ಕಾವೇರಿ ಸಂರಕ್ಷಣೆ ಕ್ರಮಕ್ಕೆ ಪ್ರಸ್ತಾವನೆ ಸಲ್ಲಿಕೆ

ವಿಶೇಷ ವರದಿ - ವನಿತಾ ಚಂದ್ರಮೋಹನ್

ಕುಶಾಲನಗರ, ಡಿ. ೧೩: ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ಗಡಿ ಗುರುತು ಕುರಿತು ಸರ್ವೆ ಮಾಡುವ ಮೂಲಕ ನದಿಯ ಸಂರಕ್ಷಣೆ ಮತ್ತು ನದಿ ತಟಗಳ ಅಭಿವೃದ್ಧಿ ಬಗ್ಗೆ ಹಾಗೂ ನದಿ ತಟದಲ್ಲಿರುವ ಒತ್ತುವರಿ ತೆರವು ಹಾಗೂ ನದಿ ತಟದ ಜನರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಸರ್ಕಾರದ ಮೂಲಕ ಕ್ರಿಯಾ ಯೋಜನೆ ರೂಪಿಸಲು ಕರಡು ಪ್ರಸ್ತಾವನೆ ಒಂದನ್ನು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಮಗ್ರ ಮಾಹಿತಿಯೊಂದಿಗೆ ಮನವಿ ಸಲ್ಲಿಸಲಾಗಿದೆ.

ಜೀವನದಿ ಕಾವೇರಿ ಕೊಡಗು ಜಿಲ್ಲೆಯಲ್ಲಿ ಮೂಲದಿಂದಲೇ ನಿರಂತರವಾಗಿ ಕಲುಷಿತಗೊಳ್ಳುತ್ತಿದ್ದು, ಅದಕ್ಕೆ ಪ್ರಮುಖ ಕಾರಣಗಳು ಪಟ್ಟಣ ಮತ್ತು ಗ್ರಾಮಗಳ ತ್ಯಾಜ್ಯಗಳು, ಕಲುಷಿತ ನೀರು ನದಿಗೆ ನೇರವಾಗಿ ಸೇರುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ನದಿ ತಟಗಳು ಅಕ್ರಮವಾಗಿ ಒತ್ತುವರಿಯಾಗುವುದರೊಂದಿಗೆ ವಾಣಿಜ್ಯ ಕಟ್ಟಡಗಳು, ಅಂಗಡಿ ಮುಂಗಟ್ಟುಗಳು ಪ್ರವಾಸಿಗರಿಂದ ಉತ್ಪತ್ತಿಯಾಗುವ ತ್ಯಾಜ್ಯಗಳು, ಅವೈಜ್ಞಾನಿಕವಾಗಿ ವಿಲೇವಾರಿ ಯಾಗುತ್ತಿರುವುದು ಕಾವೇರಿ ನದಿ ಮಾಲಿನ್ಯಗೊಳಿಸಲು ಪ್ರಮುಖ ಕಾರಣವಾಗಿವೆ.

ಕಾವೇರಿ ನದಿ ಸೇರಿದಂತೆ ರಾಜ್ಯದ ಬಹುತೇಕ ನದಿಗಳು ನೇರವಾಗಿ ಕಲುಷಿತಗೊಳ್ಳುತ್ತಿದ್ದು ನೀರಿನ ಗುಣಮಟ್ಟ ಸಂಪೂರ್ಣ ಕ್ಷೀಣಗೊಂಡಿರುವ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಕಾವೇರಿ ನದಿ ಮೂಲದಿಂದಲೇ ನೇರವಾಗಿ ಕಲುಷಿತಗೊಳ್ಳುತ್ತಿದ್ದು, ನೀರಿನ ಗುಣಮಟ್ಟ ‘ಈ’ ದರ್ಜೆಯಿಂದ ‘ಬಿ’ ‘ಸಿ’ ದರ್ಜೆಗೆ ಇಳಿಯುತ್ತಿದೆ. ಕಾವೇರಿ ಸಂರಕ್ಷಣೆ ಬಗ್ಗೆ ಸರ್ಕಾರದ ಮೂಲಕ ಮುಂದಿನ ರಾಜ್ಯ ಬಜೆಟ್ ಮೂಲಕ ಅನುದಾನ ಕಲ್ಪಿಸುವಂತೆ ಮತ್ತು ಸ್ವಚ್ಛ ಕಾವೇರಿ ಯೋಜನೆಯ ಮುಂದಿನ ಕ್ರಮಕ್ಕಾಗಿ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.

ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ತಲಕಾವೇರಿ, ಭಾಗಮಂಡಲ, ಬೇಂಗೂರು, ಕುಂದಚೇರಿ, ನಾಪೋಕ್ಲು, ಬಲ್ಲಮಾವಟಿ, ಪಾರಾಣೆ, ಹೊದ್ದೂರು, ಮೂರ್ನಾಡು ಗ್ರಾಮದ ಮೂಲಕ ಹರಿಯುವ ಕಾವೇರಿಗೆ ಆಗಬೇಕಾದ ಯೋಜನೆಗಳು:-

* ತಲಕಾವೇರಿಯಲ್ಲಿ ಸಮರ್ಪಕ ಕುಡಿಯುವ ನೀರಿನ ಘಟಕ ಸ್ಥಾಪನೆ, ಹೈಟೆಕ್ ಸಮುದಾಯ ಶೌಚಾಲಯ ಮತ್ತು ಸಮರ್ಪಕ ನಿರ್ವಹಣೆ.

* ಭಾಗಮಂಡಲ ವ್ಯಾಪ್ತಿಯಲ್ಲಿ ನದಿ ತಟದಿಂದ ದೂರದಲ್ಲಿ ಹೈಟೆಕ್ ಸಮುದಾಯ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ಘಟಕ ಸ್ಥಾಪನೆ, ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿಗೆ ಹೆಚ್ಚಿನ ವಾಹನ ಸೌಲಭ್ಯ, ಶಾಶ್ವತ ಪರಿಹಾರಕ್ಕೆ ಒಳಚರಂಡಿ ಯೋಜನೆ ಅನುಷ್ಠಾನ. ಮೂಲ ಕಾವೇರಿಯ ವ್ಯಾಪ್ತಿಯಲ್ಲಿರುವ ಭಾಗಮಂಡಲ ಗಾಮ ಪಂಚಾಯಿತಿಗೆ ಸೀಮಿತವಾಗಿ ಹೆಚ್ಚುವರಿ ವಿಶೇಷ ಅನುದಾನ ಕಲ್ಪಿಸಲು ಸರಕಾರಕ್ಕೆ ಜಿಲ್ಲಾಡಳಿತದ ಮೂಲಕ ಪ್ರಸ್ತಾವನೆ ಸಲ್ಲಿಸಬೇಕಾಗಿದೆ.

* ನಾಪೋಕ್ಲು ವ್ಯಾಪ್ತಿಯಲ್ಲಿ ನದಿ ತಟದಲ್ಲಿ ತಡೆಗೋಡೆ ನಿರ್ಮಾಣ, ನದಿ ತೀರದಲ್ಲಿರುವ ೧,೫೦೦ಕ್ಕೂ ಅಧಿಕ ಮನೆಗಳ ಸ್ಥಳಾಂತರ ಹಾಗೂ ಪುನರ್ವಸತಿ ಕಲ್ಪಿಸುವುದು, ಕಸ ವಿಲೇವಾರಿಗೆ ರಕ್ಷಣೆ ಮಾಡುವುದು.

* ನದಿ ಹರಿಯುವ ಮೂರ್ನಾಡು ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಯೋಜನೆ ರೂಪಿಸುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.

ವೀರಾಜಪೇಟೆ ತಾಲೂಕು ವ್ಯಾಪ್ತಿಯ ಕಾಕೋಟುಪರಂಬು, ಬೇತ್ರಿ, ಹಾಲುಗುಂದ, ಕನ್ನಂಗಾಲ, ಸಿದ್ದಾಪುರ, ನೆಲ್ಲಿಹುದಿಕೇರಿ ಗ್ರಾಮಗಳಲ್ಲ. ಆಗಬೇಕಾದ ಯೋಜನೆಗಳು:-

* ಕಾಕೋಟುಪರಂಬು ಮತ್ತು ಬೇತ್ರಿ ವ್ಯಾಪ್ತಿಯಲ್ಲಿ ನದಿಗೆ ನೇರವಾಗಿ ಕಲುಷಿತ ತ್ಯಾಜ್ಯ ಸೇರುತ್ತಿದೆ. ನದಿ ತಟದಲ್ಲಿರುವ ೧೫೦ಕ್ಕೂ ಅಧಿಕ ಮನೆಗಳನ್ನು ಸ್ಥಳಾಂತರಿಸುವುದು, ಅವುಗಳಿಗೆ ಪುನರ್ವಸತಿ ಕಲ್ಪಿಸುವ ಮೂಲಕ ನದಿತಟದ ಅಭಿವೃದ್ಧಿಗೊಳಿಸುವುದು.

