ನಾಪೋಕ್ಲು, ಡಿ. ೧೦: ಮಡಿಕೇರಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ಸಹಪಠ್ಯ ಸ್ಪರ್ಧಾ ಕಾರ್ಯಕ್ರಮದ ಪ್ರೌಢಶಾಲಾ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಭಾಗಮಂಡಲದ ಕಾವೇರಿ ಪದವಿಪೂರ್ವ ಕಾಲೇಜಿನ ಪಾಂಡುರAಗ ಪ್ರಥಮ ಸ್ಥಾನವನ್ನು ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಐರಿನ್ ಉಷಾ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಮೋದ್ ಹಾಗೂ ಇಸಿಓ ಜಾನೆಟ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿದರು. ಸಾಮಾನ್ಯ ರಸಪ್ರಶ್ನೆ ಸ್ಪರ್ಧೆಯಲ್ಲಿ ಹಾಕತ್ತೂರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಸಿ.ಎಂ. ಮುನೀರ್, ಬಿ.ಎಂ. ಮೀನಾ ಹಾಗೂ ಬಿ.ಎನ್. ಜಯಂತಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗಮಂಡಲದ ಜ್ಞಾನೋದಯ ಪ್ರೌಢಶಾಲೆಯ ಶಿಕ್ಷಕಿ ಪ್ರತಿಭಾ ಎಂ. ಪ್ರಥಮ ಸ್ಥಾನ ಗಳಿಸಿದರು.

ಪ್ರಾಥಮಿಕ ಶಾಲಾ ವಿಭಾಗದ ಆಶುಭಾಷಣ ಸ್ಪರ್ಧೆಯಲ್ಲಿ ಮಡಿಕೇರಿಯ ಯುರೋ ಕಿಡ್ಸ್ ಶಾಲೆಯ ಶಿಕ್ಷಕಿ ರಶ್ಮಿ ದೀಪ ಪ್ರಥಮ ಸ್ಥಾನ, ಪುತ್ಯ ಪೆರಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮೋಹನ್ ಪೆರಾಜೆ ದ್ವಿತೀಯ ಸ್ಥಾನ, ಚೆಂಬು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರೋಹಿತ್ ಕುಮಾರ್ ತೃತೀಯ ಸ್ಥಾನ ಗಳಿಸಿದರು. ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ನಾಪೋಕ್ಲು ಕೆಪಿಎಸ್ ಶಾಲೆಯ ಚಂದ್ರಮತಿ ಪ್ರಥಮ, ಮಡಿಕೇರಿಯ ಯುರೋಕಿಡ್ಸ್ ಶಾಲೆಯ ಚೈತನ್ಯ ಬಿ.ಪಿ. ದ್ವಿತೀಯ ಹಾಗೂ ಕಡಗದಾಳು ಸಿಆರ್‌ಪಿ ನಿಶಾ ಪಿ.ಸಿ. ತೃತೀಯ ಸ್ಥಾನವನ್ನು ಗಳಿಸಿದರು.

ಸಾಮಾನ್ಯ ರಸಪ್ರಶ್ನೆ ಸ್ಪರ್ಧೆಯಲ್ಲಿ ಚೆಯ್ಯಂಡಾಣೆಯ ಸಿಆರ್‌ಪಿ ಪವಿತ್ರ ಪ್ರಥಮ, ಪೆರಾಜೆ ಕುಂದಲ್ಪಾಡಿಯ ಶಿಕ್ಷಕ ಎನ್.ಎಸ್. ಕುಮಾರ್ ದ್ವಿತೀಯ, ಮಡಿಕೇರಿಯ ಕ್ಷೇತ್ರ ಸಂಪನ್ಮೂಲ ಸಮನ್ವಯ ವ್ಯಕ್ತಿ ವೀಣಾ ಎನ್. ತೃತೀಯ ಸ್ಥಾನವನ್ನು ಗಳಿಸಿದರು. ಚಿತ್ರಕಲಾ ಸ್ಪರ್ಧೆಯಲ್ಲಿ ಮೇಕೇರಿ ಸಿಆರ್‌ಪಿ ಕಲ್ಪನಾ ಪಿ.ಆರ್. ಪ್ರಥಮ, ಜ್ಞಾನೋದಯ ಭಾಗಮಂಡಲ ಶಾಲೆಯ ವರ್ಷ ಎಂ.ಎ. ದ್ವಿತೀಯ ಹಾಗೂ ಚೇರಂಬಾಣೆಯ ಸಿಆರ್‌ಪಿ ಬಿ. ಚಂದ್ರಿಕಾ ತೃತೀಯ ಸ್ಥಾನವನ್ನು ಗಳಿಸಿದರು.

ಸಭಾ ಕಾರ್ಯಕ್ರಮ

ಶಿಕ್ಷಕರ ಸಹಪಠ್ಯ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯ ಅಧಿಕಾರಿ ಶರ್ಮಿಳ, ಶಿಕ್ಷಕರು ಸಹ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ವಿವಿಧ ಸಹಪಠ್ಯ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಶಿಕ್ಷಕರು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರಾಜೆ ಮಾತನಾಡಿ, ಶಿಕ್ಷಕರ ಕಲ್ಯಾಣ ನಿಧಿ ಶಿಕ್ಷಕರ ಪ್ರತಿಭೆಗಳನ್ನು ಗುರುತಿಸಲು ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸುತ್ತಿದೆ.

ಆದರೆ ಸಹಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಶಿಕ್ಷಕರ ಸಂಖ್ಯೆ ಇಳಿಮುಖಗೊಳ್ಳುತ್ತಿದೆ, ಶಾಲಾ ಜಂಜಾಟದಿAದ ಹೊರಬಂದು ಶಿಕ್ಷಕರು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈಪಿಸಿ ಕೃಷ್ಣಪ್ಪ ಮಾತನಾಡಿದರು. ಇಸಿಒ ಜಾನೆಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವಿಜೇತ ಶಿಕ್ಷಕರಿಗೆ ಕ್ರಮವಾಗಿ ರೂ. ೧,೫೦೦, ರೂ. ೧,೦೦೦ ಮತ್ತು ರೂ. ೫೦೦ ನಗದು ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.