ಕಣಿವೆ, ಡಿ. ೧೬: ಕಳೆದ ನಾಲ್ಕು ದಿನಗಳ ಹಿಂದಷ್ಟೇ ಬೆಳ್ಳಂಬೆಳಗ್ಗೆ ಗ್ರಾಮ ನಿವಾಸಿಗಳ ಮನೆ ಮುಂದೆ ಸಾಗಿ ಹೋದ ಒಂಟಿ ಸಲಗ ಮತ್ತೆ ಐದನೇ ದಿನದಲ್ಲಿ ಎರಡನೇ ಬಾರಿಗೆ ಅದೇ ಗ್ರಾಮದಲ್ಲಿ ಅದೇ ಹಾದಿಯಲ್ಲಿ ಅದೇ ಸಮಯದಲ್ಲಿ ಹೆಜ್ಜೆ ಹಾಕುವ ಮೂಲಕ ನಿವಾಸಿಗಳಲ್ಲಿ ಆತಂಕ ಮೂಡಿಸಿತು.
ವರ್ಷದ ಹಿಂದೆ ತೊಂಡೂರು ಗ್ರಾಮದ ಅರಣ್ಯದ ಅಂಚಿನಲ್ಲಿ ಅರಣ್ಯ ಇಲಾಖೆ ವತಿಯಿಂದ ಕೈಗೊಂಡಿದ್ದ ರೈಲ್ವೆ ಕಂಬಿ ತಡೆಗೋಡೆ ನಿರ್ಮಾಣವಾದ್ದರಿಂದ ಕಾಡಾನೆಗಳ ನಿತ್ಯ ಹಾಗೂ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಕ್ಷೀಣಿಸಿತ್ತು. ಆದರೆ ಭಂಡತನ ತೋರುತ್ತಿರುವ ಈ ಕಾಡಾನೆ ರೈಲ್ವೆ ಕಂಬಿಯ ಒಳಗೆ ನುಗ್ಗಿ ಬರುತ್ತಿದೆ ಎಂಬುದು ಗ್ರಾಮ ನಿವಾಸಿಗಳ ಆತಂಕ.
ವರ್ಷದ ಈಚೆಗೆ ಇದೂವರೆಗೂ ಕಾಣದ ಕಾಡಾನೆ ಇದೀಗ ವಾರದಲ್ಲಿ ಎರಡನೇ ಬಾರಿಗೆ ಪ್ರತ್ಯಕ್ಷವಾಗಿರುವುದು ಕಂಡರೆ ಅದು ಬೇರೆ ಎಲ್ಲಿಂದಲೂ ಧಾವಿಸುತ್ತಿಲ್ಲ. ರೈಲ್ವೆ ಕಂಬಿಯ ಒಳಗೆ ನುಗ್ಗಿ ಬರುತ್ತಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ರೈಲ್ವೆ ಕಂಬಿ ತಡೆಗೋಡೆಯನ್ನು ಒಂದು ಕಡೆಯಿಂದ ಪರಿಶೀಲಿಸಬೇಕು.
ರೈಲ್ವೆ ಕಂಬಿಯ ಅಂತರ ಅಗಲವಿರುವ ಕಡೆ ನುಗ್ಗುತ್ತಿರುವ ದೈತ್ಯ ಕಾಡಾನೆಗಳು ನಾಡಿಗೆ ಬಾರದೇ ಕಾಡಿನಲ್ಲೇ ಹುಲ್ಲು ಸೊಪ್ಪು ತಿಂದು ನೀರು ಕುಡಿದು ಹಾಯಾಗಿ ಕಾಲ ಕಳೆಯುವ ವಾತಾವರಣ ನಿರ್ಮಾಣವಾಗಬೇಕಿದೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾಡಂಚಿನ ನಿವಾಸಿಗಳ ಅಳಲು ಆಲಿಸಬೇಕೆಂಬುದು ಸ್ಥಳೀಯರ ಒತ್ತಾಯವೂ ಆಗಿದೆ.
ನಡು ರಾತ್ರಿ ಅಥವಾ ತಡ ರಾತ್ರಿ ಆಹಾರ ಅರಸಿ ಕಾಡಿನಿಂದ ನಾಡಿಗೆ ಬರುವ ಕಾಡಾನೆಗಳಿಗೆ ಅರಣ್ಯದ ಒಳಗೆ ಸಿಗಬೇಕಿದ್ದ ರುಚಿಸುವ ಯಾವುದೇ ತಿನಿಸುಗಳ ಬೆಳೆಗಳು, ಹುಲ್ಲು, ಸೊಪ್ಪು, ಖಾಂಡ ಭರಿತ ಮರ ಗಿಡ ಬಳ್ಳಿಗಳು ಇಲ್ಲದ ಕಾರಣ ಅನಿವಾರ್ಯವಾಗಿ ನಿರಾತಂಕವಾಗಿ ನಾಡಿಗೆ ಧಾವಿಸುತ್ತಿವೆ.
ಅದೃಷ್ಟವಶಾತ್ ಇಲ್ಲಿನ ಜನ ಎಚ್ಚೆತ್ತುಕೊಂಡಿರುವುದರಿAದ ಕಾಡಾನೆ ಹೆಜ್ಜೆ ಇಡುವ ಮಾರ್ಗದಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಆದಾಗ್ಯೂ ಶಾಲೆಗಳಿಗೆ ಮುಂಜಾನೆ ಬೇಗ ತೆರಳಬೇಕಿರುವ ವಿದ್ಯಾರ್ಥಿಗಳಲ್ಲಿ ಹಾಗೂ ಕೂಲಿ ಕಾರ್ಮಿಕರಲ್ಲಿ ಭಯ ಇದ್ದೇ ಇದೆ.
- ಮೂರ್ತಿ