* ಹಾಲುಗುಂದ ಮತ್ತು ಕನ್ನಂಗಾಲ ಗ್ರಾಮಗಳ ವ್ಯಾಪ್ತಿಯಲ್ಲಿ ನದಿ ತೀರದಲ್ಲಿ ೧೫೦ಕ್ಕೂ ಅಧಿಕ ಮನೆಗಳನ್ನು ಮತ್ತು ಕನ್ನಂಗಾಲ ವ್ಯಾಪ್ತಿಯಲ್ಲಿ ೮೦ಕ್ಕೂ ಅಧಿಕ ಮನೆಗಳು ಕಂಡುಬರುತ್ತಿವೆ.

* ಸಿದ್ದಾಪುರ ವ್ಯಾಪ್ತಿಯಲ್ಲಿ ನದಿತಟದಲ್ಲಿ ೪೦೦ಕ್ಕೂ ಅಧಿಕ ಮನೆಗಳಿಂದ ನೇರವಾಗಿ ತ್ಯಾಜ್ಯಗಳು ನದಿ ಸೇರುತ್ತಿವೆ. ಕಸವಿಲೇವಾರಿಗೆ ಕ್ರಮಕೈಗೊಳ್ಳುವುದು ಮತ್ತು ಸೂಚನಾ ಫಲಕದ ಮೂಲಕ ಜನರಿಗೆ ಅರಿವು ಮೂಡಿಸುವುದು, ಮಾರುಕಟ್ಟೆ ವ್ಯಾಪ್ತಿಯಲ್ಲಿ ಸಮುದಾಯ ಶೌಚಾಲಯ ನಿರ್ಮಾಣ, ನಿರ್ವಹಣೆ ಮಾಂಸದ ಅಂಗಡಿಗಳಿAದ ಹೊರಸೂಸುವ ತ್ಯಾಜ್ಯಗಳ ಸಮರ್ಪಕ ವಿಲೇವಾರಿ.

* ಸಿದ್ದಾಪುರದಲ್ಲಿ ಒಳಚರಂಡಿ ಯೋಜನೆಯ ಕ್ರಮಕ್ಕೆ ಆದ್ಯತೆ ನೀಡುವುದು.

* ನೆಲ್ಲಿಹುದಿಕೇರಿ ಗ್ರಾಮ ವ್ಯಾಪ್ತಿಯಲ್ಲಿ ಮಾಂಸ, ಮೀನು, ಅಂಗಡಿಗಳಿAದ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಕಂಡುಬAದಿದೆ. ೨೦೦ಕ್ಕೂ ಅಧಿಕ ಮನೆಗಳು ನದಿತಟದಲ್ಲಿ ನಿರ್ಮಾಣಗೊಂಡಿವೆ. ತೆರವುಗೊಳಿಸಿ ಪುನರ್ವಸತಿ ಕಲ್ಪಿಸುವುದು ಮತ್ತು ನದಿ ತಟವನ್ನು ಅಭಿವೃದ್ಧಿಗೊಳಿಸುವುದು.

ಕುಶಾಲನಗರ ತಾಲೂಕು ಒಳಪಡುವ ಗ್ರಾಮಗಳಾದ ನೆಲ್ಲಿಹುದಿಕೇರಿ, ವಾಲ್ನೂರು ತ್ಯಾಗತ್ತೂರು, ನಂಜರಾಯಪಟ್ಟಣ, ದುಬಾರೆ, ಗುಡ್ಡೆಹೊಸೂರು, ಮುಳ್ಳುಸೋಗೆ, ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು ಮತ್ತು ಶಿರಂಗಾಲ ಹಾಗೂ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಆಗಬೇಕಾದ ಯೋಜನೆಗಳು:-

* ಪಟ್ಟಣದಲ್ಲಿ ಅಪೂರ್ಣಗೊಂಡಿರುವ ಒಳಚರಂಡಿ ಯೋಜನೆಯನ್ನು ಪೂರ್ಣಗೊಳಿಸಿ ತಕ್ಷಣ ಲೋಕಾರ್ಪಣೆ ಗೊಳಿಸುವುದು.

