ಮಡಿಕೇರಿ, ಡಿ. ೧೬ : ಕರ್ನಾಟಕ ಭೂ ಕಂದಾಯ ತಿದ್ದುಪಡಿ ವಿಧೇಯಕವು ಇಂದು ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರಿಂದ ಪ್ರಸ್ತಾವನೆಗೊಳ್ಳುವ ಮೂಲಕ ಸರ್ವಾನುಮತದಿಂದ ಅಂಗೀಕಾರಗೊAಡು ಕೊಡಗಿನ ಜಮ್ಮಾ - ಜಮ್ಮಾಬಾಣೆ ಕುರಿತಾಗಿ ಇದ್ದ ಹಲವು ವರ್ಷಗಳ ಜಟಿಲ ಸಮಸ್ಯೆ ಬಗೆಹರಿದಂತಾಗಿದೆ. ಈ ಕುರಿತಾಗಿ ವೀರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳÀ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರು ಇಂದು ಸದನದಲ್ಲಿ ವಿವರ ಮಾಹಿತಿಯಿತ್ತರು. ಆಡಳಿತ ಪಕ್ಷದ ಸದಸ್ಯರುಗಳೊಂದಿಗೆ ವಿಪಕ್ಷ ನಾಯಕ ಆರ್. ಅಶೋಕ್, ಅರಗ ಜ್ಞಾನೇಂದ್ರ ಹಾಗೂ ಅರವಿಂದ್ ಬೆಲ್ಲದ್ ಅವರುಗಳೂ ಕೂಡ ಪೊನ್ನಣ್ಣ ಅವರ ಪ್ರಯತ್ನದ ಕುರಿತು ಶ್ಲಾಘಿಸಿದರು. ಬೆಳಗಾವಿ ಅಧಿವೇಶನದಲ್ಲಿ ಕಳೆದ ಮಂಗಳವಾರ ಜಮ್ಮಾ ತಿದ್ದುಪಡಿ ಮಸೂದೆ ಮಂಡಿಸಲ್ಪಟ್ಟಿದ್ದು ಇಂದು ಅಧಿಕೃತವಾಗಿ ಅಂಗೀಕಾರಗೊAಡಿತು.
ಕಳೆದ ವಿಧಾನಸಭಾ ಅಧಿವೇಶನದಲ್ಲಿ ಈ ತಿದ್ದುಪಡಿ ವಿಧೇಯಕ ಮಂಡಿಸಿದ್ದ ಸಂದರ್ಭ ಇದರಲ್ಲಿ ಹಲವು ಲೋಪ - ದೋಷಗಳಿದ್ದ ಕಾರಣ ಸ್ವತಃ ಕೊಡಗಿನ ಶಾಸಕರುಗಳಾದ ಎ.ಎಸ್. ಪೊನ್ನಣ್ಣ ಹಾಗೂ ಡಾ. ಮಂತರ್ ಗೌಡ ಅವರುಗಳು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಬದಲಾವಣೆಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಈ ವಿಧೇಯಕಕ್ಕೆ ಸಂಬAಧಿಸಿದAತೆ ಸದನದ ಪರಿಶೀಲನಾ ಸಮಿತಿಯನ್ನು ರಚಿಸಿ ಈ ಸಮಿತಿಗೆ ಇದರ ತೀರ್ಮಾನ ಕೈಗೊಳ್ಳಲು ಅವಕಾಶ ನೀಡಲಾಗಿತ್ತು.
ಇದರಂತೆ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಶಾಸಕರುಗಳಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ವಿಪಕ್ಷ ನಾಯಕ ಆರ್. ಅಶೋಕ್, ಡಾ. ಅಶ್ವಥ್ ನಾರಾಯಣ ಗೌಡ ಸೇರಿದಂತೆ ಹಲವು ಪ್ರಮುಖರುಗಳನ್ನು ಒಳಗೊಂಡ ಪರಿಶೀಲನಾ ಸಮಿತಿಯನ್ನು ರಚಿಸಲಾಗಿತ್ತು. ನಂತರದಲ್ಲಿ ಈ ಸಮಿತಿ ಸುಮಾರು ಐದು ಸಭೆಗಳನ್ನು ನಡೆಸಿದ್ದು, ತಿದ್ದುಪಡಿ ಕುರಿತಾಗಿ ಸೂಕ್ತ ಸಲಹೆ-ಚರ್ಚೆಗಳ ಬಳಿಕ ಅಂತಿಮ ವರದಿ ಸಿದ್ಧಪಡಿಸಿತ್ತು. ಇದೀಗ ಬೆಳಗಾವಿ ಅಧಿವೇಶನದಲ್ಲಿ ಈ ತಿದ್ದುಪಡಿ ವಿಧೇಯಕವನ್ನು ಕಳೆದ ಮಂಗಳವಾರ ಕಂದಾಯ ಸಚಿವರು ಮಂಡಿಸಿದ್ದು, ಇಂದು ಸದನದ ಅಂಗೀಕಾರ ದೊರೆತಿದೆ. ಈ ಮೂಲಕ ಕೊಡಗಿನ ಬಹು ವರ್ಷಗಳÀ ಈ ಜಟಿಲ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ.
