ಸೋಮವಾರಪೇಟೆ, ಡಿ. ೧೪: ಮಾನವೀಯತೆ, ಕರುಣೆ, ಸಹಾನುಭೂತಿ, ಪರಸ್ಪರ ಗೌರವ ಮತ್ತು ಸತ್ಯ ನಿಷ್ಠೆಗಳಿಲ್ಲದ ಶಿಕ್ಷಣ ಅಪೂರ್ಣ ಎಂದು ಮೈಸೂರು ಡಯಾಸಿಸನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಫ್ರಾನ್ಸಿಸ್ ಸೆರವೊ ಎಸ್.ಜೆ. ಅಭಿಪ್ರಾಯಿಸಿದರು.
ಪಟ್ಟಣದ ಸಂತ ಜೋಸೆಫರ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಎದುರಿಗೆ ತಪ್ಪುಗಳನ್ನು ಮಾಡಬಾರದು. ಪೋಷಕರು ಜೀವನದಲ್ಲಿ ತೋರಿಸುವ ಮೌಲ್ಯಗಳೇ ಮಕ್ಕಳ ಬದುಕಿನ ದಿಕ್ಕನ್ನು ನಿರ್ಧರಿಸುತ್ತದೆ. ಮಕ್ಕಳಲ್ಲಿ ಗೊಂದಲ, ಅಸಹನೆ ಅಥವಾ ಮೌಲ್ಯಗಳ ಕೊರತೆ ಉಂಟಾದರೆ, ಅದು ಅವರ ಭವಿಷ್ಯವಷ್ಟೇ ಅಲ್ಲ, ಸಮಾಜದ ಭವಿಷ್ಯವನ್ನು ಪ್ರಶ್ನಿಸುತ್ತದೆ. ಆದ್ದರಿಂದ ಪೋಷಕರು, ಶಿಕ್ಷಕರು ಮತ್ತು ಶಿಕ್ಷಣ ಸಂಸ್ಥೆಗಳು ಕೈಜೋಡಿಸಿ, ಮಕ್ಕಳಿಗೆ ಸುರಕ್ಷಿತ, ಮೌಲ್ಯಾಧಾರಿತ ಮತ್ತು ಪ್ರೇರಣಾದಾಯಕ ವಾತಾವರಣವನ್ನು ಒದಗಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಅರಟ್ ಆ್ಯಡ್ ಆಯತಾನ ಅಧ್ಯಕ್ಷ ಟೋನಿ ವಿನ್ಸೆಂಟ್, ಡಯಾಸಿಸನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಡ್ವರ್ಡ್ ವಿಲಿಯಂ ಸಾಲ್ಡಾನ, ಖಜಾಂಚಿ ನವೀನ್ ಕುಮಾರ್, ಧರ್ಮಗುರುಗಳಾದ ಜಾನ್ ಡಿಕುನ್ಹಾ, ಗಿಲ್ಬರ್ಟ್ ಡಿಸಿಲ್ವಾ, ವಿಜಯಕುಮಾರ್, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎಂ. ಪಾರ್ವತಿ, ಓಎಲ್‌ವಿ ಚರ್ಚ್ ಕಾರ್ಯದರ್ಶಿ ಶೀಲಾ ಡಿಸೋಜ, ಸಂತ ಜೋಸೆಫರ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕರಾದ ಅವಿನಾಶ್, ಹಳೆ ವಿದ್ಯಾರ್ಥಿನಿ ಮೆಟಿಲ್ಡಾ ಡಿಸೋಜ ಇದ್ದರು.
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವರ್ಣರಂಜಿತ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.