ಐಗೂರು, ಡಿ. ೧೧: ಐಗೂರು ಗ್ರಾಮ ಪಂಚಾಯಿತಿಯ ಗ್ರಾಮಸಭೆ ಪಂಚಾಯಿತಿಯ ಸಭಾಂಗಣದಲ್ಲಿ ಅಧ್ಯಕ್ಷ ಜಿ.ಕೆ. ವಿನೋದ್ ಅಧ್ಯಕ್ಷತೆಯಲ್ಲಿ ನಡೆಯಿತು. ಇಲಾಖೆಗಳಿಂದ ಸಿಗುವ ಸೌಲಭ್ಯಗಳ ಬಗ್ಗೆ ವಿವಿಧ ಇಲಾಖಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಫೆಬ್ರವರಿ ೯ಕ್ಕೆ ೯ನೇ ತಾಲೂಕು ಸಾಹಿತ್ಯ ಸಮ್ಮೇಳನ ಐಗೂರಿನಲ್ಲಿ ನಡೆಯಲಿದ್ದು, ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರ ಸಹಕಾರವನ್ನು ಸಭೆಯಲ್ಲಿ ಪ್ರಮುಖರಾದ ಕೆ.ಪಿ. ಮುತ್ತಪ್ಪ ಅವರು ಬಯಸಿದರು. ಗ್ರಾಮಸ್ಥರಾದ ಕೆ.ಪಿ. ದಿನೇಶ್, ರಮೇಶ್, ಎಂ.ಎ. ಪ್ರಭಾಕರ, ಮಚ್ಚಂಡ ಪ್ರಕಾಶ್, ಮೋಹನ್, ಕೆ.ಪಿ ರಾಯ್, ಜಯಪ್ರಕಾಶ್, ಹರಿದಾಸ್, ಅವಿಲಾಶ್, ಹೊನ್ನಪ್ಪ, ಕೈರುನ್ನಿಸ ಮತ್ತು ಶಕೀನ ಅವರುಗಳು ಗ್ರಾಮದಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.
ಪಡಿತರ ಅಕ್ಕಿ ವಿತರಣೆಗೆ ಬೆರಳಚ್ಚು ನೀಡುವಾಗ ಕೃಷಿ ಪತ್ತಿನ ಸಂಘದಲ್ಲಿ ಸರ್ವರ್ ಸಮಸ್ಯೆ ಎದುರಾಗುತ್ತಿದ್ದು ಇದನ್ನು ಸರಿಪಡಿಸುವಂತೆ ಸಭೆಯಲ್ಲಿದ್ದ ಗ್ರಾಮಸ್ಥರು ಆಗ್ರಹಿಸಿದರು. ಬೆಳೆ ಸಮೀಕ್ಷೆ ವರದಿಯಲ್ಲಿ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದು ಈ ಬಗ್ಗೆ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಐಗೂರಿನ ಪಶುವೈದ್ಯ ಕೇಂದ್ರಕ್ಕೆ ಖಾಯಂ ವೈದ್ಯರನ್ನು ನೇಮಿಸಬೇಕು, ಕಾಜೂರು ಸರ್ಕಾರಿ ಶಾಲೆಯ ದಾಖಲೆಯ ಸಮಸ್ಯೆ ಸರಿಪಡಿಸಬೇಕು, ಯಡವಾರೆಯಲ್ಲಿ ಬೋರ್ವೆಲ್ ಸಮಸ್ಯೆ ವಿಷಯಗಳ ಪ್ರಸ್ತಾಪವಾಯಿತು.
ಐಗೂರಿನಲ್ಲಿ ಜಲಜೀವನ್ ಮಿಷನ್ ಯೋಜನೆ ಅನಿಷ್ಠಾನ ಕುಂಠಿತಗೊAಡಿದ್ದು, ೨೦೨೨ರಲ್ಲಿ ಕಾರ್ಯಾದೇಶ ನೀಡಿದ್ದರೂ ನೀರಿಲ್ಲದ ಖಾಲಿ ಟ್ಯಾಂಕ್ ಮಾತ್ರ ಗ್ರಾಮದಲ್ಲಿದೆ. ಇದನ್ನು ಶೀಘ್ರ ಸರಿಪಡಿಸುವಂತೆ ಆಗ್ರಹಿಸಲಾಯಿತು. ಐಗೂರು ಗ್ರಾಮಸ್ಥರು ಕಿರಗಂದೂರು ಗ್ರಾಮದಲ್ಲಿ ಶವ ಸಂಸ್ಕಾರ ನಡೆಸುತ್ತಿದ್ದು, ಐಗೂರಿನಲ್ಲೇ ಖಾಯಂ ಸ್ಮಶಾನದ ಅವಶ್ಯಕತೆ ಇದೆ, ಈ ಬಗ್ಗೆ ಪಂಚಾಯಿತಿ ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದರು.
ಅಧ್ಯಕ್ಷ ಜೆ.ಕೆ. ವಿನೋದ್ ಸಮಸ್ಯೆಗಳನ್ನು ಆಲಿಸಿ ಸಂಬAಧಿಸಿದ ಅಧಿಕಾರಿಗಳಿಗೆ ಪರಿಹಾರ ಒದಗಿಸುವಂತೆ ಸೂಚಿಸಿದರು. ಪಿಡಿಓ ಪೂರ್ಣ ಕುಮಾರ್, ನೋಡಲ್ ಅಧಿಕಾರಿ ಪಶು ಸಂಗೋಪನಾ ಇಲಾಖೆಯ ಡಾ. ರಾಜಶೇಖರ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು, ಉಪಾಧ್ಯಕ್ಷೆ ಗೌರಮ್ಮ, ಸದಸ್ಯರುಗಳಾದ ಬಾರನ ಪ್ರಮೋದ್, ರಾಜೇಶ್, ಪಾರ್ವತಿ, ಪೂರ್ಣಿಮಾ, ಜಾನಕಿ, ಜುನೈದ್, ಜೋಯಪ್ಪ, ಬೇಬಿ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.