* ಈ ಮೂಲಕ ‘ಸ್ವಚ್ಛ ಪಟ್ಟಣ ಸ್ವಚ್ಛ ಕಾವೇರಿ’ ಗುರಿ ಈಡೇರುವಂತೆ ಮಾಡಲು ಕ್ರಮ ಕೈಗೊಳ್ಳುವಂತೆ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

* ನದಿ ತಟಗಳ ಹೊತ್ತು ಗಡಿ ಗುರುತು ಮಾಡುವ ಮೂಲಕ ನದಿಗೆ ನೇರವಾಗಿ ಕಲುಷಿತ ನೀರು ಸೇರದಂತೆ ಸ್ಥಳೀಯ ಆಡಳಿತದ ಮೂಲಕ ಕ್ರಮ ಕೈಗೊಳ್ಳುವುದು.

* ನದಿ ತಟದಲ್ಲಿರುವ ಅಕ್ರಮ ನಿಯಮ ಬಾಹಿರ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಿ ಬಫರ್ ಜೋನ್ ಪ್ರದೇಶದ ಅಭಿವೃದ್ಧಿ ಮಾಡುವುದು. ಪಟ್ಟಣದಲ್ಲಿರುವ ವಾಹನಗಳನ್ನು ತೊಳೆಯುವ ಸರ್ವಿಸ್ ಸ್ಟೇಷನ್‌ಗಳ ಕಲುಷಿತ ನೀರು, ಇಂಧನ ನದಿಗೆ ಸೇರದಂತೆ ಕ್ರಮ ಕೈಗೊಳ್ಳುವುದು. ನದಿ ಬದಿಯಲ್ಲಿ ನಿರ್ಮಾಣಗೊಂಡಿರುವ ಟೈಲ್ಸ್ ಮಾರ್ಬಲ್ ಸಂಗ್ರಹಣಾ ಕೇಂದ್ರದಿAದ ಹೊರಬರುವ ಅಪಾಯಕಾರಿ ತ್ಯಾಜ್ಯಗಳನ್ನು ನದಿಗೆ ಸೇರದಂತೆ ಕಟ್ಟುನಿಟ್ಟಾಗಿ ಸೂಚನೆ ನೀಡುವುದು.

* ಜಿಲ್ಲೆಯ ಪ್ರವೇಶ ದ್ವಾರದಲ್ಲಿ ಕಾವೇರಿ ನದಿಯ ಬೃಹತ್ ಗಾತ್ರದ ಫಲಕಗಳನ್ನು ಅಳವಡಿಸಿ ಸ್ವಚ್ಛತೆಯ ಬಗ್ಗೆ ಮಾಹಿತಿ ಒದಗಿಸುವುದು.

* ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ಪ್ರವಾಸಿಗರಿಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರ ನಿರ್ಮಿಸುವುದು.

* ಪ್ಲಾಸ್ಟಿಕ್ ಬಾಟಲ್ ಗಳು ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.

* ನಂಜರಾಯಪಟ್ಟಣದ ಬಳಿ ದುಬಾರೆ ಕಾವೇರಿ ನಿಸರ್ಗದಾಮ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರಿಂದ ಉತ್ಪÀತ್ತಿಯಾಗುವ ತ್ಯಾಜ್ಯಗಳು ನೇರವಾಗಿ ನದಿ ಸೇರುತ್ತಿವೆ. ಪ್ರವಾಸಿಗರಿಗೆ ಮೋಟಾರ್ ಬೋಟ್ ಬಳಸುವ ಮೂಲಕ ನದಿಗೆ ಇಂಧನಗಳು ಸೇರ್ಪಡೆಗೊಂಡು ನೀರು ಕಲುಷಿತಗೊಳ್ಳುತ್ತಿದೆ. ದಿನನಿತ್ಯ ದ್ವೀಪಗಳು ಮತ್ತು ತಟಗಳು ಕರಗಿ ಸಸ್ಯ ಸಂಕುಲಗಳು ಮರಗಳು ನಾಶಗೊಳ್ಳುವ ಸಂಭವ ಅಧಿಕವಾಗಿ ಕಂಡುಬAದಿದೆ. ಇವುಗಳನ್ನು ರದ್ದುಗೊಳಿಸಿ ಪೆಡಲ್ ಬೋಟ್‌ಗಳನ್ನು ಜಿಲ್ಲಾಡಳಿತ ಒದಗಿಸುವುದು, ನದಿಗೆ ಇಳಿಯಲು ಮತ್ತು ನಿರ್ಗಮಿಸಲು ಪ್ರತ್ಯೇಕ ಗೇಟ್‌ಗಳನ್ನು ಅಳವಡಿಸುವುದು, ರ‍್ಯಾಪ್ಟಿಂಗ್ ಕ್ರೀಡೆ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವಂತೆ ಗಮನ ಹರಿಸುವುದು.

