ಚೆಯ್ಯಂಡಾಣೆ, ಡಿ. ೧೪: ನಾಪೋಕ್ಲು ಬಳಿಯ ಕಾರುಗುಂದ ಅಂಗನವಾಡಿ ಕೇಂದ್ರದಲ್ಲಿ ಬಕ್ಕ, ಕಡಿಯತ್ತೂರು, ಕೊಟ್ಟೂರು, ಕಾರುಗುಂದ ಕಾಲೋನಿ ಅಂಗನವಾಡಿ ಕೇಂದ್ರಗಳ ಸಹಯೋಗದಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮ ದಿಂದ ಆಚರಿಸಲಾಯಿತು.
ಕಾರುಗುಂದ ಅಂಗನವಾಡಿ ಕೇಂದ್ರದಲ್ಲಿ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಸದಸ್ಯೆ ಲಲಿತ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಡಿಕೇರಿ ತಾಲೂಕು ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ಹಾಕಲು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಂಗನವಾಡಿ ಕಾರ್ಯ ಕರ್ತೆಯರ ಪಾತ್ರ ಬಹಳ ಪ್ರಮುಖವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣಪತಿ ಮಾತನಾಡಿ, ದಾನಿಗಳ ಸಹಕಾರದಿಂದ ಗ್ರಾಮೀಣ ಭಾಗದ ಅಂಗನವಾಡಿ ಕೇಂದ್ರಗಳು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.
ಚೇರAಬಾಣೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪಾರ್ವತಿ ಮಾತನಾಡಿ, ಪ್ರತಿ ೩ ತಿಂಗಳಿಗೊಮ್ಮೆ ಆರೋಗ್ಯ ಕೇಂದ್ರದಲ್ಲಿ ೬ ವರ್ಷದೊಳಗಿನ ಮಕ್ಕಳ ಅರೋಗ್ಯ ತಪಾಸಣೆ ನಡೆಯಲಿದೆ. ಇದರ ಸದುಪಯೋಗವನ್ನು ಎಲ್ಲಾ ಪೋಷಕರು ಪಡೆದುಕೊಂಡು ಸಹಕರಿಸಬೇಕೆಂದರು.
ಕಾರ್ಯಕ್ರಮದಲ್ಲಿ ಕಾರುಗುಂದ ವ್ಯಾಪ್ತಿಯ ೫ ಅಂಗನವಾಡಿ ಕೇಂದ್ರಗಳ ೨೫ ಮಕ್ಕಳಿಗೆ ಕಾರುಗುಂದ ಗ್ರಾಮದ ದಾನಿಗಳು ಹಾಗೂ ಉದ್ಯಮಿ ಕಾರ್ಯಪ್ಪ, ರೋಹಿಣಿ ಅವರು ನೀಡಿದ ಸ್ವೆಟ್ಟರ್ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಕಾರುಗುಂದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ರೋಹಿಣಿ, ಬಕ್ಕ ಅಂಗನವಾಡಿ ಕೇಂದ್ರದ ಶೈಲ, ಕಡಿಯತ್ತೂರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಸಹಾಯಕಿಯರು, ಪೋಷಕರು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಪುಟಾಣಿ ಮಕ್ಕಳು ಉಪಸ್ಥಿತರಿದ್ದರು.