ಗೋಣಿಕೊಪ್ಪಲು, ಡಿ. ೧೭: ಅಮ್ಮತ್ತಿಯ ಕೊಡವ ಸಮಾಜ ವತಿಯಿಂದ ಪುತ್ತರಿ ಹಬ್ಬದ ಪ್ರಯುಕ್ತ ಪುತ್ತರಿ ಊರೊರ್ಮೆ ಕಾರ್ಯಕ್ರಮ ಸಮಾಜದ ಸಭಾಂಗಣದಲ್ಲಿ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಖಿಲ ಕೊಡವ ಸಮಾಜದ ಅಧ್ಯಕ್ಷ, ಪಾಡಿ ಈಶ್ವರ ಇಗ್ಗುತ್ತಪ್ಪ ದೇವಸ್ಥಾನ ಭಕ್ತ ಜನಸಂಘದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ, ಸಮಾಜದಲ್ಲಿ ಎಲ್ಲರನ್ನು ಗೌರವಯುತವಾಗಿ ಕಾಣಬೇಕು. ಕೊಡಗಿನ ಸಂಸ್ಕೃತಿ, ಆಚಾರ, ವಿಚಾರಗಳಿಗೆ ಧಕ್ಕೆ ಬಂದಾಗ ಧ್ವನಿ ಎತ್ತಬೇಕು. ಕೊಡವ ಸಂಸ್ಕೃತಿಯು ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ನಿರಂತರವಾಗಿರಬೇಕು. ಈ ನಿಟ್ಟಿನಲ್ಲಿ ಕೊಡವ ಸಮಾಜಗಳು ಹತ್ತಾರು ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಶ್ಲಾಘನೀಯ. ಮುಂದೆಯು ಕಾರ್ಯಕ್ರಮಗಳು ಹೆಚ್ಚಾಗಲಿ, ಕೊಡವ ಸಂಸ್ಕೃತಿ ಉಳಿಸಿ-ಬೆಳೆಸಲು ಎಲ್ಲರೂ ಶ್ರಮಿಸುವಂತೆ ಕರೆ ನೀಡಿದರು.
ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಂಗಳೂರಿನ ಜಿಂದಾಲ್ ಆಸ್ಪತ್ರೆಯ ವೈದ್ಯ ಡಾ. ಪುಟ್ಟಿಚಂಡ ಬಬಿನ ನಂದ ಮಾತನಾಡಿ, ಕೊಡವ ಸಮುದಾಯದ ಜನಾಂಗವು ದೇಶ, ವಿದೇಶದ ನಾನಾ ಭಾಗಗಳಲ್ಲಿ ಹಲವು ಕಾರಣಗಳಿಂದ ನೆಲೆಸಿದ್ದರೂ ತಮ್ಮ ಸಂಸ್ಕೃತಿ, ಆಚಾರ -ವಿಚಾರಗಳು ಬಗ್ಗೆ ತಮ್ಮ ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ನೆರವು ನೀಡುವಂತಾಗಬೇಕು. ವಿಶೇಷವಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೊಡವ ಸಾಂಪ್ರದಾಯಿಕ ಹಬ್ಬ ಆಚರಣೆಗೆ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಸಭೆಯ ಆರಂಭದಲ್ಲಿ ಮುಖ್ಯ ಅತಿಥಿಗಳನ್ನು ಕೊಡವ ಸಾಂಪ್ರದಾಯಿಕ ವಾಲಗದೊಂದಿಗೆ ಸಭಾಂಗಣಕ್ಕೆ ದುಡಿಕೊಟ್ಟ್ ತಳಿಯತಕ್ಕಿ ಬೊಳಕ್‌ನೊಂದಿಗೆ ಸಾಂಪ್ರದಾಯಿಕವಾಗಿ ವೇದಿಕೆಗೆ ಕರೆ ತರಲಾಯಿತು. ಕಾರ್ಯಕ್ರಮದ ಅಂಗವಾಗಿ ನೆಲ್ಲಮಕ್ಕಡ ಅಪ್ಪು ಕಾರ್ಯಪ್ಪ, ಸಮಾಜ ಸೇವಕರಾದ ಚೋಕಂಡ ಸಂಜು ಸುಬ್ಬಯ್ಯ ಅವರ ಸೇವೆಯನ್ನು ಗುರುತಿಸಿ ಸಮಾಜದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಚೋಕಂಡ ಸಂಜು ಸುಬ್ಬಯ್ಯ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ಹಲವು ಕಾರಣಗಳಿಂದ ಜನರು ನಾನಾ ಖಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದ ಕುಟುಂಬದಲ್ಲಿ ಕಷ್ಟ ಎದುರಾಗುತ್ತಿವೆ. ಪ್ರತಿ ಕುಟುಂಬವು ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳುವ ಮೂಲಕ ಇಂತಹ ಸಂದರ್ಭದಲ್ಲಿ ಗಂಭೀರ ಖಾಯಿಲೆಗಳನ್ನು ಧೈರ್ಯವಾಗಿ ಎದುರಿಸುವ ಶಕ್ತಿ ಬರುತ್ತದೆ. ಈ ನಿಟ್ಟಿನಲ್ಲಿ ಪ್ರತಿ ಕುಟುಂಬವು ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ನಿಗಾ ವಹಿಸುವ ಮೂಲಕ ವಿಮೆ ಸೌಲಭ್ಯಗಳನ್ನು ಮಾಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ನಿವೃತ್ತ ಹಾಕಿ ತರಬೇತುದಾರರಾದ ನೆಲ್ಲಮಕ್ಕಡ ಅಪ್ಪು ಕಾರ್ಯಪ್ಪ ಮಾತನಾಡಿ ಕೊಡವ ಸಂಸ್ಕೃತಿಗಳ ಬೆಳವಣಿಗೆಗಳ ನಿರಂತರ ಕಾರ್ಯಕ್ರಮಗಳು ನಡೆಯಬೇಕು. ಕೊಡವ ಪದ್ದತಿ ಪರಂಪರೆಗೆ ತನ್ನದೆ ಆದ ವಿಶೇಷ ಗೌರವಿದ್ದು ಈ ಗೌರವವನ್ನು ಶಾಶ್ವತವಾಗಿ ಉಳಿಸುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಕೊಡವ ಸಾಂಪ್ರದಾಯಿಕ ನೃತ್ಯ, ಉಮ್ಮತ್ತಾಟ್, ಬೊಳಕಾಟ್, ಕೋಲಾಟ್, ಪರಿಯಕಳಿ, ದುಡಿಕೊಟ್ಟ್ ಪಾಟ್, ಪುತ್ತರಿ ಪಾಟ್ ಗಮನ ಸೆಳೆದವು. ಮಹಿಳೆಯರಿಂದ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ವೇದಿಕೆಯಲ್ಲಿ ಅಮ್ಮತ್ತಿ ಕೊಡವ ಸಮಾಜದ ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು.
ಕೊಡವ ಸಮಾಜದ ನಿರ್ದೇಶಕಿ ಕುಟ್ಟಂಡ ರೀಟಾ ಚಿಣ್ಣಪ್ಪ ಪ್ರಾರ್ಥಿಸಿ, ಅಧ್ಯಕ್ಷರಾದ ಐನಂಡ ಪ್ರಕಾಶ್ ಸ್ವಾಗತಿಸಿ, ನಿರ್ದೇಶಕಿ ಕೋಡಿಮಣಿಯಂಡ ಅಶ್ವಿನಿ ಗಣಪತಿ ನಿರೂಪಿಸಿ, ಕಾರ್ಯದರ್ಶಿ ಪಟ್ಟಡ ಧನು ಉತ್ತಯ್ಯ ವಂದಿಸಿದರು. ಸುತ್ತಮುತ್ತಲಿನ ಕೊಡವ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.