ಮಡಿಕೇರಿ, ಡಿ. ೧೭: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿರುವ ಕಾಫಿ ಸಂಶೋಧನಾ ಸಂಸ್ಥೆಗೆ ೧೦೦ ವರ್ಷ ತುಂಬಿದ ಹಿನ್ನೆಲೆ ತಾ. ೨೦ ರಿಂದ ೨೨ ರ ತನಕ ಶತಮಾನೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಭಾರತೀಯ ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೨೦ ರಂದು ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ನೆರವೇರಿಸಲಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರ ಖಾತೆ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ವಾಣಿಜ್ಯ ರಾಜ್ಯ ಸಚಿವ ಜತಿನ್ ಪ್ರಸಾದ್, ಇಂಧನ ಸಚಿವ ಕೆ.ಜೆ. ಜಾರ್ಜ್, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಂಸದರುಗಳಾದ ಕೋಟಾ ಶ್ರೀನಿವಾಸ್ ಪೂಜಾರಿ, ಯದುವೀರ್ ಒಡೆಯರ್, ಕಾಫಿ ಮಂಡಳಿ ಅಧ್ಯಕ್ಷ ವಿ.ಜಿ. ದಿನೇಶ್, ಚಿಕ್ಕಮಗಳೂರು ಹಾಗೂ ಕೊಡಗಿನ ಶಾಸಕರು ಭಾಗವಹಿಸಲಿದ್ದಾರೆ. ಈ ವೇಳೆ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಹಾಗೂ ವನ್ಯಜೀವಿ - ಮಾನವ ಸಂಘರ್ಷದ ಕುರಿತು ಜನಪ್ರತಿನಿಧಿಗಳ ಗಮನ ಸೆಳೆಯಲಾಗುವುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮಕ್ಕೆ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇದೆ. ಕಾಫಿ ಉತ್ಪಾದನೆ ಹೆಚ್ಚಳಗೊಳಿಸುವ ಗುರಿಯನ್ನು ಹೊಂದಲಾಗಿದೆ. ಮೂರು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಉಪನ್ಯಾಸ, ಕಾರ್ಯಾಗಾರ, ತಂತ್ರಜ್ಞಾನದ ಪ್ರಾತ್ಯಕ್ಷಿತೆಯೊಂದಿಗೆ ೧೮ ವರ್ಷಗಳ ನಂತರ ೨ ಹೊಸ ಅರೇಬಿಕಾ ಕಾಫಿ ತಳಿಗಳನ್ನು ಬಿಡುಗಡೆ ಮಾಡಲಾಗುವುದು. ಈ ಪೈಕಿ ೧ ಬೋರರ್ ನಿರೋಧಕವಾಗಿದೆ. ಇದುವರೆಗೆ ಕಾಫಿ ಸಂಶೋಧನಾ ಕೇಂದ್ರದಿAದ ೧೬ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದು, ಚಂದ್ರಗಿರಿ ಅತ್ಯಂತ ಪ್ರಸಿದ್ಧಿ ಪಡೆದಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ದೇಶದ ೧೦೦ ಸಾಧಕ ಕಾಫಿ ಬೆಳೆಗಾರರನ್ನು ಸನ್ಮಾನಿಸಲಾಗುವುದು. ಈ ಪೈಕಿ ಸುಂಟಿಕೊಪ್ಪದ ಬೋಸ್ ಮಂದಣ್ಣ, ಸೋಮವಾರಪೇಟೆಯ ಸಾಕಮ್ಮ, ಗುಂಡಿಕುಟ್ಟಿ ಎಸ್ಟೇಟ್ನ ಮಂಜುನಾಥ್, ಪಾಲಿಬೆಟ್ಟದ ಅಪ್ಪಯ್ಯ, ಶ್ರೀಮಂಗಲದ ಡಾಲಿ ಚಂಗಪ್ಪ ಹಾಗೂ ಕುಟ್ಟ ಗ್ರಾಮದ ಬೊಳ್ಳೆರ ಚಂಗಪ್ಪ ಅವರು ಸನ್ಮಾನಕ್ಕೆ ಭಾಜನರಾಗಲಿದ್ದಾರೆ. ಇದೇ ವೇಳೆ ಸನ್ಮಾನಿತರ ಹೆಸರಿನಲ್ಲಿ ಪುಸ್ತಕ ಬಿಡುಗಡೆ ಮಾಡಲಾಗುವುದು. ಕಾಫಿ ಕೃಷಿಕರಿಗೆ ಇದು ಉಪಯುಕ್ತ ಕಾರ್ಯಕ್ರಮವಾಗಿದ್ದು, ಕೊಡಗಿನ ಬೆಳೆಗಾರರು ಭಾಗವಹಿಸುವಂತೆ ಮನವಿ ಮಾಡಿದರು. ಗೋಷ್ಠಿಯಲ್ಲಿ ಕಾಫಿ ಮಂಡಳಿಯ ವಿಸ್ತರಣಾಧಿಕಾರಿಗಳಾದ ಕೆ.ಪಿ. ಸನೀಶ್, ಎಂ. ಸಜೀನ ಹಾಜರಿದ್ದರು.