ವೀರಾಜಪೇಟೆ, ಡಿ. ೧೩: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಗು, ಸಾಧಿಕ್ ಆರ್ಟ್ಸ್ ಲಿಂಕ್ ವೀರಾಜಪೇಟೆ ಜಂಟಿ ಆಶ್ರಯದಲ್ಲಿ ಕಲಾ ಉತ್ಸವ ಕೊಡಗು - ೨೦೨೫ ರ ಅಂಗವಾಗಿ ಪುರಭವನದಲ್ಲಿ ವಿವಿಧ ಜನಪದ ಕಲಾ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಸಭೆ ಮಾಜಿ ಸದಸ್ಯ ಮೊಹಮ್ಮದ್ ರಾಫಿ ಅವರು, ಪೋಷಕರು ಮಕ್ಕಳಲ್ಲಿರುವ ಅಸಾಧಾರಣ ಪ್ರತಿಭೆಯನ್ನು ಬಾಲ್ಯದಲ್ಲೇ ಗುರುತಿಸಿ ಕಾರ್ಯಕ್ರಮಗಳ ವೇದಿಕೆಗೆ ಕರೆತರುವಂತಹ ಕಾರ್ಯಕ್ಕೆ ಮುಂದಾಗಬೇಕು. ಇದರಿಂದ ಪ್ರತಿಭೆಗಳನ್ನು ಸಮಾಜವು ಗುರುತಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ ಎಂದು ಹೇಳಿದರು. ಕಲಾವಿದ ಶ್ರೇಯಸ್ ಭಟ್ ಮಾತನಾಡಿ, ಕಲೆ ಪ್ರದರ್ಶನವಾಗಬೇಕು, ಸಮಾಜ ಗುರುತಿಸುವಂತಾಗಬೇಕು ಎಂದು ಹೇಳಿದರು. ಉದ್ಯಮಿ ಇಸ್ಮಾಯಿಲ್ ಪಿ.ಕೆ, ನಯಾಜ್, ವಿಶಾಲಾಕ್ಷಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಲಾ ಉತ್ಸವ ಆಯೋಜಕರಾದ ಸಾಧಿಕ್ ಹಂಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ನಾಟ್ಯ ಮಯೂರಿ ನೃತ್ಯ ಶಾಲೆ, ಇಂಟೋಪಿಸ್ ನೃತ್ಯ ಶಾಲೆ, ವಿವಿಧ ಶಾಲೆಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಭರತ ನಾಟ್ಯ, ಜನಪದ ಗೀತೆ ಗಾಯನ, ಗುಂಪು ನೃತ್ಯ, ಜನಪದ ನೃತ್ಯ, ಚಿತ್ರಗೀತೆಗಳ ಪ್ರದರ್ಶನ ಹಾಗೂ ವಿವಿಧ ಪ್ರಕಾರಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕಲಾ ಉತ್ಸವ ಆಯೋಜಕ ಸಂಸ್ಥೆಯ ಸದಸ್ಯರು, ವಿವಿಧ ಶಾಲೆಯ ವಿದ್ಯಾರ್ಥಿಗಳು, ನೃತ್ಯ ತರಬೇತಿ ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಹಾಜರಿದ್ದರು.