ಸೋಮವಾರಪೇಟೆ, ಡಿ. ೧೦ : ಪಟ್ಟಣದ ಮಾರುಕಟ್ಟೆ ಆವರಣದಲ್ಲಿ ಕಳೆದ ಅನೇಕ ಸಮಯಗಳಿಂದ ಅನಾರೋಗ್ಯ ದಿಂದ ನರಳುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವರನ್ನು ಶಿವರಾಮೇಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಪದಾಧಿಕಾರಿಗಳು ಅನಾಥಾಶ್ರಮಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದರು.
ಮಾರುಕಟ್ಟೆ ಆವರಣದಲ್ಲಿ ಹಲವು ತಿಂಗಳಿನಿAದ ಅನಾರೋಗ್ಯದಿಂದ ನರಳುತ್ತಿದ್ದ ಮಾನಸಿಕ ಅಸ್ವಸ್ಥ ಸೋಮು ಎಂಬ ವ್ಯಕಿಯನ್ನು ಪಟ್ಟಣ ಪಂಚಾಯಿತಿ ಸಹಕಾರದಿಂದ, ಪೊಲೀಸ್ ಇಲಾಖೆಯ ಅನುಮತಿ ಪಡೆದು ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಬೆಂಗಳೂರಿನ ಆಟೋ ರಾಜ ಅನಾಥಶ್ರಮಕ್ಕೆ ಕರೆದೊಯ್ದರು.
ಸೋಮು ಅವರನ್ನು ಪಟ್ಟಣ ಪಂಚಾಯಿತಿ ಪೌರಕಾರ್ಮಿಕರು ಸ್ನಾನ ಮಾಡಿಸಿ, ಶುಚಿಗೊಳಿಸಿ, ಹೊಸ ಬಟ್ಟೆಯನ್ನು ಹಾಕಿಸಿ, ಪಂಚಾಯಿತಿ ಮೂಲಕ ವಾಹನ ವ್ಯವಸ್ಥೆ ಕಲ್ಪಿಸಿ, ಈ ಮಾನವೀಯ ಕಾರ್ಯದಲ್ಲಿ ಕೈಜೋಡಿಸಿದರು.