ನಾಪೋಕ್ಲು, ಡಿ. ೧೩: ಬಲ್ಲಮಾವಟಿ ಶ್ರೀ ಭಗವತಿ ದೇವಸ್ಥಾನದ ಗರ್ಭಗುಡಿ ಹಾಗೂ ಮುಖಮಂಟಪ ಪುನರ್ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಗುರುವಾರ ಶಡಾಧರ ಪೂಜಾ ವಿಧಿ ವಿಧಾನಗಳು ಶ್ರದ್ಧಾಭಕ್ತಿಯಿಂದ ಸಂಪನ್ನಗೊAಡವು.
ದೇವಸ್ಥಾನದ ಹೃದಯ ಭಾಗದ ಗರ್ಭಗುಡಿಯ ನಿರ್ಮಾಣಕ್ಕೆ ನೆಲಮಟ್ಟದಿಂದ ೭.೨೫ ಅಡಿ ಭೂಮಿಯ ಒಳಗಿನಿಂದ ಅಡಿಪಾಯ ಹಾಕಿದ್ದು ಶಡಾಧರ ಪೂಜೆ ಗುರುವಾರ ನಡೆಯಿತು. ಗರ್ಭಗುಡಿ ಹಾಗೂ ಮುಖಮಂಟಪ ಅಡಿಪಾಯಕ್ಕೆ ಉಪ್ಪು ಮಿಶ್ರಿತ ಮರಳು ತುಂಬಿಸುವ ಕಾರ್ಯವನ್ನು ಊರಿನವರು ನೆರವೇರಿಸಿದರು. ಪೂಜೆ ಅಂಗವಾಗಿ ಭಕ್ತರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭ ದೇವಸ್ಥಾನದ ತಕ್ಕಮುಖ್ಯಸ್ಥರಾದ ಕೋಟೆರ ಸುಬ್ಬಯ್ಯ, ನೆರವಂಡ ಭೀಮಯ್ಯ, ಉಪಾಧ್ಯಕ್ಷ ಬೈರುಡ ಮಾಚಯ್ಯ, ಕಾರ್ಯಾಧ್ಯಕ್ಷರು ಮತ್ತು ಖಜಾಂಚಿ ಬೊಟ್ಟೋಳಂಡ ತಿಮ್ಮಯ್ಯ, ಚಂಗೇಟಿರ ಅಪ್ಪಯ್ಯ, ಕಾರ್ಯದರ್ಶಿ ಕೋಟೆರ ಧನುಷ್ ಬೋಪಣ್ಣ, ಮಾಜಿ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ರಾಜ ಭೀಮಯ್ಯ, ತಕ್ಕಮುಖ್ಯಸ್ಥರು, ಸಮಿತಿ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ತಂತ್ರಿ ದಿವಾಕರ್ ಭಟ್, ಮುಖ್ಯ ಅರ್ಚಕ ಪುಟ್ಟ ಅವರ ಮುಂದಾಳತ್ವದಲ್ಲಿ ಪೂಜಾ ವಿಧಿವಿಧಾನಗಳು ಜರುಗಿದವು.