ಕಣಿವೆ, ಡಿ. ೧೨ : ಧರೆಯಲ್ಲಿ ನಡೆದಾಡಿದ ದೇವರು ಎಂಬ ಅಪಾರ ಭಕ್ತಸ್ತೋಮದ ಅದಮ್ಯ ನಂಬಿಕೆಯ ದೈವ ತುಮಕೂರಿನ ಸಿದ್ದಗಂಗಾ ಮಠದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿ.

ಶ್ರೀಗಳ ಸ್ಮರಣೆಯನ್ನು ಚಿರಕಾಲ ನೆನಪಿಸುವಂತಹ ವೃತ್ತವೊಂದು ಕುಶಾಲನಗರದ ಬಲಮುರಿ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ನಿರ್ಮಾಣವಾಗುತ್ತಿದೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಕುಶಾಲನಗರದಲ್ಲಿ ಜರುಗಿದ ವೀರಶೈವ ಮಹಾಸಭಾದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅಂದಿನ ಶಾಸಕ ಅಪ್ಪಚ್ಚು ರಂಜನ್ ಅವರಲ್ಲಿ ಕುಶಾಲನಗರದಲ್ಲಿ ಡಾ. ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಾಣಕ್ಕೆ ಪುರಸಭೆಯಿಂದ ಸೂಕ್ತ ಸ್ಥಳಾವಕಾಶಕ್ಕೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಬೇಡಿಕೆ ಇಟ್ಟಿದ್ದರು.

ಶ್ರೀಗಳ ಬೇಡಿಕೆಗೆ ಒಪ್ಪಿದ ಅಪ್ಪಚ್ಚು ರಂಜನ್ ಕೂಡಲೇ ಸೂಕ್ತ ಸ್ಥಳಾವಕಾಶ ಹುಡುಕಿ ಕೊಡುವಂತೆ ಸಭೆಯಲ್ಲಿದ್ದ ಜಯವರ್ಧನ್ ಅವರಿಗೆ ಸೂಚಿಸಿದ್ದರು. ಬಳಿಕ ಬಲಮುರಿ ದೇಗುಲ ಮಾರ್ಗದಲ್ಲಿನ ನಾಲ್ಕು ರಸ್ತೆಗಳು ಸೇರುವ ವೃತ್ತದಲ್ಲಿ ಇದ್ದ ಶಿವಕುಮಾರ ಸ್ವಾಮೀಜಿ ಹೆಸರಿನ ಉದ್ಯಾನದ ಮುಂಬದಿ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಚಾಲನೆ ದೊರಕಿತ್ತು.

ಇದಾದ ನಂತರ ಕುಶಾಲನಗರದ ಶ್ರೀ ಸಿದ್ದಗಂಗಾ ಶ್ರೀ ಭಕ್ತ ಮಂಡಳಿ ಹಾಗೂ ಸ್ಥಳೀಯ ವೀರಶೈವ ಮಹಾಸಭಾದ ವತಿಯಿಂದ ಈ ಹಿಂದೆ ಕುಶಾಲನಗರದ ಪುರಸಭೆಗೆ ಮನವಿ ಅರ್ಪಿಸಿದ ಸಂದರ್ಭ ಅಂದು ಪುರಸಭೆ ಅಧ್ಯಕ್ಷರಾಗಿದ್ದ ಜಯವರ್ಧನ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಎಂ.ಬಿ. ಸುರೇಶ್ ಅವರ ಆಸಕ್ತಿಯಿಂದಾಗಿ ಡಾ. ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಾಣದ ಪ್ರಸ್ತಾಪ ಸರ್ಕಾರ ಹಾಗೂ ರಾಜ್ಯಪಾಲರ ವರೆಗೂ ತಲುಪಿ ಅದು ಸರ್ಕಾರದ ಗೆಜೆಟಿಯರ್‌ನಲ್ಲೂ ದಾಖಲಾದ ಬಳಿಕ ಪುರಸಭೆಗೆ ಸಮ್ಮತಿ ದೊರಕಿತ್ತು.

ಪುರಸಭೆ ಅಲ್ಲಿನ ವೃತ್ತದಲ್ಲಿ ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಾಣದ ಸಮ್ಮತಿ ನೀಡಿದೊಡನೆ ಕೊಡಗು ವೀರಶೈವ ಮಹಾಸಭಾದ ಅಧ್ಯಕ್ಷರಾದ ಹೆಚ್.ವಿ. ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಬ ಶಿವಯ್ಯ ಅವರ ವಿಶೇಷ ಆಸಕ್ತಿಯಿಂದಾಗಿ ಡಾ.ಶಿವಕುಮಾರ ಸ್ವಾಮೀಜಿ ವೃತ್ತ ನಿರ್ಮಾಣದ ಕನಸು ಸಾಕಾರಗೊಂಡಿತು.ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ನಂದೀಶ್ ಹಾಗೂ ವೀರಶೈವ ಸಮಾಜದ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ತಾಲೂಕು ಅಧ್ಯಕ್ಷ ಮಧುಸೂದನ್, ಶ್ರೀ ಸಿದ್ದಗಂಗಾ ಭಕ್ತ ಮಂಡಳಿ ಅಧ್ಯಕ್ಷ ಕೆ.ಎಸ್. ಮೂರ್ತಿ ಸೇರಿದಂತೆ ಸಮಾಜದ ಸಮಾನ ಮನಸ್ಕರ ಸೇವೆಯೂ ಇಲ್ಲಿ ಸ್ಮರಣೀಯ.

ಇದೀಗ ರೂ.೩ ಲಕ್ಷ ವೆಚ್ಚದಲ್ಲಿ ದಾನಿಗಳ ಸಹಕಾರದೊಂದಿಗೆ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವ ವೃತ್ತದ ಗೋಪುರದೊಳಗೆ ಗ್ರಾನೈಟ್‌ನಲ್ಲಿ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರ ತಿದ್ದಿದ ಪ್ರತಿಮೆ ಸಿದ್ದಗೊಂಡಿದೆ.

ಶಿವಕುಮಾರ ಸ್ವಾಮೀಜಿ ನವ ವೃತ್ತ ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿ ಆಗಿರುವುದು ಇಡೀ ಪಟ್ಟಣದ ಭಕ್ತಜನ ಸಂತಸಪಡುವAತಾಗಿದೆ. ಡಿಸೆಂಬರ್ ಮಾಸಾಂತ್ಯದಲ್ಲಿ ವೃತ್ತ ಲೋಕಾರ್ಪಣೆಗೊಳ್ಳಲಿದೆ ಎಂದು ವೃತ್ತದ ಮುಖ್ಯ ಸಂಚಾಲಕ ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ ಹೇಳಿದ್ದಾರೆ.

ಇದೇ ರೀತಿ ಸಿದ್ದಗಂಗಾ ಭಕ್ತಮಂಡಳಿ ವತಿಯಿಂದ ಡಾ. ಶಿವಕುಮಾರ ಸ್ವಾಮೀಜಿ ವೃತ್ತ ಕುಶಾಲನಗರ ಮಡಿಕೇರಿ ರಾಷ್ಟಿçÃಯ ಹೆದ್ದಾರಿಯ ಗುಡ್ಡೆಹೊಸೂರು ಬಳಿ ಕಳೆದ ಎಂಟು ವರ್ಷಗಳ ಹಿಂದೆ ನಿರ್ಮಾಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

- ಕೆ.ಎಸ್. ಮೂರ್ತಿ