೃಷಿಕರಿಗೆ ತಲ್ಲೀನತೆ ಅಗತ್ಯ ಎಂದರು.
ಪಿಎಲ್ಡಿ ಬ್ಯಾಂಕ್ನ ನಿರ್ದೇಶಕ ಭುವನೇಶ್ವರ ಎನ್.ವಿ. ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ, ಉಪಾಧ್ಯಕ್ಷ ನಂಜಪ್ಪ ನಿಟ್ಟಿಮಲೆ, ಸಂಸ್ಥೆಯ ಉಪಾಧ್ಯಕ್ಷ ಅಶೋಕ ಪಿ.ಎಂ., ಸಂಬಾರ ಮಂಡಳಿ ಅಧಿಕಾರಿಗಳಾದ ರಶ್ಮಿ ಹಾಗೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಉಪಸ್ಥಿತರಿದ್ದರು.
ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಅಪ್ಪಂಗಳದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಅಂಕೆಗೌಡ ಏಲಕ್ಕಿ ಮತ್ತು ಕಾಳುಮೆಣಸು ವಿಚಾರವಾಗಿ ರೈತ ಸದಸ್ಯರುಗಳಿಗೆ ಮಾಹಿತಿಯನ್ನು ನೀಡಿದರು. ಸಂಸ್ಥೆಯ ಸಿಬ್ಬಂದಿ ರವಿಪ್ರಕಾಶ್ ಸ್ವಾಗತಿಸಿದರು.