ನಾಪೋಕ್ಲು, ಡಿ. ೧೫: ಶಿಸ್ತು, ವಿಧೇಯತೆ ಮತ್ತು ಸಮಯ ಪಾಲನೆ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕಾದ ಉತ್ತಮ ಹವ್ಯಾಸಗಳು ಎಂದು ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಚೌರಿರ ಡಾ. ಜಗತ್ ತಿಮ್ಮಯ್ಯ ಅಭಿಪ್ರಾಯಪಟ್ಟರು.

ಇಲ್ಲಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಚಿಪೋಷಕರು ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡದಿದ್ದರೆ ಮಕ್ಕಳು ಬೆಳೆಯಲು ಸಾಧ್ಯವಿಲ್ಲ.

ಪೋಷಕರು ಮಕ್ಕಳಿಗೆ ಶಿಸ್ತು ಮತ್ತು ಸಮಯ ಪಾಲನೆಯ ಮಹತ್ವವನ್ನು ಅರಿವು ಮೂಡಿಸಬೇಕು. ಮಕ್ಕಳಿಗೆ ಯಾವತ್ತು ಒಳ್ಳೆಯದನ್ನು ಹೇಳಿಕೊಡಬೇಕು. ಮಕ್ಕಳ ಬುದ್ಧಿ ಸ್ಮಿತಕ್ಕೆ ಬಂದಾಗ ಅವರು ಖಂಡಿತ ಒಳ್ಳೆಯದನ್ನು ಪಾಲಿಸುತ್ತಾರೆ ಎಂದರು.

ಸಂಸ್ಥೆಯ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಉನ್ನತ ಸ್ಥಾನ ಮಾನಗಳನ್ನು ಪಡೆದಿದ್ದು ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ ಎಂದರು. ಸಂಸ್ಥೆಯ ಉನ್ನತೀಕರಣಕ್ಕೆ ಎಲ್ಲರ ಸಹಕಾರ ಅವಶ್ಯಕವಾಗಿದ್ದು ಸಹಕರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ನೆರವಂಡ ಸುನಿಲ್ ದೇವಯ್ಯ, ಕಾರ್ಯದರ್ಶಿ ನಾಯಕಂಡ ದೀಪಕ್ ಚಂಗಪ್ಪ, ನಿರ್ದೇಶಕರುಗಳಾದ ಬಿದ್ದಾಟಂಡ ಪಾಪ ಮುದ್ದಯ್ಯ, ಬಿದ್ದಾಟಂಡ ಮುತ್ತಣ್ಣ, ಬೊಳ್ಳಚೆಟ್ಟಿರ ಸುರೇಶ್, ಕಲಿಯಂಡ ಕೌಶಿಕ್ ಕುಶಾಲಪ್ಪ, ಅಪ್ಪಚೆಟೋಳಂಡ ನವೀನ್ ಅಪ್ಪಯ್ಯ, ಚೌರಿರ ಮಂದಣ್ಣ, ಬಟ್ಟಿರ ಸುಬ್ಬಯ್ಯ ಹಾಗೂ ಕೇಟೋಳಿರ ಅಪ್ಪಚ್ಚು ಉಪಸ್ಥಿತರಿದ್ದರು.

ಶಿಕ್ಷಕಿ ಪಾಡಿಯಮ್ಮಂಡ ಚಂದ್ರಕಲಾ ಮಹೇಶ್ ಸ್ವಾಗತಿಸಿದರು. ಕಲ್ಯಾಟಂಡ ತನುಜ ಅತಿಥಿಗಳ ಪರಿಚಯ ಮಾಡಿದರು. ಶಾಲಾ ಚಟುವಟಿಕೆ ವರದಿಯನ್ನು ಸಾನ್ವಿಕ ಹಾಗೂ ಶಾಲಾ ವರದಿಯನ್ನು ಪ್ರಾಂಶುಪಾಲೆ ಶಾರದಾ ವಾಚಿಸಿದರು, ಉದಿಯಂಡ ಶ್ವೇತಾ ಲೀಲಾವತಿ ಹಾಗೂ ಬೊಟ್ಟೋಳಂಡ ಸೌಮ್ಯ ಕಾರ್ಯಕ್ರಮವನ್ನು ನಿರೂಪಿಸಿ ಬೊಳ್ಳಚೆಟ್ಟಿರ ಶೋಭ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.