* ದುಬಾರೆ ಸಾಕಾನೆ ಶಿಬಿರಕ್ಕೆ ತೂಗುಸೇತುವೆ ನಿರ್ಮಾಣಕ್ಕೆ ಯೋಜನೆ ಹಾಗೂ ಸ್ಥಳೀಯ ಹೊಟೇಲ್ ಮತ್ತಿತರ ಕಟ್ಟಡಗಳಿಂದ ಕಲುಷಿತ ನೀರು ನೇರವಾಗಿ ನದಿಗೆ ಹರಿಯುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳುವುದು. ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗಳನ್ನು ಸಂಪೂರ್ಣ ನಿರ್ಬಂಧಿಸಿ ಹಾರಂಗಿ ಅಣೆಕಟ್ಟು ಬಳಿ ಆನೆಗಳ ಶಿಬಿರದಲ್ಲಿ ಮಾತ್ರ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವುದು.

* ಪ್ರವಾಸಿ ಕೇಂದ್ರಗಳಲ್ಲಿ ಸ್ವಚ್ಛ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಪ್ಲಾಸ್ಟಿಕ್ ಬಾಟಲಿಗಳ ಹಾವಳಿಯನ್ನು ತಪ್ಪಿಸುವುದು, ಪ್ರವಾಸಿಗರು ಕುಡಿಯುವ ನೀರಿನ ಬಾಟಲಿ ಒಯ್ಯುವ ಸಂದರ್ಭ ನಿರ್ಬಂಧ ಹೇರುವುದು ಅಥವಾ ಖಾಲಿ ಬಾಟಲಿಗಳನ್ನು ಎಸೆಯದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದು, ಜಿಲ್ಲೆಯ ಪ್ರತಿ ಪ್ರವಾಸಿ ಕೇಂದ್ರಗಳಲ್ಲಿ ಕಸದ ಬುಟ್ಟಿಗಳನ್ನು ಅಳವಡಿಸುವುದು, ಸ್ವಚ್ಚತಾ ಅಭಿಯಾನದ ಬಗ್ಗೆ ಅರಿವು ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದು. ಜನರನ್ನು ಮತ್ತು ಸಂಘ ಸಂಸ್ಥೆಗಳನ್ನು ಸ್ವಚ್ಚತಾ ಕಾರ್ಯಕ್ರದಲ್ಲಿ ತೊಡಗಿಸಿಕೊಳ್ಳುವುದು, ಗ್ರಾಮ ಮತ್ತು ಪ್ರವಾಸಿ ಕೇಂದ್ರಗಳನ್ನು ಖಾಸಗಿ ಸಂಸ್ಥೆಗಳ ಮೂಲಕ ನಿರ್ವಹಣೆಗೆ ಕೋರಿಕೊಳ್ಳುವುದು. ಪ್ರವಾಸಿಗರಿಗೆ ಮಾಹಿತಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳುವುದು ಮತ್ತು ಕುಶಾಲನಗರ ಮಡಿಕೇರಿ ನಡುವೆ ಪ್ರವಾಸಿಗರಿಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು, ಒಳಗೊಂಡ ವ್ಯವಸ್ಥೆ ಕಲ್ಪಿಸುವುದು. ನದಿ ತಟದಲ್ಲಿರುವ ಗ್ರಾಮ ಪಟ್ಟಣಗಳ ವಾರದ ಸಂತೆಗಳಿAದ ಉತ್ಪತ್ತಿಯಾಗುವ ಭಾರಿ ಪ್ರಮಾಣದ ತ್ಯಾಜ್ಯಗಳು ನದಿ ಸೇರದಂತೆ ಎಚ್ಚರವಹಿಸುವುದು.

