ನಾಪೋಕ್ಲು, ಡಿ. ೧೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಿಕೇರಿ ತಾಲೂಕಿನ ಜ್ಞಾನ ವಿಕಾಸ ಕಾರ್ಯಕ್ರಮದ ಪ್ರಯುಕ್ತ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಮಡಿಕೇರಿಯ ಮೈತ್ರಿ ಸಭಾಂಗಣದಲ್ಲಿ ನಡೆಯಿತು.
ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಉದ್ಘಾಟನೆಯನ್ನು ನಗರಸಭೆ ಅಧ್ಯಕ್ಷೆ ಕಲಾವತಿ ಪಿ. ಅವರು ನೆರವೇರಿಸಿ ಮಾತನಾಡಿ, ಮಹಿಳೆಯರು ಸಮಾಜಮುಖಿ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಇಂತಹ ವಿಚಾರಗೋಷ್ಠಿ ಕಾರ್ಯಕ್ರಮ ಮಾಹಿತಿ ಅತ್ಯಗತ್ಯ ಎಂದು ಹೇಳಿದರು. ಜಿಲ್ಲಾ ನ್ಯಾಯಾಲಯದ ವಕೀಲೆ ಮೀನಾ ಕುಮಾರಿ ನೊಂದ ಮಹಿಳೆಗೆ ಕಾನೂನಿನಲ್ಲಿ ಸಿಗುವ ನ್ಯಾಯದ ಬಗ್ಗೆ, ಬಾಲ್ಯ ವಿವಾಹದ ಬಗ್ಗೆ, ಹೆಣ್ಣು ಮಕ್ಕಳಿಗೆ ಶಿಕ್ಷಣದ ಮೌಲ್ಯದ ಕುರಿತು ಮಹಿಳಾ ಸಹಾಯವಾಣಿಯ ಕುರಿತು ಮಾಹಿತಿ ನೀಡಿದರು.
ಪ್ರಾಸ್ತಾವಿಕವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಿಕೇರಿ ತಾಲೂಕಿನ ಯೋಜನಾಧಿಕಾರಿ ಪುರುಷೋತ್ತಮ್ ಮಾತನಾಡಿ, ಯೋಜನೆಯ ಹಿನ್ನೆಲೆ ಬಗ್ಗೆ ವಿವರಿಸಿದರು. ತಳೂರು ಉಷಾಕಾಶಿ ಮಾತನಾಡಿ, ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವಲ್ಲಿ ಮಹಿಳೆ ಮತ್ತು ಪೋಷಕರ ಪಾತ್ರದ ಬಗ್ಗೆ ತಿಳಿಸಿದರು.
ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹೂಗುಚ್ಛ, ರಂಗೋಲಿ, ಛದ್ಮವೇಷ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಅತಿಥಿಗಳು ಬಹುಮಾನವನ್ನು ನೀಡಿ ಶುಭ ಹಾರೈಸಿದರು. ಕೇಂದ್ರದ ಸದಸ್ಯರಿಂದ ಸ್ವ-ಉದ್ಯೋಗಕ್ಕೆ ಸಂಬAಧಿಸಿದAತೆ ಸ್ಟಾಲ್ ಹಾಕಲಾಗಿತ್ತು. ಕಾರ್ಯಕ್ರಮದಲ್ಲಿ ಹರಿಣಿ ಪ್ರಾರ್ಥಿಸಿ, ಸೇವಾಪ್ರತಿನಿಧಿ ಚಿತ್ರ ಸ್ವಾಗತಿಸಿ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಾಲಿನಿ ನಿರೂಪಿಸಿ, ಯಶೋಧ ವಂದಿಸಿದರು.