ಮುಖ್ಯವಾಗಿ ಪಟ್ಟೆದಾರರ ಹೆಸರನ್ನು ಪಹಣಿಯಲ್ಲಿ ನಮೂದಿಸಿರುವುದು, ವಾರೀಸುದಾರರಲ್ಲದವರ ಹೆಸರಿರುವುದು ಇಂತಹ ಸಮಸ್ಯೆಗಳ ಪರಿಹಾರಕ್ಕೆ ಈ ವಿಧೇಯಕ ಪರಿಹಾರವಾಗಲಿದೆ.
ಸದನದಲ್ಲಿ ಈ ವಿಧೇಯಕ ಮಂಡನೆ ಬಳಿಕ ಸಚಿವರು, ವಿಪಕ್ಷ ನಾಯಕರು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಪೊನ್ನಣ್ಣ ಸ್ವಾಗತ : ಬಳಿಕ ಮಾತನಾಡಿದ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಇದನ್ನು ಕೊಡಗಿನ ಪರವಾಗಿ, ಜಮ್ಮಾ ಹಿಡುವಳಿದಾರರ ಪರವಾಗಿ ಸ್ವಾಗತಿಸುವುದಾಗಿ ನುಡಿದರು.
ಬಹಳ ವರ್ಷಗಳಿಂದ ಇದೊಂದು ಜಟಿಲ ಸಮಸ್ಯೆಯಾಗಿ ಉಳಿದಿತ್ತು. ೧೯೯೨ರಲ್ಲಿ ರಾಜ್ಯ ಉಚ್ಚನ್ಯಾಯಾಲಯದ ತೀರ್ಪು ಇದ್ದರೂ ಕಾರ್ಯಾಂಗದ ತಡೆಯಿಂದಾಗಿ ಅನುಷ್ಠಾನಕ್ಕೆ ಬಂದಿರಲಿಲ್ಲ. ಕಂದಾಯ ಕಾನೂನಿಗೆ ೨೦೧೭ರಲ್ಲಿ ತಿದ್ದುಪಡಿಯಾಗಿ ರಾಷ್ಟçಪತಿಗಳ ಅಂಕಿತವಾಗಿ ಇದು ಜಾರಿಗೆ ಬಂದರೂ ಸಮಸ್ಯೆಗೆ ಅಂತಿಮ ಪರಿಹಾರ ಸಿಕ್ಕಿರಲಿಲ್ಲ. ಇದೀಗ ಕಂದಾಯ ಸಚಿವರ ಇಚ್ಚಾಶಕ್ತಿಯಂತೆ ಇದಕ್ಕೆ ಪರಿಹಾರ ದೊರೆತಂತಾಗಿದ್ದು ಇದನ್ನು ಸ್ವಾಗತಿಸುವುದಾಗಿ ಹೇಳಿದರು.
ಮುಂದಿನ ದಿನಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರುವುದು ಮುಖ್ಯವಾಗಿದೆ. ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖಾಧಿಕಾರಿಗಳಿಗೆ ಸರಕಾರದ ಮೂಲಕ ಸೂಕ್ತ ಸಲಹೆ - ಸೂಚನೆ ನೀಡಲಾಗುವುದು. ಈ ಬಗ್ಗೆ ಶಿಬಿರದ ಮೂಲಕ ಮಾಹಿತಿ ಒದಗಿಸಲಾಗುವುದು. ಈ ಮೂಲಕ ಇದರ ಸೂಕ್ತ ಅನುಷ್ಠಾನವಾಗಲಿದೆ ಎಂದು ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.