* ಕುಶಾಲನಗರ ಪಟ್ಟಣದ ಬಹುತೇಕ ಬಡಾವಣೆಗಳು ಕಳೆದ ಕೆಲವು ವರ್ಷಗಳಿಂದ ಮಳೆಗಾಲದ ಅವಧಿಯಲ್ಲಿ ಜಲಾವೃತಗೊಂಡು ಜನಜೀವನ ಅಸ್ಥವ್ಯಸ್ಥಗೊಳ್ಳುತ್ತಿದೆ. ಇದಕ್ಕೆ ಕಾರಣ ಹುಡುಕಲು ನದಿಯ ಮೂಲ ಸ್ವರೂಪದ ಬದಲಾವಣೆಯ ಬಗ್ಗೆ ಪರಿಶೀಲನೆಗೆ ತಜ್ಞರ ಸಮಿತಿಯೊಂದನ್ನು ನೇಮಿಸುವುದು. ನದಿಯ ಮೂಲ ಸ್ವರೂಪವನ್ನು ಉಳಿಸಿಕೊಂಡು ಒತ್ತುವರಿ ತೆರವುಗೊಳಿಸುವುದು. ಬೈಚನಹಳ್ಳಿ ತಾವರೆಕೆರೆ ಬಳಿಯಿಂದ ಕುಶಾಲನಗರ ಹಳೆ ಮಾರುಕಟ್ಟೆ ತನಕ ನದಿಗೆ ತಡೆಗೋಡೆ ನಿರ್ಮಿಸುವ ಮೂಲಕ ಪ್ರವಾಹ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವುದು. ನದಿ ಒತ್ತುವರಿಯನ್ನು ತೆರವುಗೊಳಿಸಿ ಅದರ ಅಭಿವೃದ್ಧಿ ನಡೆಸುವ ಮೂಲಕ ಪ್ರವಾಸೋದ್ಯಮಕ್ಕೆ ಕ್ರಿಯಾಯೋಜನೆ ರೂಪಿಸುವುದು. ಯೋಜನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು

* ಕುಶಾಲನಗರ ಕಾವೇರಿ ನಿಸರ್ಗಧಾಮ ಮತ್ತು ಮಾದಾಪಟ್ಟಣ ಗುಡ್ಡೆಹೊಸೂರು ಗ್ರಾಮಗಳ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ವಾಣಿಜ್ಯ ಕಟ್ಟಡಗಳಿಂದ ಹೊರಸೂಸುವ ತ್ಯಾಜ್ಯಗಳು ನೇರವಾಗಿ ನದಿ ಒಡಲು ಸೇರುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದು. ನದಿ ತಟಗಳಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿರುವ ತಡೆಗೋಡೆಗಳನ್ನು ತೆರವುಗೊಳಿಸುವುದು. ಎಲ್ಲಾ ವಾಣಿಜ್ಯ ಕಟ್ಟಡಗಳಿಂದ ಹೊರಬರುವ ತ್ಯಾಜ್ಯಗಳ ವಿಲೇವಾರಿಗೆ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಆದೇಶ ನೀಡುವುದು.

ತಪ್ಪಿದಲ್ಲಿ ಪರವಾನಗಿ ರದ್ದುಗೊಳಿಸಲು ಸ್ಥಳೀಯ ಆಡಳಿತಗಳಿಗೆ ಸೂಚನೆ ನೀಡುವುದು.

* ಗ್ರಾಮ ಪಂಚಾಯಿತಿಗಳು ಮಾಂಸದAಗಡಿಗಳನ್ನು ನದಿ ತಟದಿಂದ ನಿಯಮಾನುಸಾರ ದೂರದಲ್ಲಿ ಇಟ್ಟು ವ್ಯಾಪಾರ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡುವುದು. ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಯನ್ನು ನಿರ್ಬಂಧಿಸಿ ಕ್ರಮ ಕೈಗೊಳ್ಳುವುದು. ಅವಶ್ಯವಿದ್ದ ಕಡೆ ನದಿ ತಟಗಳಲ್ಲಿ ಸರ್ಕಾರದ ಮೂಲಕ ತಡೆಗೋಡೆಗಳನ್ನು ನಿರ್ಮಿಸುವುದು. ನದಿಗೆ ಎಲ್ಲೆಂದರಲ್ಲಿ ಜನರು ಇಳಿಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು.

