ಹೆಬ್ಬಾಲೆ, ಡಿ. ೧೬: ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟ, ತಾಲೂಕು ವಿಶ್ವಕರ್ಮ ಸಮಾಜ,ಹೆಬ್ಬಾಲೆ ಕಾಳಿಕಾಂಬ ವಿಶ್ವಕರ್ಮ ಕರಕುಶಲ ಕೈಗಾರಿಕಾ ಸಹಕಾರ ಸಂಘ, ಶ್ರೀ ಕಾಳಿಕಾಂಬ ದೇವಾಲಯ ಸಮಿತಿ ಹಾಗೂ ಶಿರಂಗಾಲ ತಾಲೂಕು ವಿಶ್ವಕರ್ಮ ಸೇವಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಹೆಬ್ಬಾಲೆಯಲ್ಲಿ ತಾಲೂಕು ವಿಶ್ವಕರ್ಮ ಯುವ ಮೋರ್ಚಾ ಉದ್ಘಾಟನೆ ಹಾಗೂ ಅಭಿನಂದನಾ ಸಮಾರಂಭ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ ಅಧ್ಯಕ್ಷ ಪಿ. ಸುಜ್ಞಾನಮೂರ್ತಿ ಮಾತನಾಡಿ,ವಿಶ್ವಕರ್ಮ ಸಮುದಾಯದ ಯುವಜನರನ್ನು ಸಂಘಟಿಸಿ, ಕೌಶಲ್ಯಗಳನ್ನು ಹೆಚ್ಚಿಸಿ, ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ವಿಶ್ವಕರ್ಮ ಯುವ ಮೋರ್ಚಾ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ ಅಧ್ಯಕ್ಷನಾಗಿ ಸಮುದಾಯದ ಜನರ ಏಳಿಗೆಗಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ನಿಗಮದಿಂದ ಪಂಚವೃತ್ತಿ ಅಭಿವೃದ್ಧಿಗಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ.ಸ್ವಯಂ ಉದ್ಯೋಗ ನೇರಸಾಲ ಯೋಜನೆ,ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ,ಅರಿವು-ಶೈಕ್ಷಣಿಕ ಸಾಲ ಯೋಜನೆ (ನವೀಕರಣ),ಗಂಗಾ ಕಲ್ಯಾಣ ನೀರಾವರಿ ಯೋಜನೆ ಹಾಗೂ ಮಹಿಳೆಯರಿಗೆ ಕಿರುಸಾಲ ಯೋಜನೆ ನೀಡಲಾಗುತ್ತಿದೆ.ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ತಾಲೂಕು ವಿಶ್ವಕರ್ಮ ಸಮಾಜ ಅಧ್ಯಕ್ಷ ಎಚ್.ಬಿ.ಲಿಂಗಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ತಾಲೂಕು ವಿಶ್ವಕರ್ಮ ಸಮಾಜದ ಗೌರವ ಅಧ್ಯಕ್ಷ ವಿ.ಕುಮಾರ್, ರಾಜ್ಯ ವಿಶ್ವಕರ್ಮ ಸಮಾಜದ ನಿರ್ದೇಶಕ ಕೆ.ಎಸ್. ಚಂದ್ರಶೇಖರ್, ವಿಶ್ವಕರ್ಮ ಜಿಲ್ಲಾ ಒಕ್ಕೂಟದ ಅಧ್ಯಕ್ಷ ದೇವದಾಸ್, ಮುಖಂಡರಾದ ಬಿ.ಸಿ. ಅಶೋಕ ಅಚಾರ್, ಹೆಚ್, ಎಂ. ಸುಬ್ರಮಣ್ಯ, ಹೆಚ್.ಎನ್. ಸದಾನಂದ, ಬಿ.ಬಿ. ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.

ಸನ್ಮಾನ : ವಿಶ್ವಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ ಅಧ್ಯಕ್ಷ ಪಿ.ಸುಜ್ಞಾನಮೂರ್ತಿ ಅವರನ್ನು ವಿಶ್ವಕರ್ಮ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ಮಂತರ್ ಗೌಡ ಅವರ ಆಪ್ತ ಸಹಾಯಕ ರಂಜನ್ ಅವರು ಶಾಸಕರ ಪರವಾಗಿ ಸುಜ್ಞಾನಮೂರ್ತಿ ಅವರನ್ನು ಸನ್ಮಾನಿಸಿದರು.