ಮಡಿಕೇರಿ, ಡಿ. ೧೫: ಗ್ಯಾಲೆಂಟ್ ಶೂಟರ್ಸ್ - ನಾಪೋಕ್ಲು ವತಿಯಿಂದ ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಶಾಲಾ ಮೈದಾನದಲ್ಲಿ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ೩೦೦ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.

ಅಂಕುರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಕೇಟೋಳಿರ ರತ್ನ ಚರ್ಮಣ ಹಾಗೂ ಅವರ ಪತಿ ಕೇಟೋಳಿರ ರಾಜ ಚರ್ಮಣ ಅವರು ಅತಿಥಿಗಳಾಗಿ ಆಗಮಿಸಿದ್ದರು. ಪ್ರಮುಖರಾದ ಅಜ್ಜೇಟಿರ ಶಂಭು ಪಳಂಗಪ್ಪ, ಅಜ್ಜೇಟಿರ ರಮೇಶ್ ನಾಣಯ್ಯ, ಶಿವಚಾಳಿಯಂಡ ಅಂಬಿ ಮತ್ತು ಕಲಿಯಂಡ ಕೌಶಿಕ್ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಈ ಶೂಟಿಂಗ್ ಸ್ಪರ್ಧೆಯನ್ನು ಯೂಟ್ಯೂಬ್ ಚಾನೆಲ್ ಮೂಲಕ ನೇರ ಪ್ರಸಾರ ಮಾಡಲಾಗಿದ್ದು, ಹೆಚ್ಚಿನ ಪ್ರೇಕ್ಷಕರಿಗೆ ಈ ಸ್ಪರ್ಧೆಯನ್ನು ವೀಕ್ಷಿಸುವ ಅವಕಾಶ ದೊರಕಿತು. ಗ್ಯಾಲೆಂಟ್ ಶೂಟರ್ಸ್ ತಂಡದ ಅಜ್ಜೇಟಿರ ಗೌತಮ್, ಅಜ್ಜೇಟಿರ ಸೋಮಯ್ಯ ಮತ್ತು ಕೇಲೇಟಿರ ಪವಿತ್ ಅವರುಗಳ ಸಹಕಾರದೊಂದಿಗೆ ಸ್ಪರ್ಧೆಯನ್ನು ಸುಸೂತ್ರವಾಗಿ ಆಯೋಜಿಸಲಾಗಿತ್ತು. ವೀಕ್ಷಕ ವಿವರಣೆಯನ್ನು ಅಜ್ಜೇಟಿರ ವಿಕ್ರಂ ನೀಡಿದರು.

ವಿಜೇತರ ವಿವರ

ಏರ್ ರೈಫಲ್ ಟಾರ್ಗೆಟ್ ಶೂಟಿಂಗ್ ವಿಭಾಗದಲ್ಲಿ ಬಡುವಂಡ ಶ್ಲೋಕ್ ಸುಬ್ಬಯ್ಯ ಪ್ರಥಮ, ಚೀಯಕಪೂವಂಡ ಚೇತನ್ ದ್ವಿತೀಯ ಹಾಗೂ ಕೇಚಿರ ಶಬ್ಧ್ ಬೆಳ್ಯಪ್ಪ ತೃತೀಯ ಸ್ಥಾನ ಗಳಿಸಿದರು.

೦.೨೨ ಮೊಟ್ಟೆ ಶೂಟಿಂಗ್ ವಿಭಾಗದಲ್ಲಿ ಜಸ್ಟಿನ್ ಪ್ರಥಮ, ಕಲಿಯಂಡ ಪೊನ್ನ ದ್ವಿತೀಯ ಹಾಗೂ ಪುಗ್ಗೇರ ರಾಜೇಶ್ ತೃತೀಯ ಸ್ಥಾನ ಗಳಿಸಿದರು.

೦.೨೨ ಕ್ಲೇ ಶೂಟಿಂಗ್ ವಿಭಾಗದಲ್ಲಿ ಪಟ್ಟಡ ಬೋಪಣ್ಣ ಪ್ರಥಮ, ಪುತ್ತರಿರ ನಂಜಪ್ಪ ದ್ವಿತೀಯ ಹಾಗೂ ಮಣವಟ್ಟಿರ ಬೋಪಣ್ಣ ತೃತೀಯ ಸ್ಥಾನ ಗಳಿಸಿದರು.

೦.೨೨ ತೆಂಗಿನಕಾಯಿ ಶೂಟಿಂಗ್ ವಿಭಾಗದಲ್ಲಿ ಚೋನಿರ ಸಜನ್ ಪ್ರಥಮ, ಮಣವಟ್ಟಿರ ಬೋಪಣ್ಣ ದ್ವಿತೀಯ ಹಾಗೂ ಪುತ್ತರಿರ ನಂಜಪ್ಪ ತೃತೀಯ ಸ್ಥಾನ ಗಳಿಸಿದರು.

೧೨ ಬೋರ್ ತೆಂಗಿನಕಾಯಿ ಶೂಟಿಂಗ್ ವಿಭಾಗದಲ್ಲಿ ಪ್ರಸನ್ನ ಕುಮಾರ್ ಪ್ರಥಮ, ಅಪ್ಪಟಿರ ಪ್ರದೀಪ್ ದ್ವಿತೀಯ ಹಾಗೂ ರಾಹುಲ್ ಅರಂಬೂರ್ ತೃತೀಯ ಸ್ಥಾನ ಗಳಿಸಿದರು.