* ಕೂಡಿಗೆ ಹಾಲಿನ ಡೈರಿಯಿಂದ ನೇರವಾಗಿ ನದಿಗೆ ಕಲುಷಿತ ನೀರು ಹರಿಯದಂತೆ ಎಚ್ಚರವಹಿಸುವುದು. ಧಾರ್ಮಿಕ ಕೇಂದ್ರಗಳು, ಶೈಕ್ಷಣಿಕ ಕೇಂದ್ರಗಳಿಕದ ನದಿಗೆ ನೇರವಾಗಿ ತ್ಯಾಜ್ಯ ಸೇರುವುದನ್ನು ತಪ್ಪಿಸಲು ಸ್ಥಳೀಯ ಆಡಳಿತಗಳಿಂದ ಕಸದ ಬುಟ್ಟಿಗಳನ್ನು ಕಲ್ಪಿಸುವುದು ಮತ್ತು ದಿನನಿತ್ಯ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವುದು.

* ಹೆಬ್ಬಾಲೆ ಮತ್ತು ಶಿರಂಗಾಲ ತೊರೆನೂರು ಗ್ರಾಮಗಳು ಕುಶಾಲನಗರ ಸುತ್ತಮುತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಶುಂಠಿ ತೊಳೆಯುವ ಘಟಕಗಳನ್ನು ತೆರವುಗೊಳಿಸುವುದು. ಕೈಗಾರಿಕಾ ಬಡಾವಣೆಗೆ ಅವುಗಳನ್ನು ಸ್ಥಳಾಂತರಿಸುವ ಕ್ರಮ ಕೈಗೊಳ್ಳುವುದು.

* ನದಿ ತಟಗಳ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ನಿಯಮಬಾಹಿರ ಕಟ್ಟಡಗಳನ್ನು ತೆರವುಗೊಳಿಸಿ ಅರಣ್ಯ ಇಲಾಖೆಯಿಂದ ಮರಗಿಡಗಳನ್ನು ನೆಡುವ ಯೋಜನೆ ರೂಪಿಸುವುದು. ಕುಶಾಲನಗರ ಒಳಚರಂಡಿ ಕಾಮಗಾರಿಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡುವುದು. ಕಾಮಗಾರಿ ತಡವಾಗಿರುವ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಲು ಕ್ರಮಕೈಗೊಳ್ಳುವುದು.

ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಕಾವೇರಿ ನದಿ ಸಂರಕ್ಷಣೆಗಾಗಿ ಸರ್ಕಾರದ ಮೂಲಕ ಮುಂದಿನ ವರ್ಷದ ಬಜೆಟಿಲ್ಲಿ ಅನುದಾನ ಕಲ್ಪಿಸುವ ಮೂಲಕ ಹಂತಹAತವಾಗಿ ಅನುಷ್ಠಾನಗೊಳಿಸಿ ಪವಿತ್ರ ನದಿ ಹಾಗೂ ದಕ್ಷಿಣ ಭಾರತದ ಜೀವ ನಾಡಿಯಾಗಿರುವ ಕಾವೇರಿ ನದಿಯ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಚಂದ್ರಮೋಹನ್ ತಿಳಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ ನದಿ ಬಫರ್ ಝೋನ್ ಬಗ್ಗೆ ಸಂರಕ್ಷಣೆ ಮಾಡಲು ಸಂಬAದಿಸಿದ ಎಲ್ಲಾ ಇಲಾಖೆಗಳ ಉಪಸ್ಥಿತಿಯಲ್ಲಿ ಜಂಟಿ ಸರ್ವೆಕಾರ್ಯ ನಡೆಸಿ ವರದಿ ಪಡೆಯಬೇಕಾಗಿದೆ. ಜಿಲ್ಲಾ ಮಟ್ಟದಲ್ಲಿ ಹಿರಿಯ ಅಧಿಕಾರಿಗಳ ಸಭೆ ಕರೆದು ಸ್ವಚ್ಛ ಕಾವೇರಿ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.