ಪೊನ್ನಂಪೇಟೆ, ಡಿ. ೧೭: ಜಿಲ್ಲೆಗೆ ಆಗಮಿಸಿರುವ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಜನಜಾಗೃತಿ ರಥಯಾತ್ರೆಗೆ ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಮುಂಭಾಗ ಚಾಲನೆ ನೀಡಲಾಯಿತು. ಹಿಂದೂ ಜಾಗರಣಾ ವೇದಿಕೆ ಹಾಗೂ ಪರಿವರ್ತನ ಟ್ರಸ್ಟ್ ಸಹಯೋಗದಲ್ಲಿ ಈ ಅಭಿಯಾನ ನಡೆಸಲಾಗುತ್ತಿದ್ದು, ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ ಮಹಾರಾಜ್ ಅವರು, ಜನ ಜಾಗೃತಿ ರಥದಲ್ಲಿರಿಸಿರುವ ಶಾರದಾಮಾತೆಯ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಬಾವುಟ ಬೀಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಕುತೂಹಲಕ್ಕಾಗಿ ಮಾದಕವಸ್ತು ಸೇವನೆ ಮಾಡುವ ಯುವಕರು, ಅದನ್ನೇ ವ್ಯಸನವನ್ನಾಗಿ ಮಾಡಿಕೊಂಡು, ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತು ಸೇವನೆಯಿಂದ ಮನಸ್ಸು ಹಾಗೂ ದೇಹದ ಆರೋಗ್ಯ ಕೆಡುತ್ತದೆ. ವ್ಯಸನಕ್ಕೆ ದಾಸರಾದ ವ್ಯಕ್ತಿಗಳು ಕೊಲೆ ಹಾಗೂ ಕಳ್ಳತನದಂತಹ ಕೃತ್ಯಕ್ಕೆ ಇಳಿದು ಸಮಾಜ ಕಂಠಕರಾಗುವ ಮೂಲಕ ಹೆತ್ತವರಿಗೂ ಕೆಟ್ಟ ಹೆಸರು ತರುತ್ತಾರೆ. ಮಾದಕ ವ್ಯಸನಿಗಳಿಗೆ ಸಮಾಜಕ್ಕೆ ಯಾವುದೇ ರೀತಿಯ ಗೌರವ ನೀಡುವುದಿಲ್ಲ. ಅವರನ್ನು ಕೀಳಾಗಿ ಕಾಣುತ್ತದೆ. ಯುವಜನತೆ ಮಾದಕ ವಸ್ತುವಿನ ಮಾಯಾಜಾಲದಿಂದ ದೂರವಿದ್ದು, ಉತ್ತಮ ಆರೋಗ್ಯವನ್ನು ಹೊಂದುವ ಮೂಲಕ, ಸದೃಢ ಹಾಗೂ ಶಕ್ತಿಶಾಲಿ ದೇಶವನ್ನು ಕಟ್ಟಲು ಕಂಕಣಬದ್ಧರಾಗಬೇಕು ಎಂದರು.

ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಚಾಲಕ ಅಲ್ಲುಮಾಡ ಶರತ್, ಪೊನ್ನಂಪೇಟೆ ತಾಲೂಕು ಸಂಯೋಜಕ ಸುಳ್ಳಿಮಾಡ ಸಂಪತ್, ಪೊನ್ನಂಪೇಟೆ ತಾಲೂಕು ಸಹ ಸಂಯೋಜಕ ಸುಕೇಶ್ ಕಾರ್ಯಪ್ಪ, ಪೊನ್ನಂಪೇಟೆ ನಗರ ಸಂಚಾಲಕ ಅನಿಲ್ ಪ್ರಸಾದ್, ರಾಷ್ಟಿçÃಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಚಾಲಕ ಚೆಕ್ಕೆರ ಮನು ಕಾವೇರಪ್ಪ, ಕರ್ನಾಟಕ ರಾಜ್ಯ ಸಹ ಸಂಯೋಜಕ ಐನಂಡ ಲಾಲ, ಪರಿವರ್ತನಾ ಟ್ರಸ್ಟ್ ಪ್ರಚಾರಕ್ ಸಂದೇಶ್, ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಪೊನ್ನಿಮಾಡ ಜಯಂತ್, ಜೀವನ್ ಹಾಗೂ ಕಾರ್ಯಕರ್ತರು ಹಾಜರಿದ್ದರು.