ಕೂಡಿಗೆ, ಡಿ. ೧೨: ಕೂಡಿಗೆಯಲ್ಲಿರುವ ಯೂನಿಯನ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ೩೮ ದಿನಗಳ ಕಾಲ ನಡೆದ ಸ್ವ-ಉದ್ಯೋಗ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಸಂಸ್ಥೆಯ ಸಭಾಂಗಣ ದಲ್ಲಿ ನಡೆಯಿತು. ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಚೇಂಬರ್ ಆಫ್ ಕಾಮರ್ಸ್ನ ಜಿಲ್ಲಾ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಭಾಗವಹಿಸಿ ಶಿಬಿರಾರ್ಥಿಗಳಿಗೆ ಸ್ವ-ಉದ್ಯೋಗ ತರಬೇತಿ ಪಡೆದು ಸ್ವಂತ ಉದ್ದಿಮೆಯಲ್ಲಿ ಬರುವಂತಹ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದರು. ಉದ್ಯೋಗಿ ಆಗುವುದರೊಂದಿಗೆ ಇತರರಿಗೂ ಉದ್ಯೋಗವನ್ನು ನೀಡುವಂತವರಾಗಿ ಎಂದು ಶುಭ ಹಾರೈಸಿದರು.
ಸಂಸ್ಥೆಯ ನಿರ್ದೇಶಕ ಪ್ರಕಾಶ್ ಕುಮಾರ್ ಹಾಜರಿದ್ದು, ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಣೆ ಮಾಡಲಾಯಿತು. ಈ ಸಂದರ್ಭ ಸಂಸ್ಥೆಯ ಸಿಬ್ಬಂದಿ ವರ್ಗ, ಶಿಬಿರಾರ್ಥಿಗಳು ಹಾಜರಿದ್ದರು.