ಸುಂಟಿಕೊಪ್ಪ, ಡಿ. ೧೫ : ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಕಾರ್ಜುನ ಕಾಲೋನಿಯ ರುದ್ರಭೂಮಿಯಲ್ಲಿ ರೂ. ೪.೫೦ ಲಕ್ಷ ವೆಚ್ಚದ ಚಿತಾಗಾರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಡಾ. ಮಂತರ್ಗೌಡ ಭೂಮಿಪೂಜೆ ನೆರವೇರಿಸಿದರು.
ಕಾಲೋನಿಯಲ್ಲಿ ನೂತನ ಸಿಲಿಕಾನ್ ಚಿತಾಗಾರವನ್ನು ನಿರ್ಮಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಡಾ. ಮಂತರ್ ಗೌಡ ಅವರು ಶಾಸಕರ ನಿಧಿಯಿಂದ ರೂ. ೪.೫೦ ಲಕ್ಷ ವೆಚ್ಚದಲ್ಲಿ ಚಿತಾಗಾರದ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಮಲ್ಲಿಕಾರ್ಜುನ ಕಾಲೋನಿ ನಿವಾಸಿಗಳಾದ ಅಬ್ಬಾಸ್, ಮಂಜುನಾಥ್, ರವಿ ಪೂವಪ್ಪ ಅವರುಗಳು ಮಾತನಾಡಿ ಕಾಲೋನಿ ವ್ಯಾಪ್ತಿಯಲ್ಲಿ ಶವ ಸಂಸ್ಕಾರಕ್ಕೆ ಈ ಭಾಗದ ನಿವಾಸಿಗಳು ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದು ಚಿತಾಗಾರದ ಅವಶ್ಯಕತೆಯ ಕಟ್ಟಡ ನಿರ್ಮಿಸಿಕೊಡುವಂತೆ ಬೇಡಿಕೆ ಸಲ್ಲಿಸಿದ್ದ ಮೇರೆ ಶಾಸಕರು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ಸಲ್ಲಿಸಿ ಅನುದಾನ ಒದಗಿಸಿರುವುದಾಗಿ ತಿಳಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬೋಜಮ್ಮ, ಉಪಾಧ್ಯಕ್ಷೆ ಮುಸ್ತಾಫ, ಸದಸ್ಯರುಗಳಾದ ಸಲೀಂ, ರಮೇಶ್, ಲವಕೃಷ್ಣ, ಮಾಜಿ ಸದಸ್ಯರುಗಳಾದ ದೇವಪ್ಪ, ಗೌತಮ್ ಶಿವಪ್ಪ, ಸೋಮವಾರಪೇಟೆ ಕಾಂಗ್ರೆಸ್ ವಲಯಾಧ್ಯಕ್ಷ ಸತೀಶ್ ಹಾಗೂ ಗ್ರಾಮಸ್ಥರು ಇದ್ದರು.